More

    ಪಾಲಿಕೆ ಚುನಾವಣೆ, ನಾಯಕರಿಗೆ ಹೊಣೆ

    ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಗಡಿ ಜಿಲ್ಲೆಯಲ್ಲಿ ರಾಜಕೀಯ ಚುಟವಟಿಕೆ ಗರಿಗೆದರಿವೆ. ಈ ಬಾರಿ ಬಿಜೆಪಿ, ಕಾಂಗ್ರೆಸ್ ಪಕ್ಷದ ಚಿಹ್ನೆಯಡಿ ಸ್ಪರ್ಧಿಸಲು ನಿರ್ಧರಿಸಿದ್ದು ಚುನಾವಣಾ ಕಾವು ಇನ್ನಷ್ಟು ಏರಿದೆ.

    ವಾರ್ಡ್‌ಗಳ ಪುನರ್‌ವಿಂಗಡಣೆ ಮತ್ತು ಮೀಸಲಾತಿ ವಿಷಯದಲ್ಲಿ ಉಂಟಾದ ಸಮಸ್ಯೆಯಿಂದಾಗಿ 2019ರಿಂದ ಪಾಲಿಕೆಗೆ ಚುನಾವಣೆ ನಡೆದಿರಲಿಲ್ಲ. ಇದೀಗ ಚುನಾವಣಾ ಆಯೋಗವು ಆ.11ರಂದು ಚುನಾವಣೆ ನಡೆಸುವುದಾಗಿ ಘೋಷಿಸಿದ್ದು, ಸ್ಪರ್ಧಾಕಾಂಕ್ಷಿಗಳು, ಹಾಲಿ ಮತ್ತು ಮಾಜಿ ಶಾಸಕರ ಬೆಂಬಲಿಗರು ಟಿಕೆಟ್ ಪಡೆಯಲು ಕಸರತ್ತು ಆರಂಭಿಸಿದ್ದಾರೆ. ದಿನವೂ ಪಕ್ಷದ ಕಚೇರಿಗಳಿಗೆ ಅಲೆದಾಡುತ್ತ ವಿವಿಧ ಸಮುದಾಯದ ಮುಖಂಡರ ಮನವೊಲಿಸುವ ಯತ್ನದಲ್ಲಿ ನಿರತರಾಗಿದ್ದಾರೆ.

    ಕನ್ನಡಿಗನಿಗೆ ಮೇಯರ್ ಗಾದಿ: 1980ರಿಂದ 2014ರ ವರೆಗೆ ಪಾಲಿಕೆಗೆ ಜರುಗಿದ ಚುನಾವಣೆಗಳಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಬೆಂಬಲಿತ ಸದಸ್ಯರೇ ಗೆದ್ದು ಅಧಿಕಾರ ನಡೆಸಿದ್ದಾರೆ. ಕನ್ನಡ ಮತ್ತು ಉರ್ದು ಭಾಷಿಕ ಸದಸ್ಯರು ವಿರೋಧ ಪಕ್ಷದ ಸ್ಥಾನದಲ್ಲಿಯೇ ಇರುತ್ತಿದ್ದರು.

    2014ರಲ್ಲಿ ನಡೆದ ಚುನಾವಣೆಯಲ್ಲಿ ಎಂಇಎಸ್‌ನ 32 ಸದಸ್ಯರು, ಕನ್ನಡ ಮತ್ತು ಉರ್ದು ಭಾಷೆಯ 26 ಸದಸ್ಯರು ಸೇರಿ ಒಟ್ಟು 58 ಸದಸ್ಯರು ಚುನಾಯಿತರಾಗಿದ್ದರು. ಬಳಿಕ ಮೀಸಲಾತಿ ಬಲದಿಂದಾಗಿ ಕೊನೆಯ ಸಂದರ್ಭದಲ್ಲಿ ಕನ್ನಡ ಭಾಷಿಕ ಸದಸ್ಯನಿಗೆ ಮೇಯರ್ ಗಾದಿ ಒಲಿದಿತ್ತು.

    ಬದಲಾದ ರಾಜಕೀಯ ಚಿತ್ರಣ

    1996ರಲ್ಲಿ ಒಮ್ಮೆ ಬಿಜೆಪಿ ತನ್ನ ಕಮಲ ಚಿಹ್ನೆಯಡಿ ಸ್ಪರ್ಧಿಸಿತ್ತು. ಆದರೆ, ಮರಾಠಿಗರ ಭಾಷಾಭಿಮಾನ, ಗಡಿ ಸಮಸ್ಯೆ ಇನ್ನಿತರ ಕಾರಣಗಳಿಂದ ಗೆಲುವು ಸಾಧಿಸಲು ಆಗಿರಲಿಲ್ಲ. ಇದೀಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ 25 ವರ್ಷದ ಬಳಿಕ ಪಾಲಿಕೆ ಚುನಾವಣೆಗೆ ಮತ್ತೆ ಪಕ್ಷದ ಚಿಹ್ನೆಯಡಿ ಸ್ಪರ್ಧಿಸಲು ಬಿಜೆಪಿ ತೀರ್ಮಾನಿಸಿದೆ. ಕಾಂಗ್ರೆಸ್ ಸಹ ಪಕ್ಷದ ಚಿಹ್ನೆಯಡಿ ಚುನಾವಣೆ ಎದುರಿಸುವುದಾಗಿ ಘೋಷಿಸಿದೆ. ಪಾಲಿಕೆಯ ಪ್ರತಿ ಚುನಾವಣೆಯಲ್ಲೂ ಮರಾಠಿಗರ ಪ್ರಾಬಲ್ಯ ತಗ್ಗಿಸಲು ಹಾಗೂ ಕನ್ನಡ ಉಳಿಸಿ ಬೆಳಸುವ ನಿಟ್ಟಿನಲ್ಲಿ ಸ್ಥಳೀಯ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಪಕ್ಷದ ಚಿಹ್ನೆಯ ಬದಲಾಗಿ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸುತ್ತಿದ್ದರು. ಇದೀಗ ಎರಡೂ ರಾಷ್ಟ್ರೀಯ ಪಕ್ಷಗಳು ಸ್ಪರ್ಧಿಸುತ್ತಿರುವುದು ಈ ಬಾರಿಯ ವಿಶೇಷ.

    ಶಿವಸೇನೆ ನಡೆಗೆ ಎಂಇಎಸ್ ವಿರೋಧ

    ಮೂರು ರಾಜ್ಯಗಳ ಕೇಂದ್ರ ಸ್ಥಾನವಾಗಿರುವ ಬೆಳಗಾವಿ ಮಹಾನಗರ ಪಾಲಿಕೆಯ ಅಧಿಕಾರದ ಗದ್ದುಗೆಯ ಮೇಲೆ ಮಹಾರಾಷ್ಟ್ರದಲ್ಲಿರುವ ಶಿವಸೇನೆ ಮುಖಂಡರು ಕಣ್ಣಿಟ್ಟಿದ್ದಾರೆ. ಭಾಷೆ, ಗಡಿ ವಿಷಯ ಮುಂದಿಟ್ಟುಕೊಂಡು ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲು ವೇದಿಕೆ ರೂಪಿಸಿಕೊಳ್ಳುತ್ತಿದೆ. ಅಲ್ಲದೆ, ಅವಶ್ಯಕತೆ ಬಿದ್ದರೆ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳಲು ಯೋಜನೆ ಹಾಕಿಕೊಂಡಿದೆ. ಆದರೆ, ಶಿವಸೇನೆಯ ಈ ನಡೆಗೆ ಎಂಇಎಸ್ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇತ್ತ ಕಾಂಗ್ರೆಸ್‌ನ ಅಲ್ಪಸಂಖ್ಯಾತರ ಮುಖಂಡರು ಶಿವಸೇನೆ ಜತೆ ಮೈತ್ರಿಗೆ ಅಪಸ್ವರ ಎತ್ತಿದ್ದಾರೆ. ಹಾಗಾಗಿಯೇ ಕೈ ನಾಯಕರು ಸೋಮವಾರದವರೆಗೆ ಕಾದು ನೋಡುವ ತಂತ್ರ ಅನುಸರಿಸಿದ್ದಾರೆ.

    ನಮ್ಮ ಪಕ್ಷದ ವರಿಷ್ಠರೂ ಸಹ ಈ ಬಾರಿ ಕಾಂಗ್ರೆಸ್ ಚಿಹ್ನೆಯಡಿ ಪಾಲಿಕೆ ಚುನಾವಣೆ ಎದುರಿಸಲು ಆಸಕ್ತಿ ವಹಿಸಿದ್ದಾರೆ. ಈ ಕುರಿತು ಸ್ಥಳೀಯ ಮಟ್ಟದಲ್ಲಿ ಸಭೆ ನಡೆಸಿ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗಿದೆ. ಇನ್ನೆರಡು ದಿನದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕರ್ತರ ಸಭೆ ಜರುಗಲಿದೆ.
    | ವಿನಯ ನಾವಲಗಟ್ಟಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಬೆಳಗಾವಿ

    25 ವರ್ಷದ ಬಳಿಕ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಸ್ವತಂತ್ರವಾಗಿ ಪಕ್ಷದ ಚಿಹ್ನೆಯಡಿ ಸ್ಪರ್ಧಿಸುತ್ತಿದೆ. ಪಾಲಿಕೆಯಲ್ಲಿ ಈ ಬಾರಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯಲಿದೆ. ಚುನಾವಣೆಯಲ್ಲಿ ರಾಷ್ಟ್ರೀಯತೆ ಮತ್ತು ಅಭಿವೃದ್ಧಿಯೇ ನಮ್ಮ ಮುಖ್ಯ ವಿಷಯವಾಗಿವೆ.
    | ಉಜ್ವಲಾ ಬಡವನಾಚೆ. ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯದರ್ಶಿ, ಬೆಳಗಾವಿ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts