More

    ಪಿಪಿಇ ಕಿಟ್ ಧರಿಸಿ ಮೃತ ವ್ಯಕ್ತಿಗೆ ಅಂತ್ಯಸಂಸ್ಕಾರ

    ಬ್ಯಾಡಗಿ: ಕಿಡ್ನಿ ವೈಫಲ್ಯದಿಂದ ಮೃತಪಟ್ಟ ವ್ಯಕ್ತಿಯೊಬ್ಬನಿಗೆ ಗ್ರಾ.ಪಂ. ಅಧ್ಯಕ್ಷ, ಪಿಡಿಒ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಪಿಪಿಇ ಕಿಟ್ ಧರಿಸಿ ಅಂತ್ಯ ಸಂಸ್ಕಾರ ನಡೆಸಿದ ಘಟನೆ ತಾಲೂಕಿನ ಹೆಡಿಗ್ಗೊಂಡ ಗ್ರಾಮದಲ್ಲಿ ಗುರುವಾರ ಜರುಗಿದೆ.

    ಗ್ರಾಮದ ಪ್ರಲ್ಹಾದ್ ಹುಚ್ಚಪ್ಪ ಗೋಣಿ (40) ಎಂಟು ದಿನಗಳ ಹಿಂದೆ ಕಿಡ್ನಿ ವೈಫಲ್ಯದಿಂದ ಹಾವೇರಿಯ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಬುಧವಾರ ರಾತ್ರಿ ಮೃತಪಟ್ಟಿದ್ದರು.

    ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಸ್ಪತ್ರೆಯು ಮೃತನ ಗಂಟಲ ದ್ರವವನ್ನು ಪರೀಕ್ಷೆಗೆ ಕಳಿಸಿತ್ತು. ಗುರುವಾರ ಪರೀಕ್ಷಾ ವರದಿ ಲಭ್ಯವಾಗದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಶವಸಂಸ್ಕಾರದ ವೇಳೆ ಜಾಗೃತಿ ವಹಿಸಿದೆ. ಆಂಬುಲೆನ್ಸ್​ನಲ್ಲಿ ಶವ ತಂದ ಆರೋಗ್ಯ ಇಲಾಖೆ ಸಿಬ್ಬಂದಿ, ಇಲಾಖೆ ನಿರ್ದೇಶನ ಪಾಲಿಸಲು ಗ್ರಾಮದ ಮುಖಂಡರಿಗೆ ತಿಳಿಸಿದರು.

    ಕುಟುಂಬದವರು ಹಾಗೂ ಗ್ರಾಮಸ್ಥರು ಶವ ಸಂಸ್ಕಾರ ನಡೆಸಲು ಹಿಂಜರಿದ ಹಿನ್ನೆಲೆಯಲ್ಲಿ ಗ್ರಾಪಂ ಅಧ್ಯಕ್ಷ ಸಹದೇವಪ್ಪ ಬನ್ನಿಹಟ್ಟಿ, ಪಿಡಿಒ ರಮೇಶ ಹುಲಸೋಗಿ ಹಾಗೂ ಆಂಬುಲೆನ್ಸ್ ಸಿಬ್ಬಂದಿ ಪಿಪಿಇ ಕಿಟ್ ಧರಿಸಿ ಶವಸಂಸ್ಕಾರ ನೆರವೇರಿಸಿದರು. ಮೃತನ ಬೆರಳಣಿಕೆಯಷ್ಟು ಸಂಬಂಧಿಕರು ಸ್ಮಶಾನಕ್ಕೆ ಆಗಮಿಸಿದರೂ ಬಹುದೂರಲ್ಲಿ ನಿಂತು ವೀಕ್ಷಿಸಿದರು.

    ಘಟನೆ ತಿಳಿದು ಗ್ರಾಮಕ್ಕೆ ದೌಡಾಯಿದ ತಹಸೀಲ್ದಾರ್ ಶರಣಮ್ಮ ಕಾರಿ, ಟಿಇಒ ಎ.ಟಿ. ಜಯಕುಮಾರ, ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಆರ್.ಲಮಾಣಿ ಭೇಟಿ ನೀಡಿ, ಕೋವಿಡ್-19 ನಿಯಮದಂತೆ ಶವಸಂಸ್ಕಾರಕ್ಕೆ ಸೂಚಿಸಿದರಲ್ಲದೆ, ಗ್ರಾಮದಲ್ಲಿ ಔಷಧ ಸಿಂಪಡಣೆ ಮಾಡುವಂತೆ ತಿಳಿಸಿದರು.

    248 ಜನರ ಗಂಟಲ ಮಾದರಿ ಪರೀಕ್ಷೆಗೆ: ಕರೊನಾ ಲಕ್ಷಣಗಳ ಆಧಾರದ ಮೇಲೆ ಗುರುವಾರ 248 ಜನರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, 248 ಜನರ ವರದಿಗಳೂ ನೆಗೆಟಿವ್ ಬಂದಿವೆ ಎಂದು ಪ್ರಭಾರ ಡಿಎಚ್​ಒ ಡಾ. ಎಂ. ಜಯಾನಂದ ತಿಳಿಸಿದ್ದಾರೆ.

    ಹಾವೇರಿ ಜಿಲ್ಲೆಯಲ್ಲಿ ಒಟ್ಟು 21 ಕರೊನಾ ಪ್ರಕರಣ ದೃಢಪಟ್ಟಿದ್ದು, ಇವರ ಪ್ರಥಮ, ದ್ವಿತೀಯ ಸಂಪರ್ಕದಲ್ಲಿರುವ 506 ಜನರನ್ನು ಕ್ವಾರಂಟೈನ್​ನಲ್ಲಿಟ್ಟು ನಿಗಾ ವಹಿಸಲಾಗಿದೆ. ಕರೊನಾ ಲಕ್ಷಣಗಳ ಆಧಾರ ಮೇಲೆ ಈವರೆಗೆ ಒಟ್ಟು 8,072 ಜನರ ಗಂಟಲ ದ್ರವದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. 8,002 ಜನರ ವರದಿ ನೆಗೆಟಿವ್ ಬಂದಿವೆ. ಈವರೆಗೆ 21 ಸೋಂಕಿತರಲ್ಲಿ 14 ಜನ ಗುಣವಾಗಿ ಬಿಡುಗಡೆ ಹೊಂದಿದ್ದಾರೆ. ಏಳು ಪ್ರಕರಣ ಸಕ್ರಿಯವಾಗಿವೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts