More

    ಪಾರ್ಕ್ ಅವ್ಯವಸ್ಥೆ ಕಂಡು ಕೆಂಡವಾದ ಶಾಸಕ

    ಅಧಿಕಾರಿಗಳಿಗೆ ಎನ್. ಮಹೇಶ್ ಕ್ಲಾಸ್

    ಕೊಳ್ಳೇಗಾಲ: ಪಟ್ಟಣದ 7ನೇ ವಾರ್ಡ್ ವ್ಯಾಪ್ತಿಯಲ್ಲಿರುವ ಪೀಸ್ ಪಾರ್ಕ್ ಹಾಗೂ ಮಹಿಳಾ ಮತ್ತು ಮಕ್ಕಳ ಉದ್ಯಾನದ ಅವ್ಯವಸ್ಥೆಯನ್ನು ಕಂಡ ಶಾಸಕ ಎನ್. ಮಹೇಶ್ ನಗರಸಭೆ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

    ನಗರಸಭೆ ಅಧಿಕಾರಿಗಳು, ಸದಸ್ಯರೊಡಗೂಡಿ 7ನೇ ವಾರ್ಡ್‌ನಲ್ಲಿ ಪ್ರದಕ್ಷಿಣೆ ಹಾಕಿ ಮೂಲಸೌಕರ್ಯ ಕೊರತೆ ಬಗ್ಗೆ ಮಂಗಳವಾರ ಸಾರ್ವಜನಿಕರಿಂದ ಮಾಹಿತಿ ಪಡೆದು ಅಧಿಕಾರಿಗಳಿಗೆ ಕೆಲವು ಸೂಚನೆ ನೀಡಿದರು.

    ಪೀಸ್ ಪಾರ್ಕ್‌ನಲ್ಲಿರುವ ವಿದ್ಯುತ್ ಪೂರೈಸುವ ಕೇಬಲ್ ಸುಸ್ಥಿತಿಯಲ್ಲಿ ಇಲ್ಲದ್ದನ್ನು ಕಂಡು ಸ್ಥಳದಲ್ಲಿದ್ದ ನಗರಸಭೆ ಎಇಇ ಶಿವಕುಮಾರ್ ಹಾಗೂ ಇಂಜಿನಿಯರ್ ನಾಗೇಂದ್ರ ಅವರಿಗೆ ಅವ್ಯವಸ್ಥೆಗೆ ಕಾರಣವೇನು ಎಂದು ಪ್ರಶ್ನೆ ಮಾಡಿದರು.

    ಈ ವೇಳೆ ವಾರ್ಡ್ ಸದಸ್ಯೆ ನಾಸೀರ್ ಶರೀಫ್ ಹಾಗೂ ಬಿಜೆಪಿ ಮುಖಂಡ ಪ್ರಭುಸ್ವಾಮಿ ಮಾತನಾಡಿ, ಪಾರ್ಕ್‌ನಲ್ಲಿರುವ ವಿದ್ಯುತ್ ಬೋರ್ಡ್‌ಗಳು ಸಂಪೂರ್ಣ ಹಾಳಾಗಿದ್ದು, ಕೇಬಲ್ಗಳು ತುಂಡಾಗಿ ಬಿದ್ದಿವೆ. ಇದರಿಂದ ನಾಗರಿಕರು ಆತಂಕದಲ್ಲೇ ವಾಯುವಿಹಾರ ಮಾಡಬೇಕಿದೆ. ಯಾವ ಸಂದರ್ಭದಲ್ಲಿ ಏನಾದರೂ ಅನಾಹುತ ಸಂಭವಿಸಬಹುದು ಎಂದು ಆತಂಕ ವ್ಯಕ್ತಪಡಿಸಿದರು.

    ಬಳಿಕ ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಕೂಡಲೇ ಸಮರ್ಪಕ ವಿದ್ಯುತ್ ಪೂರೈಕೆಗೆ ಬೇಕಾದ ಕೆಲಸಗಳನ್ನು ಮಾಡಬೇಕು ಎಂದು ತಾಕೀತು ಮಾಡಿದರು.

    ಬಳಿಕ ಕನ್ನಿಕಾಪರಮೇಶ್ವರಿ ವೃತ್ತದಲ್ಲಿರುವ ಮಹಿಳಾ ಮತ್ತು ಮಕ್ಕಳ ಉದ್ಯಾನಕ್ಕೆ ಭೇಟಿ ನೀಡಿ ಅಲ್ಲಿಯೂ ಕೆಲ ತಿಂಗಳಿನಿಂದ ವಿದ್ಯುತ್ ಕಾರ್ಯನಿರ್ವಹಿಸದೆ ಪಾರ್ಕ್ ನಿರ್ವಹಣೆಯಾಗದೆ ಗಿಡ-ಗಂಟಿಗಳು ಬೆಳೆದಿರುವುದು ಹಾಗೂ ಮಕ್ಕಳ ಆಟಿಕೆಗಳು ಶಿಥಿಲಾವಸ್ಥೆ ತಲುಪಿರುವುದನ್ನು ಕಂಡು ದುರಸ್ತಿ ಕಾರ್ಯಕ್ಕೆ ಕ್ರಮವಹಿಸುವುದಾಗಿ ಸೂಚನೆ ನೀಡಿದರು.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಟ್ಟಣಕ್ಕೆ ಬುಧವಾರ ಜಿಲ್ಲಾಧಿಕಾರಿ ಭೇಟಿ ನೀಡಲಿದ್ದು, ಅವರಿಗೆ ಈ ಎರಡು ಪಾರ್ಕ್ ವೀಕ್ಷಣೆಗೆ ತೆರಳಲು ಸೂಚನೆ ನೀಡುತ್ತೇನೆ. ಅಂತೆಯೆ, ಬಹುತೇಕ ಶುದ್ಧ ಕುಡಿಯುವ ನೀರಿನ ಘಟಕಗಳು ಸತ್ತು ಹೋಗಿದ್ದು, ಜನರಿಗೆ ತೊಂದರೆಯಾಗಿದೆ. ಇದಕ್ಕೆ ಕಾರಣರಾದ ನಗರಸಭೆ ಇಂಜಿನಿಯರ್‌ಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವಂತೆ ಡಿಸಿಗೆ ಒತ್ತಾಯಿಸುತ್ತೇನೆ ಎಂದು ತಿಳಿಸಿದರು.

    ನಗರಸಭೆ ಸದಸ್ಯ ನಾಶೀರ್ ಷರೀಫ್, ರಾಮಕೃಷ್ಣ, ಮಧುಚಂದ್ರ, ಮರಿಸ್ವಾಮಿ, ಎಇಇ ಶಿವಕುಮಾರ್, ಇಂಜಿನಿಯರ್ ನಾಗೇಂದ್ರ, ಮುಖಂಡ ವೀರಭದ್ರಸ್ವಾಮಿ, ಜಗದೀಶ್, ರಾಜೇಶ್, ಪ್ರಭುಸ್ವಾಮಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts