More

    ಪಾಳು ಬಿದ್ದ ನೀರಿನ ಘಟಕ

    ವೀರಯ್ಯಸ್ವಾಮಿ ಚೌಕೀಮಠ ಬ್ಯಾಡಗಿ

    ಸಾರ್ವಜನಿಕರಿಗೆ ಶುದ್ಧ ನೀರು ಒದಗಿಸಬೇಕಾದ ನೀರು ಶುದ್ಧೀಕರಣ ಘಟಕಗಳು ಪಟ್ಟಣದಲ್ಲಿ ನಿರ್ವಹಣೆ ಇಲ್ಲದೆ ಹಾಳುಬಿದ್ದಿದ್ದು, ಸರ್ಕಾರ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಅಗತ್ಯವೇನಿತ್ತು ಎಂದು ನಾಗರಿಕರು ಪ್ರಶ್ನೆ ಮಾಡುತ್ತಿದ್ದಾರೆ.

    ಎರಡು ವರ್ಷಗಳ ಹಿಂದೆ ಪಟ್ಟಣದ ಗಾಂಧಿನಗರ, ಅಗಸನಹಳ್ಳಿ, ಕೋಳೂರು ಕ್ಯಾಂಪ್, ಶಿವಪುರ ಬಡಾವಣೆ, ಬೆಟ್ಟದ ಮಲ್ಲೇಶ್ವರ ಬಡಾವಣೆ ಸೇರಿ ಐದು ವಾರ್ಡ್​ಗಳಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಪುರಸಭೆ ವತಿಯಿಂದ ನೀರು ಶುದ್ಧೀಕರಣ ಘಟಕ ನಿರ್ವಿುಸಲಾಗಿದೆ. ಆದರೆ, ಘಟಕಗಳ ತುಂಬೆಲ್ಲ ಕಸಕಡ್ಡಿ ಬೆಳೆದು ನಿಂತಿವೆ.

    ತುಕ್ಕು ಹಿಡಿಯುತ್ತಿರುವ ಯಂತ್ರ: ಪಟ್ಟಣದ ಐದು ಕಡೆ ನಿರ್ವಿುಸಿದ ನೀರು ಶುದ್ಧೀಕರಿಸುವ ಘಟಕಗಳ ಪೈಕಿ ಎರಡು ಮಾತ್ರ ಕಾರ್ಯನಿರ್ವಹಿಸುತ್ತಿದೆ. ಮೂರು ಘಟಕಗಳು ನಿರ್ವಹಣೆಯಿಲ್ಲದೆ ಹಾಳು ಬಿದ್ದಿವೆ. ಈ ಘಟಕ ನಿರ್ವಿುಸಲು 25 ಲಕ್ಷ ರೂ. ವೆಚ್ಚವಾಗಿದ್ದು, ಕಟ್ಟಡದ ಶಟರ್ಸ್ ಹಾಗೂ ಒಳಗಿನ ಯಂತ್ರಗಳು ಎರಡು ವರ್ಷಗಳಿಂದ ಬಳಕೆಯಿಲ್ಲದೆ ತುಕ್ಕು ಹಿಡಿಯುತ್ತಿವೆ. ಈಗ ಮತ್ತೆ ನೀರು ಶುದ್ಧೀಕರಿಸಬೇಕೆಂದರೆ ಹೊಸ ಯಂತ್ರಗಳನ್ನು ಅಳವಡಿಸಬೇಕಾದ ಅನಿವಾರ್ಯತೆ ಎದುರಾಗಿದೆ.

    ಖಾಸಗಿ ನಿರ್ವಹಣೆಗೆ ಕೊಡಿ: ಈ ಹಿಂದೆ ಕೊಳೂರು ಕ್ಯಾಂಪ್ ಘಟಕದ ವಿದ್ಯುತ್ ಬಿಲ್ ಪಾವತಿಸದ ಕಾರಣ ಘಟಕ ಸ್ಥಗಿತಗೊಂಡಿತ್ತು. ಪುನಃ ಯಂತ್ರ ಹಾಳಾದ ಪರಿಣಾಮ ಪುರಸಭೆ ದುರಸ್ತಿ ಮಾಡಿಸುವ ಗೋಜಿಗೆ ಹೋಗಲಿಲ್ಲ. ಬೆಟ್ಟದ ಮಲ್ಲೇಶ್ವರ ಬಡಾವಣೆ ಹಾಗೂ ಗಾಂಧಿ ನಗರದ ಯಂತ್ರಗಳು ಕೆಟ್ಟು ನಿಂತಿವೆ. ಪುರಸಭೆ ಸದಸ್ಯರು ಸಾಮಾನ್ಯ ಸಭೆಯಲ್ಲಿ ಠರಾವು ಪಾಸು ಮಾಡಿ, ಖಾಸಗಿ ಸಂಘ, ಸಂಸ್ಥೆ ಅಥವಾ ವ್ಯಕ್ತಿಗಳಿಗೆ ನೀರು ಶುದ್ಧೀಕರಿಸುವ ಘಟಕಗಳನ್ನು ನೀಡಿದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲಿದೆ.

    ಪಟ್ಟಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನೆಹರು ನಗರ, ಸಂಗಮೇಶ್ವರ ನಗರದಲ್ಲಿ ನಿರ್ವಿುಸಿದ ನೀರಿನ ಘಟಕಗಳು ಯಾವ ಅಡೆತಡೆಯಿಲ್ಲದೆ ನೀರು ಪೂರೈಸುತ್ತಿವೆ. ಆದರೆ, ಸರ್ಕಾರದ ಘಟಕಗಳು ಕೆಲಸ ನಿರ್ವಹಿಸುತ್ತಿಲ್ಲ. ಪುರಸಭೆಯಲ್ಲಿ ಇವುಗಳನ್ನು ನಿರ್ವಹಣೆ ಮಾಡಲು ಸಿಬ್ಬಂದಿ ಕೊರತೆಯಿದ್ದು, ಸಮರ್ಪಕವಾಗಿ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಾರ್ವಜನಿಕರೇ ಖಾಸಗಿಯವರಿಗೆ ಕೊಡಿ ಎಂದು ಆಗ್ರಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಪುರಸಭೆ ಕ್ರಮ ಕೈಗೊಳ್ಳಬೇಕಿದೆ.

    ಪಟ್ಟಣದಲ್ಲಿ ನಿರ್ವಿುಸಿದ ನೀರಿನ ಘಟಕಗಳು ಸಿಬ್ಬಂದಿ ಕೊರತೆ ಇತ್ಯಾದಿ ಕಾರಣಗಳಿಂದ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಶಿವಪುರ ಬಡಾವಣೆ, ಅಗಸನಹಳ್ಳಿ ವಾರ್ಡ್​ಗಳಲ್ಲಿ ಖಾಸಗಿಯವರಿಗೆ ನಿರ್ವಹಣೆ ಹೊಣೆ ನೀಡಿದ್ದೇವೆ. ಇನ್ನುಳಿದ ಮೂರು ಘಟಕಗಳನ್ನು ಖಾಸಗಿಯವರಿಗೆ ನೀಡಬೇಕಿದ್ದು, ಪುರಸಭೆ ಆಡಳಿತ ಮಂಡಳಿ ಸಮಸ್ಯೆಯಿಂದ ಸ್ಥಗಿತಗೊಂಡಿದೆ. ಮುಂಬರುವ ದಿನಗಳಲ್ಲಿ ಜನರಿಗೆ ಅನುಕೂಲ ಕಲ್ಪಿಸಲಾಗುವುದು. | ವಿ.ಎಂ.ಪೂಜಾರ, ಪುರಸಭೆ ಮುಖ್ಯಾಧಿಕಾರಿ

    ಬಡವರಿಗೆ ಶುದ್ಧೀಕರಿಸಿದ ನೀರು ಪೂರೈಸುವ ಉದ್ದೇಶದಿಂದ ಸರ್ಕಾರ ಶುದ್ಧೀಕರಣ ಘಟಕ ಆರಂಭಿಸಿತ್ತು. ಆದರೆ, ಗುತ್ತಿಗೆದಾರರ ಕಳಪೆ ಸಾಮಗ್ರಿ ಪೂರೈಕೆ ಹಾಗೂ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರು ಗುಣಮಟ್ಟದ ನೀರು ಪಡೆಯಲು ಸಾಧ್ಯವಾಗುತ್ತಿಲ್ಲ. | ಬಸವರಾಜ ಕರ್ಚಡ, ಸ್ಥಳೀಯ ನಾಗರಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts