More

    ಪಾಲಿಕೆಯಲ್ಲಿ ತೆರಿಗೆ ಆಕ್ರೋಶ

    ಬೆಳಗಾವಿ: ವರ್ಷಗಳು ಕಳೆದರೂ ಮಹಾನಗರ ಪಾಲಿಕೆಗೆ ನೀರಿನ ತೆರಿಗೆ ಕಟ್ಟುತ್ತಿಲ್ಲ. ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆ ಕಾಮಗಾರಿಗೆ ಅವಕಾಶ ನೀಡುತ್ತಿಲ್ಲ. ಕೂಡಲೇ ದಂಡುಮಂಡಳಿ ಪ್ರದೇಶಕ್ಕೆ ಕುಡಿಯುವ ನೀರು ಪೂರೈಕೆ ಸ್ಥಗಿತಗೊಳಿಸುವಂತೆ ಶಾಸಕರು, ಪಾಲಿಕೆ ಸದಸ್ಯರು ಒತ್ತಾಯಿಸಿದರು.

    ನಗರದ ಪಾಲಿಕೆಯ ಸಭಾಂಗಣದಲ್ಲಿ ಸೋಮವಾರ ಪರಿಷ್ಕೃತ ಆಯವ್ಯಯ ಅಂದಾಜು ಪತ್ರಿಕೆ ಕುರಿತು ಚರ್ಚಿಸಲು ಆಯೋಜಿಸಿದ್ದ ವಿಶೇಷ ಪರಿಷತ್ ಸಭೆಯಲ್ಲಿ ನಗರ ಅಭಿವೃದ್ಧಿ ಕಾಮಗಾರಿಗಳಿಗೆ ಪದೇ ಪದೆ ಅಡ್ಡಿ ಉಂಟು ಮಾಡುತ್ತಿರುವ, ಬೆಳಗಾವಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವ ದಂಡು ಮಂಡಳಿಯ ಸಿಇಒ ವಿರುದ್ಧ ಕೇಸ್ ದಾಖಲಿಸಬೇಕು ಎಂದು ಸದಸ್ಯರು ಆಗ್ರಹಿಸಿದರು.

    ಪಾಲಿಕೆಯ 58 ವಾರ್ಡ್‌ಗಳಲ್ಲಿನ ಜನರಿಗೆ ದಿನದ 24 ಗಂಟೆ ಕುಡಿಯುವ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ದಂಡು ಮಂಡಳಿ ಪ್ರದೇಶಕ್ಕೆ ಸಮರ್ಪಕವಾಗಿ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೂ 4 ಕೋಟಿ ರೂ. ನೀರಿನ ತೆರಿಗೆ ಬಾಕಿ ಉಳಿಸಿಕೊಂಡಿದೆ. ಅಲ್ಲದೆ, ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿಗಳಿಗೆ 8 ತಿಂಗಳಿನಿಂದ ಅನುಮತಿ ನೀಡುತ್ತಿಲ್ಲ. ಹಾಗಾಗಿ ಕುಡಿಯುವ ನೀರು ಪೂರೈಕೆ ಸ್ಥಗಿತಗೊಳಿಸಿ ಬಾಕಿ ತೆರಿಗೆ ವಸೂಲಿ ಮಾಡಬೇಕು. ಇದಕ್ಕಾಗಿ ಪಾಲಿಕೆಯಲ್ಲಿ ಠರಾವು ತೆಗೆದುಕೊಳ್ಳಬೇಕು ಎಂದು ಮೇಯರ್, ಉಪಮೇಯರ್ ಅವರನ್ನು ಒತ್ತಾಯಿಸಿದರು. ದಂಡು ಮಂಡಳಿ ಪ್ರದೇಶದ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ಕೈಗೊಳ್ಳಲು ವಾರ್ಷಿಕ 70 ಲಕ್ಷ ರೂ. ಬಾಡಿಗೆ ಕಟ್ಟಬೇಕು ಎಂದು ಷರತ್ತು ವಿಧಿಸಿದೆ. ಈ ಹಿನ್ನೆಲೆಯಲ್ಲಿ ದಂಡು ಮಂಡಳಿ ಪ್ರದೇಶಕ್ಕೆ ಯಾವುದೇ ರೀತಿಯ ಸೌಕರ್ಯಗಳನ್ನು ಪಾಲಿಕೆ ನೀಡಬಾರದು. ಬಾಕಿ ತೆರಿಗೆ ಕಟ್ಟುವವರೆಗೆ ಬೀದಿ ದೀಪ, ಕುಡಿಯುವ ನೀರು ಎಲ್ಲವನ್ನೂ ಬಂದ್ ಮಾಡಬೇಕು ಎಂದು ಶಾಸಕರಾದ ಅಭಯ ಪಾಟೀಲ, ಅನಿಲ್ ಬೆನಕೆ ಹಾಗೂ ಪಾಲಿಕೆ ಸದಸ್ಯರು ಒಕ್ಕೊರಲಿನಿಂದ ಪಾಲಿಕೆ ಮೇಯರ್, ಆಯುಕ್ತರನ್ನು ಒತ್ತಾಯಿಸಿದರು.

    ಇದಕ್ಕೆ ಸ್ಪಂದಿಸದ ಪಾಲಿಕೆ ಆಯುಕ್ತ ಡಾ.ರುದ್ರೇಶ ಘಾಳಿ, ತೆರಿಗೆ ಬಾಕಿ ಹಣವನ್ನು ಕೂಡಲೇ ಪಾಲಿಕೆಗೆ ಕಟ್ಟಬೇಕು. ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿಗೆ ಅವಕಾಶ ನೀಡುವವರೆಗೆ ಕುಡಿಯುವ ನೀರಿನ ಸಂಪರ್ಕ ಸ್ಥಗಿತಗೊಳಿಸುವ ಕುರಿತು ತಿಳಿಸಲಾಗುವುದು ಎಂದರು. ಪಾಲಿಕೆ ಮೇಯರ್ ಶೋಭಾ ಸೋಮನಾಚೆ, ಉಪ ಮೇಯರ್ ರೇಷ್ಮಾ ಪಾಟೀಲ, ಆಡಳಿತ ಪಕ್ಷದ ಸಭಾ ನಾಯಕ ರಾಜಶೇಖರ ಡೋಣಿ, ಸಮಿವುಲ್ಲಾ ಮಾಡಿವಾಲೆ, ರವಿದೋತ್ರೆ, ರಿಯಾಜ್ ಕಿಲ್ಲೇದಾರ, ಅಜಿಂ ಫಟವೇಗಾರ, ಶಂಕರ ಪಾಟೀಲ, ಬಸವಂತ ಮುತಗೇಕರ ಇತರರಿದ್ದರು.

    ಕರ ಹೆಚ್ಚಿಸುವುದು ಬೇಡ

    ಮಹಾನಗರ ಪಾಲಿಕೆಯು ಆಸ್ತಿ, ನೀರು ಸೇರಿದಂತೆ ಯಾವುದೇ ರೀತಿಯ ತೆರಿಗೆಗಳನ್ನು ಹೆಚ್ಚಳ ಮಾಡಬಾರದು. ಬಾಕಿ ಉಳಿದುಕೊಂಡಿರುವ ತೆರಿಗೆ ವಸೂಲಿ ಮಾಡಬೇಕು. ರಾಜ್ಯದಲ್ಲಿ ಅತಿ ದೊಡ್ಡ ಶ್ರೀಮಂತ ಮಹಾನಗರ ಪಾಲಿಕೆ ಬೆಳಗಾವಿಯದ್ದು. ಆದರೆ ಸಮಸ್ಯೆ ಬಹಳಷ್ಟು ಇದೆ. ಕರೊನಾ ಮುಗಿದ ಬಳಿಕ ಪಾಲಿಕೆಯ ಕಂದಾಯ ತುಂಬಲು ಜನರಿಗೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ನೀರಿನ ಕರ ಹೆಚ್ಚಿಗೆ ಮಾಡುವುದು ಸೂಕ್ತವಲ್ಲ. ಕುಡಿಯುವ ನೀರಿನ ಸಮಸ್ಯೆ ಸಾಕಷ್ಟಿದೆ. ಅದನ್ನು ಬಗೆಹರಿಸುವ ಕೆಲಸ ಮಾಡಬೇಕು. ಎಲ್ಲ ನಗರ ಸದಸ್ಯರು ನಗರದ ಅಭಿವೃದ್ಧಿಗೆ ಒತ್ತು ನೀಡಬೇಕು ಪಾಲಿಕೆ ಸದಸ್ಯರು ಮನವಿ ಮಾಡಿಕೊಂಡರು.

    ದುಂದು ವೆಚ್ಚಕ್ಕೆ ಕಡಿವಾಣ ಹಾಕಿ

    ಮಹಾನಗರ ಪಾಲಿಕೆಗೆ ವಾರ್ಷಿಕ ಸುಮಾರು 35ರಿಂದ 40 ಕೋಟಿ ರೂ. ತೆರಿಗೆ ವಸೂಲಿ ಆಗುತ್ತಿದೆ. ಆದರೆ, ಖರ್ಚು 50 ಕೋಟಿ ರೂ. ಗಡಿ ದಾಟಿದೆ. ಜನಸಾಮಾನ್ಯರ ತೆರಿಗೆ ಹಣ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ವಾಹನಗಳ ಬಾಡಿಗೆ, ಡೀಸೆಲ್, ಟೀ, ಕುಡಿಯುವ ನೀರು, ವಸತಿ ಸೇರಿದಂತೆ ವಿವಿಧ ಹೆಸರಿನಲ್ಲಿ ವಾರ್ಷಿಕ ಲಕ್ಷಾಂತರ ರೂ. ವೆಚ್ಚ ಮಾಡಲಾಗುತ್ತಿದೆ. ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕು. ತೆರಿಗೆ ಹಣ ಖರ್ಚು ಮಾಡುತ್ತಿರುವ ಕುರಿತು ಲೆಕ್ಕವನ್ನು ಸಭೆಯ ಗಮನಕ್ಕೆ ತರಬೇಕು. ದುಂದು ವೆಚ್ಚಗಳನ್ನು ಆಯುಕ್ತರು ನಿಯಂತ್ರಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.

    ನಾಯಿಗಳ ಉಪಟಳ ತೆಡೆಗೆ ಕ್ರಮ

    ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 17 ಸಾವಿರ ಬೀದಿ ನಾಯಿಗಳಿವೆ. ಈ ನಾಯಿಗಳ ಉಪಟಳ ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ. ಈಗಾಗಲೇ 2,100 ನಾಯಿಗಳನ್ನು ಹಿಡಿಯಲಾಗಿದೆ. ಬೀದಿ ನಾಯಿ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಬಜೆಟ್‌ನಲ್ಲಿ ಇದಕ್ಕಾಗಿ ಅನುದಾನ ಮೀಸಲಿಡಲಾಗುವುದು ಎಂದು ಪಾಲಿಕೆ ಆಯುಕ್ತ ಡಾ.ರುದ್ರೇಶ ಘಾಳಿ ತಿಳಿಸಿದರು.

    ದಂಡು ಮಂಡಳಿಯಿಂದ ಬರಬೇಕಾಗಿರುವ 4 ಕೋಟಿ ರೂ. ತೆರಿಗೆ ಹಣ ವಸೂಲಿ ಆದ ತಕ್ಷಣವೇ ಎಲ್ಲ ವಾರ್ಡ್‌ಗಳಿಗೆ ಕೊಳವೆ ಬಾವಿ ಕೊರೆಸಲು 2 ಕೋಟಿ ರೂ. ಅನುದಾನ ಹಂಚಿಕೆ ಮಾಡಬೇಕು. ವಾರ್ಡ್‌ಗಳ ಅಭಿವೃದ್ಧಿ ಕಾಮಗಾರಿಗೆ ಹೆಚ್ಚಿನ ಆದ್ಯತೆ ನೀಡಬೇಕು.

    | ಅಭಯ ಪಾಟೀಲ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts