More

    ಪಾಳು ಬಿದ್ದ ಹಳೇ ಆಸ್ಪತ್ರೆ ಕಟ್ಟಡ

    ನರೇಗಲ್ಲ: ಕಳೆದ 60 ವರ್ಷಗಳಿಂದ ನಿತ್ಯ ನೂರಾರು ಜನರಿಗೆ ಆರೋಗ್ಯ ಸೇವೆ ನೀಡುತ್ತ, ರೋಗಿಗಳಿಂದ ತುಂಬಿರುತ್ತಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಇಂದು ಪಾಳು ಬಿದ್ದಿದೆ. ನೂರಾರು ರೋಗಿಗಳಿಗೆ ಜೀವದಾನ ಮಾಡಿದ ಆಸ್ಪತ್ರೆಯ ಕಟ್ಟಡ ಇಂದು ಬಿಕೋ ಎನ್ನುತ್ತಿದೆ. ಆಸ್ಪತ್ರೆ ಒಳಾಂಗಣದಲ್ಲಿ ದೂಳು ಮತ್ತು ಕಸದ ರಾಶಿ ತುಂಬಿದೆ. ಹೊಸ ಕಟ್ಟಡಕ್ಕೆ ಆಸ್ಪತ್ರೆ ಸ್ಥಳಾಂತರಗೊಂಡ ನಂತರ ಹಳೆಯ ಕಟ್ಟಡವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಅಲ್ಲದೆ, ಕಟ್ಟಡ ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿದೆ.

    ಸಮೀಪದ ನಿಡಗುಂದಿ ಗ್ರಾಮದ ಬಸವನಾಯಕ ಪರಮಣ್ಣವರ 1 ಎಕರೆ ಜಮೀನನ್ನು ಆಸ್ಪತ್ರೆಗಾಗಿ ದಾನ ನೀಡಿದ ಫಲವಾಗಿ 1962ರಲ್ಲಿ ಅಂದಿನ ಶಾಸಕ ಅಂದಾನಪ್ಪ ದೊಡ್ಡಮೇಟಿಯವರು ಆಸಕ್ತಿ ವಹಿಸಿ, ಮೈಸೂರು ಸರ್ಕಾರದ ಅನುದಾನದಲ್ಲಿ 7 ಕೊಠಡಿಗಳ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಲಾಗಿತ್ತು.

    ಔಷಧ, ಶಸ್ತ್ರ ಚಿಕಿತ್ಸೆ ಕೊಠಡಿ, ಮಹಿಳಾ ಮತ್ತು ಪುರುಷರ ಕೊಠಡಿಗಳ ಬಾಗಿಲು ಮತ್ತು ಚಿಲಕಗಳು ತುಕ್ಕು ಹಿಡಿಯುತ್ತಿವೆ. ಕಿಟಕಿಯ ಗಾಜುಗಳು ಒಡೆದಿವೆ. ಶೌಚಗೃಹದ ಬಾಗಿಲು ಮುರಿದಿವೆ. ಕಲ್ಮಷ ನೀರು ಸಂಗ್ರಹವಾಗಿದೆ. ಹಗಲಲ್ಲೇ ಒಳಗೆ ಹೋಗಲು ಭಯ ಪಡುವಂತಹ ವಾತಾವರಣ ನಿರ್ವಣವಾಗಿದೆ. ಸೂಕ್ತ ನಿರ್ವಹಣೆ ಇಲ್ಲದೆ ಅವ್ಯವಸ್ಥೆ ಅಗರವಾಗಿದೆ. ಜೂಜಾಟ ಸೇರಿ ಅನೈತಿಕ ಚಟುವಟಿಕೆ ಹಾಗೂ ವಿಷ ಜಂತುಗಳ ತಾಣವಾಗಿದೆ. ಹಳೆಯ ಕಟ್ಟಡವನ್ನು ದುರಸ್ತಿ ಅಥವಾ ನೆಲಸಮಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

    ಹಳೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ಥಿತಿ: ಹಳೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತಮುತ್ತ ಮುಳ್ಳು ಪೊದೆಗಳು ಬೆಳೆದಿದ್ದರಿಂದ ಹಾವು, ಚೇಳು ಸೇರಿ ವಿಷ ಜಂತುಗಳ ಹಾವಳಿ ಹೆಚ್ಚಾಗಿದೆ. ಈ ಕಟ್ಟಡ ಕೂಡ ಸಮರ್ಪಕ ನಿರ್ವಹಣೆ ಇಲ್ಲದೆ ಸೊರಗಿದೆ.

    ನಿಡಗುಂದಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಹಳೆಯ ಕಟ್ಟಡ ಸದ್ಯ ಅನಾಥ ಸ್ಥಿತಿಗೆ ತಲುಪಿದೆ. ಇದರಿಂದ ನಿತ್ಯ ರಾತ್ರಿ ವೇಳೆಯಲ್ಲಿ ಕಿಡಿಗೇಡಿಗಳು ಅನೈತಿಕ ಚಟುವಟಿಕೆ ನಡೆಸುತ್ತಿದ್ದಾರೆ. ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿ ಕಟ್ಟಡ ದುರಸ್ತಿಗೊಳಿಸಬೇಕು ಅಥವಾ ನೆಲ ಸಮಗೊಳಿಸಿ ಸ್ಥಳದ ಉಪಯೋಗ ಮಾಡಿಕೊಳ್ಳಬೇಕು.
    | ರಮೇಶ ಗಡಾದ, ನಿಡಗುಂದಿ ಗ್ರಾಮಸ್ಥ

    ನಿಡಗುಂದಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಹಳೆಯ ಕಟ್ಟಡದ ದುರಸ್ತಿ ಹಾಗೂ ಹೊಸ ಕಟ್ಟಡಕ್ಕೆ ಕಾಂಪೌಡ್ ನಿರ್ವಣದ ಬಗ್ಗೆ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ಆರೋಗ್ಯ ಇಲಾಖೆಯ ಇಂಜಿನಿಯರ್​ಗಳು ಕಟ್ಟಡ ಸಾಮರ್ಥ್ಯವನ್ನು ಪರೀಕ್ಷಿಸಿ ದುರಸ್ತಿ ಅಥವಾ ನೆಲಸಮಗೊಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ.
    | ಡಾ. ಅಶ್ವಿನಿ ಕೊಪ್ಪದ, ವೈದ್ಯಾಧಿಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿಡಗುಂದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts