More

    ಪಾಲಿಕೆಗೆ ಸವಾಲಾದ ಆಸ್ತಿ ತೆರಿಗೆ ಸಂಗ್ರಹ ; ಮೇಯರ್, ಆಯುಕ್ತೆ ರಸ್ತೆಗಿಳಿದು ಕಾರ್ಯಾಚರಣೆ ;  ಸಕಾಲದಲ್ಲಿ ಟ್ಯಾಕ್ಸ್ ಕಟ್ಟುವಂತೆ ಮನವಿ

    ತುಮಕೂರು : ತೆರಿಗೆ ಹೆಚ್ಚಳದಿಂದ ಜನಾಕ್ರೋಶಕ್ಕೆ ತುತ್ತಾಗಿರುವ ಪಾಲಿಕೆಗೆ ಆಸ್ತಿ ತೆರಿಗೆ ಸಂಗ್ರಹ ಸವಾಲಾಗಿದ್ದು, ಖುದ್ದು ಮೇಯರ್, ಆಯುಕ್ತರೇ ರಸ್ತೆಗಿಳಿದು ತೆರಿಗೆ ಕೇಳುತ್ತಿದ್ದರೂ ಜನರ ವಿರೋಧ ಮುಂದುವರಿದಿದೆ.

    ನಗರದ ವಿವಿಧ ಅಂಗಡಿಗಳಿಗೆ ಸೋಮವಾರ ಭೇಟಿ ನೀಡಿ ತೆರಿಗೆ ಘೋಷಿಸಿಕೊಂಡು ಸಕಾಲದಲ್ಲಿ ಕಟ್ಟುವಂತೆ ಮಾಲೀಕರಿಗೆ ಸೂಚಿಸಿದ ಮೇಯರ್ ಬಿ.ಜಿ.ಕೃಷ್ಣಪ್ಪ, ಪಾಲಿಕೆ ಆಯುಕ್ತೆ ರೇಣುಕಾ ಹಾಗೂ ತೆರಿಗೆ ನಿರ್ಧರಣೆ ಸ್ಥಾಯಿ ಸಮಿತಿ ಅಧ್ಯಕ್ಷೆ ನಳಿನಾ ಅವರು ವ್ಯಾಪಾರಸ್ಥರ ವಿರೋಧಕ್ಕೆ ತುತ್ತಾಗಬೇಕಾಯಿತು. ಕರೊನಾ ಸಂಕಷ್ಟದಲ್ಲಿರುವ ಜನರ ಕಷ್ಟ ಅರಿಯದೆ ಏಕಾಏಕಿ ತೆರಿಗೆ ಹೆಚ್ಚಳ ಮಾಡಿರುವುದಕ್ಕೆ ವಿರೋಧ ವ್ಯಕ್ತವಾಯಿತು.

    ನಳಿನಾ ಮಾತನಾಡಿ, ನಗರ ವ್ಯಾಪ್ತಿಯಲ್ಲಿ 1.09 ಲಕ್ಷ ಆಸ್ತಿಗಳಿದ್ದು, ಶೇ.50 ಮಾಲೀಕರು ಸ್ವಯಂ ಘೋಷಣೆ ಮಾಡಿಕೊಂಡು ತೆರಿಗೆ ಕಟ್ಟಿದ್ದು, ತೆರಿಗೆ ಕಟ್ಟದ ಮಾಲೀಕರು ಹಾಗೂ ಅಂಗಡಿಗಳ ಮೇಲೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ದಾಳಿ ನಡೆಸಿ ತೆರಿಗೆ ಕಟ್ಟುವಂತೆ ಸೂಚಿಸಿದರು. ಪಾಲಿಕೆ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹ ಕುಂಠಿತವಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳೊಡನೆ ಮೇಯರ್ ಹಾಗೂ ಜನಪ್ರತಿನಿಧಿಗಳು ಕಾರ್ಯಾಚರಣೆ ನಡೆಸಿ ತೆರಿಗೆ ಕಟ್ಟದ ಮೂರು ಅಂಗಡಿಗಳಿಗೆ ಬೀಗ ಹಾಕಲಾಗಿದೆ. ತೆರಿಗೆ ಸಂಗ್ರಹಿಸುವ ಮೂಲಕ ನಗರದ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.

    ಕರೊನಾ ಹಿನ್ನೆಲೆಯಲ್ಲಿ ತೆರಿಗೆ ಕಟ್ಟಲು ವ್ಯಾಪಾರಿಗಳು ಹಾಗೂ ಮಾಲೀಕರು ಹಿಂದೇಟು ಹಾಕುತ್ತಿದ್ದರು. ಆದರೆ, 5 ರಿಂದ 10 ಲಕ್ಷ ರೂ. ತೆರಿಗೆ ಉಳಿಸಿಕೊಂಡಿದ್ದು, ಈಗ ತೆರಿಗೆ ಕಟ್ಟಲೇಬೇಕಿದೆ. ಪಾಲಿಕೆ ಮಾನವೀಯ ನೆಲೆಯಲ್ಲಿ ತೆರಿಗೆ ವಸೂಲಾತಿ ಮಾಡಿರಲಿಲ್ಲ. ಆದರೆ, 80 ಕೋಟಿ ರೂ. ತೆರಿಗೆ ಉಳಿದುಕೊಂಡಿದ್ದು ಕಾರ್ಯಾಚರಣೆ ಅನಿವಾರ್ಯ ಎಂದರು.

    ರೇಣುಕಾ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ತೆರಿಗೆ ಕಟ್ಟದವರಿಗೆ ನೋಟಿಸ್ ನೀಡಿದ್ದರೂ ತೆರಿಗೆ ಕಟ್ಟಿಲ್ಲ. ವಾಣಿಜ್ಯ ಪ್ರದೇಶಗಳಲ್ಲಿಯೂ ಹಣ ಪಾವತಿಸಿಲ್ಲ, ವ್ಯಾಪಾರಿಗಳು ಸಮಯ ತೆಗೆದುಕೊಂಡಿದ್ದು ತೆರಿಗೆ ಕಟ್ಟದೇ ಇದ್ದರೆ ಕಾರ್ಪೋರೇಷನ್ ನಿಯಮಗಳ ಅನ್ವಯ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿದರು. ಕಾರ್ಯಾಚರಣೆಯಲ್ಲಿ ನಗರ ಯೋಜನಾ ಸ್ಥಾಯಿ ಸಮಿತಿ ಅಧ್ಯಕ್ಷ ಧರಣೇಂದ್ರಕುಮಾರ್, ಕಂದಾಯ, ಒಳಚರಂಡಿ ಮತ್ತು ಕುಡಿಯುವ ನೀರು ವಿಭಾಗದ ಅಧಿಕಾರಿಗಳು ಇದ್ದರು.

    ಸಮಿತಿ ರಚನೆ : ಪಾಲಿಕೆ ವ್ಯಾಪ್ತಿಯ 35 ವಾರ್ಡ್‌ಗಳಲ್ಲಿ ತೆರಿಗೆ ವಸೂಲಾತಿ ಸಮಿತಿ ರಚಿಸಲಾಗಿದ್ದು, ಬಿಲ್ ಕಲೆಕ್ಟರ್ ಮತ್ತು ಕಂದಾಯ ಅಧಿಕಾರಿಗಳು ಮನೆಮನೆಗೆ ತೆರಳಿ ಕಂದಾಯ ವಸೂಲಿ ಮಾಡಲಿದ್ದಾರೆ. ಸಾರ್ವಜನಿಕರು ಬಿಲ್ ಕಲೆಕ್ಟರ್ ಮನೆ ಬಳಿಗೆ ಬಂದಾಗ ತೆರಿಗೆ ಕಟ್ಟಬಹುದಾಗಿದ್ದು, ಅದನ್ನು ಹೊರತುಪಡಿಸಿದರೆ ತುಮಕೂರು ಒನ್ ಮತ್ತು ಮೊಬೈಲ್ ಆ್ಯಪ್ ಮೂಲಕ ತೆರಿಗೆ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಆಯುಕ್ತೆ ರೇಣುಕಾ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts