More

    ಪಾಸ್ ಇಲ್ಲದೆ ಮುಂಬೈಗೆ 3 ಬಾರಿ ಹೋಗಿ ಬಂದ!

    ಹಾವೇರಿ: ಕರೊನಾ ಸೋಂಕಿತ (ಪಿ. 853) ವ್ಯಕ್ತಿಯೊಬ್ಬರು ಜಿಲ್ಲೆಯ ಅಧಿಕಾರಿಗಳಿಂದ ಯಾವುದೇ ಪಾಸ್ ಪಡೆಯದೇ 3 ಬಾರಿ ಮುಂಬೈಗೆ ಹೋಗಿ ಬಂದಿರುವುದು ಬೆಳಕಿಗೆ ಬಂದಿದೆ.

    ಜನ ಸಾಮಾನ್ಯರು ತಮ್ಮ ತುರ್ತು ಕಾರ್ಯಗಳಿಗೆ ಜಿಲ್ಲೆಯ ಗಡಿ ದಾಟಲು ಪಾಸ್​ಗಾಗಿ ಅರ್ಜಿ ಸಲ್ಲಿಸಿ ಮೂರ್ನಾಲ್ಕು ದಿನ ಅಲೆದಾಡಬೇಕು. ಆದರೆ, ರೈತರ ಉತ್ಪನ್ನದ ನೆಪದಲ್ಲಿ ಜಿಲ್ಲೆ ಮಾತ್ರವಲ್ಲದೆ, ರಾಜ್ಯದ ಗಡಿ ದಾಟಲೂ ಯಾವುದೇ ಪಾಸ್ ಬೇಕಿಲ್ಲ ಎಂಬಂಥ ಪರಿಸ್ಥಿತಿ ತಲೆದೋರಿದೆ. ಬರೀ ರೈತರ ಫಸಲು ಲಾರಿಯಲ್ಲಿದ್ದರೆ ಸಾಕು, ಅದೇ ಪಾಸ್ ಎಂಬಂತಾಗಿದೆ.

    ರೈತರ ಉತ್ಪನ್ನಗಳನ್ನು ರಾಜ್ಯದೆಲ್ಲೆಡೆ ಸಾಗಿಸಲು ಕೃಷಿ ಸಚಿವರೇ ಗ್ರೀನ್ ಪಾಸ್ ಕೊಡಿಸಿದ್ದಾರೆ. ರಾಜ್ಯದಿಂದ ಹೊರ ರಾಜ್ಯಕ್ಕೆ ಉತ್ಪನ್ನ ಸಾಗಿಸಲು ಕೃಷಿ ಇಲಾಖೆಯ ಪಾಸ್ ನಡೆಯೊಲ್ಲ. ಅದಕ್ಕೆ ಜಿಲ್ಲಾಧಿಕಾರಿಗಳೇ ಪಾಸ್ ಕೊಡಬೇಕು. ಅಂದಲಗಿಯ ಸೋಂಕಿತ ಇದ್ಯಾವುದನ್ನೂ ಪಡೆಯದೇ ಏ. 23ರಿಂದ ಮೇ 1ರ ಅವಧಿಯಲ್ಲಿ ಮೂರು ಬಾರಿ ಮುಂಬೈಗೆ ಹೋಗಿ ಮಾವಿನಕಾಯಿ ಸಾಗಿಸಿ ಬಂದಿದ್ದಾನೆ. ಜತೆಗೆ ಕರೊನಾ ಸೋಂಕನ್ನು ಹೊತ್ತು ತಂದಿದ್ದಾನೆ. ಜತೆಗೆ ಮಹಾರಾಷ್ಟ್ರ ರಾಜ್ಯಕ್ಕೆ ಹೋಗಲು ಯಾವುದೇ ಪಾಸ್ ಅನ್ನು ಜಿಲ್ಲಾಡಳಿತ ನೀಡಿಲ್ಲ ಎಂಬುದು ವಿಚಿತ್ರವಾಗಿದೆ. ಯಾವುದೇ ಪಾಸ್ ಇಲ್ಲದೆ ಹಾವೇರಿ, ಧಾರವಾಡ, ಬೆಳಗಾವಿ ಜಿಲ್ಲೆಗಳ ಗಡಿಗಳನ್ನು ಹೇಗೆ ದಾಟಿದ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.

    ಮೊದಲು ಪತ್ತೆಯಾದ ಇಬ್ಬರು ಸೋಂಕಿತರು ಅಷ್ಟೇನು ಸಂಚಾರ ನಡೆಸದ ಕಾರಣ ಪ್ರಾಥಮಿಕ ಸಂರ್ಪತರ ಸಂಖ್ಯೆ ಹತೋಟಿಯಲ್ಲಿದೆ. ಆದರೆ, ಪಿ. 853 ಪ್ರಕರಣ ಸಂಖ್ಯೆಯ ವ್ಯಕ್ತಿಯು ಸಾಕಷ್ಟು ಸಂಚಾರ ನಡೆಸಿದ್ದಾನೆ. ಹೀಗಾಗಿ, ಹಾನಗಲ್ಲ, ಶಿಗ್ಗಾಂವಿ ತಾಲೂಕಿನ ಹತ್ತಾರು ಹಳ್ಳಿಗಳಲ್ಲಿ ಭೀತಿ ಆವರಿಸಿದೆ. ಸೋಂಕಿತನೊಂದಿಗೆ ಸಂಪರ್ಕ ಹೊಂದಿದವರ ಪತ್ತೆಗೆ ಅಧಿಕಾರಿಗಳು ಮುಂದಾಗಿದ್ದಾರೆ.

    ಕರೆ ಸ್ವೀಕರಿಸದ ಜಿಲ್ಲಾಧಿಕಾರಿ

    ಮುಂಬೈಗೆ ಮಾವಿನಕಾಯಿ ಸಾಗಿಸಲು ಪಿ. 853ಗೆ ಯಾವುದೇ ಪಾಸ್ ಕೊಟ್ಟಿಲ್ಲ ಎಂದು ಎಡಿಸಿ ಯೋಗೇಶ್ವರ ಅವರು ತಿಳಿಸಿದ್ದರು. ಪಾಸ್ ಇಲ್ಲದೆ 3 ಬಾರಿ ಮುಂಬೈಗೆ ಲಾರಿಯನ್ನು ಪಿ. 853 ಹೇಗೆ ತೆಗೆದುಕೊಂಡು ಹೋದ ಎಂಬುದರ ಬಗ್ಗೆ ಮಾಹಿತಿ ಕೇಳಲು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಅವರಿಗೆ ಕರೆ ಮಾಡಿದರೆ ಕರೆ ಸ್ವೀಕರಿಸಲಿಲ್ಲ.

    ರೈತರಿಗೆ ರಾಜ್ಯದಲ್ಲಿ ಕೃಷಿ ಚಟುವಟಿಕೆಗಳಿಗೆ ಸಮಸ್ಯೆಯಾಗಬಾರದು ಎಂಬ ಉದ್ದೇಶದಿಂದ ಲಾಕ್​ಡೌನ್ ಆರಂಭದಲ್ಲಿ ಗ್ರೀನ್ ಪಾಸ್ ವ್ಯವಸ್ಥೆ ಮಾಡಲಾಗಿತ್ತು. ಜೋನ್ ವಿಂಗಡಣೆ ನಂತರ ಸ್ಥಳೀಯ ಅಧಿಕಾರಿಗಳೇ ಪಾಸ್ ಕೊಡುತ್ತಿದ್ದರು. ಅಲ್ಲದೆ, ಕೆಲವೆಡೆ ರೈತರ ಟ್ರ್ಯಾಕ್ಟರ್​ಗಳನ್ನು ತಡೆಯುವ ದೂರು ಬರುತ್ತಿದ್ದವು. ಹೀಗಾಗಿ, ಜಿಲ್ಲೆಯ ಗಡಿಯೊಳಗೆ ರೈತರಿಗೆ ಯಾವುದೇ ಪಾಸ್ ಇಲ್ಲದಿದ್ದರೂ ಸಂಚಾರಕ್ಕೆ ಅವಕಾಶ ನೀಡಿ ಎಂದು ಹೇಳಿದ್ದೆ. ರಾಜ್ಯದ ಗಡಿ ದಾಟಲು ಹೇಳಿಲ್ಲ. ಯಾವುದೇ ವಾಹನಗಳು ರಾಜ್ಯದ ಗಡಿ ದಾಟಲು, ಪ್ರವೇಶಿಸಲು ಗ್ರೀನ್ ಪಾಸ್ ನಡೆಯೊಲ್ಲ. ಜಿಲ್ಲಾಧಿಕಾರಿ ಪಾಸ್ ಬೇಕು.

    | ಬಿ.ಸಿ. ಪಾಟೀಲ, ಕೃಷಿ ಸಚಿವ

    ಕರೊನಾ ನಿಯಂತ್ರಣಕ್ಕಾಗಿ ಚೆಕ್​ಪೋಸ್ಟ್​ಗಳನ್ನು ಭದ್ರಗೊಳಿಸಿ, ಸಿಸಿ ಕ್ಯಾಮರಾ ಅಳವಡಿಸಿ, ತಪಾಸಣೆ ನಡೆಸದೇ ಯಾರನ್ನೂ ಒಳಗಡೆ ಬಿಡಬೇಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು ಜಿಲ್ಲೆಯ ಮೇಲಧಿಕಾರಿಗಳಿಗೆ ಪದೇಪದೆ ಸೂಚಿಸಿದ್ದರು. ಜಿಲ್ಲೆಗೆ ಕರೊನಾ ಬರಬಾರದು ಎಂದು ನಾವೆಲ್ಲ ಒಂದೂವರೆ ತಿಂಗಳಿಂದ ಮನೆಯಲ್ಲಿದ್ದೇವೆ. ಇದೀಗ ಹೊರಗಿನಿಂದ ಬಂದವರಿಂದಾಗಿ ಶಿಗ್ಗಾಂವಿ, ಸವಣೂರಿಗೆ ಕರೊನಾ ವಕ್ಕರಿಸಿದೆ. ಜನರಲ್ಲಿ ಭೀತಿಯೂ ಹೆಚ್ಚಾಗಿದೆ. ಚೆಕ್ ಪೋಸ್ಟ್​ನಲ್ಲಿ ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಸರ್ಕಾರ ಕ್ರಮ ಜರುಗಿಸಬೇಕು.

    | ಗಂಗಾಧರ ಗಡ್ಡಿ, ಅನ್ನದಾತ ರೈತ ಹೋರಾಟ ಸಮಿತಿ ಅಧ್ಯಕ್ಷ ಶಿಗ್ಗಾಂವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts