More

    ಪಿಎಸ್​ಐ ಬಡಿಗೇರ ವರ್ಗಾವಣೆ ರದ್ದುಗೊಳಿಸಿ

    ರಾಣೆಬೆನ್ನೂರ: ತಾಲೂಕಿನ ಹಲಗೇರಿ ಪೊಲೀಸ್ ಠಾಣೆ ಪಿಎಸ್​ಐ ಸಿದ್ಧಾರೂಢ ಬಡಿಗೇರ ಅವರ ವರ್ಗಾವಣೆ ಖಂಡಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಹಲಗೇರಿ ವ್ಯಾಪ್ತಿಯ ಗ್ರಾಮಗಳ ಜನರು ಸೋಮವಾರ ನಗರದ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು.

    ಅಕ್ರಮ ಮದ್ಯ ಮಾರಾಟ ತಡೆಯಲು ಮುಂದಾದ ಪಿಎಸ್​ಐ ಅವರನ್ನು ದಿಢೀರ್ ವರ್ಗಾವಣೆ ಮಾಡಿರುವುದು ಸೂಕ್ತವಲ್ಲ ಎಂದು ಆರೋಪಿಸಿ ಸ್ಥಳೀಯ ಶಾಸಕರು ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೊಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೆ ಪಿಎಸ್​ಐ ವರ್ಗಾವಣೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

    ರೈತ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿ, ಮದ್ಯದ ಹಾವಳಿಯಿಂದ ರಾತ್ರಿ ಸಮಯದಲ್ಲಿ ಗ್ರಾಮೀಣ ಭಾಗದಲ್ಲಿ ಗಲಾಟೆಗಳು ಹೆಚ್ಚಾಗುತ್ತಿವೆ. ಎಷ್ಟೋ ಕುಟುಂಬಗಳು ಬೀದಿಗೆ ಬರುವ ಸ್ಥಿತಿಗೆ ತಲುಪಿವೆ. ಇದನ್ನು ತಪ್ಪಿಸುವ ಉದ್ದೇಶದಿಂದ ಪಿಎಸ್​ಐ ಕಾನೂನು ಪ್ರಕಾರ ಕ್ರಮ ಜರುಗಿಸಲು ಮುಂದಾಗಿದ್ದರು. ಆದರೆ, ಅಕ್ರಮ ಮದ್ಯ ಮಾರಾಟಗಾರರು ಹಾಗೂ ಸ್ಥಳೀಯ ಶಾಸಕರು ಅವರನ್ನು ವರ್ಗಾವಣೆ ಮಾಡಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಗೃಹ ಸಚಿವರು ಹಾಗೂ ಸ್ಥಳೀಯ ಶಾಸಕರು ಕೂಡಲೆ ಸೂಕ್ತ ಕ್ರಮ ಕೈಗೊಂಡು ಪಿಎಸ್​ಐ ವರ್ಗಾವಣೆ ಆದೇಶ ರದ್ದುಪಡಿಸಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ಮಹಿಳೆಯರು, ಮಕ್ಕಳು ಸಮೇತ ಆಗಮಿಸಿ ಬಸ್ ನಿಲ್ದಾಣದ ವೃತ್ತದಲ್ಲಿ ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಶಿರಸ್ತೇದಾರ್ ಎಂ.ಎನ್. ಹಾದಿಮನಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ಹಲಗೇರಿ ವ್ಯಾಪ್ತಿಯ ವಿವಿಧ ಗ್ರಾಮಗಳ ಮುಖಂಡರಾದ ಹನುಮಂತಪ್ಪ ಕಬ್ಬಾರ, ದಿಳ್ಳೆಪ್ಪ ಸತ್ಯಪ್ಪನವರ, ಗೋವಿಂದರೆಡ್ಡಿ ಚಳಗೇರಿ, ಶಿವನಗೌಡ ಇಂಡೇರ, ಈರಣ್ಣ ಹೆಡಿಯಾಲ, ಬಸವರಾಜ ಹನುಮಾಪುರ, ಲೋಕನಗೌಡ ಪಾಟೀಲ, ಮಲ್ಲಣಗೌಡ ಪಾಟೀಲ, ರಾಜು ಮುಡಣ್ಣನವರ, ಖಂಡೆಪ್ಪ ಮರಡೆಣ್ಣನವರ, ಬಸಪ್ಪ ದ್ಯಾಮಣ್ಣನವರ, ಕುಮಾರ ಬಂಗಾರಿ, ಶಂಕರಣ್ಣ ತೋಟದ, ಮಂಜುನಾಥ ಬಾಳನವರ ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts