More

    ಪಾತರಗಿತ್ತಿಗಳಿಗೊಂದು ಪಾರ್ಕ್!

    ಗಿರೀಶ ಪಾಟೀಲ ಜೊಯಿಡಾ

    ಜೊಯಿಡಾದ ಚಿಟ್ಟೆ ಪಾರ್ಕ್ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ರಂಗು ರಂಗಿನಿಂದ ಕೂಡಿದ ನೂರಾರು ಜಾತಿಯ ಚಿಟ್ಟೆಗಳ ಹಾರಾಟ ಎಂತಹವರ ಮನಸ್ಸನ್ನೂ ಸೆಳೆಯುವಂತಿದೆ.

    ಬೆಳಗಾವಿ- ಕಾರವಾರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನದ ಒಂದು ಎಕರೆ ಪ್ರದೇಶದಲ್ಲಿ 2019ರಲ್ಲಿ ಚಿಟ್ಟೆ ಪಾರ್ಕ್ ನಿರ್ವಿುಸಲಾಗಿದೆ. ಉದ್ಯಾನಕ್ಕೆ ಬಿಡುಗಡೆಯಾದ 50 ಲಕ್ಷ ರೂಪಾಯಿಯಲ್ಲೇ ಚಿಟ್ಟೆ ಪಾರ್ಕ್ ಕೂಡಾ ನಿರ್ವಿುಸಲಾಗಿದೆ.

    ಚಿಟ್ಟೆಗೆ ಬೇಕಾದ ಮರ, ಗಿಡ: ಇಲ್ಲಿ ಚಿಟ್ಟೆ (ಪಾತರಗಿತ್ತಿ) ಗಳ ವಂಶಾಭಿವೃದ್ಧಿಗೆ ಬೇಕಾದ ಲಿಂಬೆ, ಕದಂಬ, ಎಕ್ಕೆಗಿಡ, ಬಿದಿರು, ಮುಳ್ಳು ಗೊರಟೆ, ಗುಳಮಾವು, ದಾಲ್ಚಿನ್ನಿ, ಹೊಂಗೆ, ಮಾವು ಗೇರು, ಕವಲು, ಔಡಲ, ಅತ್ತಿ , ಮುಳ್ಳು ಗೊರಟೆ, ಹಾಲುಬಳ್ಳಿ ಸೇರಿ 35ಕ್ಕೂ ಹೆಚ್ಚು ಹೂವಿನ ಗಿಡಗಳನ್ನು ಇಲ್ಲಿ ಬೆಳೆಸಲಾಗಿದೆ. ಚಿಟ್ಟೆ ಪಾರ್ಕ್ ಪ್ರಾರಂಭದಲ್ಲಿ ಇಲ್ಲಿ 27 ಜಾತಿಯ ಚಿಟ್ಟೆಗಳನ್ನು ಗುರುತಿಸಲಾಗಿತ್ತು. ಈಗ ಇಲ್ಲಿ 102 ವಿವಿಧ ಜಾತಿಯ ಚಿಟ್ಟೆಗಳಿವೆ. ಇದರಲ್ಲಿ ಪ್ರಮುಖವಾಗಿ ಸದರ್ನ್ ಬರ್ಡ್​ವಿಂಗ್, ಕಾಮನ್ ರೋಸ್, ಜೆಜೆಬೆಲ್, ಕಮಾಂಡರ್, ಬ್ಲೋ ಮಾರ್ಮೋನ್, ಲೈಮ್ ಪ್ಯಾನ್ಸಿ, ಟೈಗರ್, ಕಾಮನ್ ಕ್ರೊ, ಎಮಿಗ್ರಂಟ್ ಮುಂತಾದವುಗಳಾಗಿದೆ. 25ಕ್ಕೂ ಹೆಚ್ಚು ಜಾತಿಯ ಚಿಟ್ಟೆಗಳ ಜೀವನ ಚಕ್ರ (ಲೈಫ್ ಸೈಕಲ್) ಅಂದರೆ ಮೊಟ್ಟೆಯಿಂದ ಲಾರ್ವಾ (ಪ್ಯೂಪಾ), ನಂತರ ಚಿಟ್ಟೆ ಆಗುವತನಕ ಪ್ರಕ್ರಿಯೆಯನ್ನು ವೀಕ್ಷಿಸಲು ಇಲ್ಲಿ ಅವಕಾಶವಿದೆ.

    ಪ್ರವಾಸಿಗರಿಗೆ ಮಾಹಿತಿ: ಈ ಚಿಟ್ಟೆ ಪಾರ್ಕ್​ಗೆ ರಾಜ್ಯದ ಹೊರ ರಾಜ್ಯದ ಪ್ರವಾಸಿಗರು ಕೂಡ ಭೇಟಿ ನೀಡಿದ್ದಾರೆ. ಚಿಣ್ಣರ ವನ ದರ್ಶನ ಕಾರ್ಯಕ್ರಮದ ಅಂಗವಾಗಿ ಸಾವಿರಾರು ಶಾಲೆ ಮಕ್ಕಳಿಗೆ ಇಲ್ಲಿ ಚಿಟ್ಟೆಗಳ ಬಗ್ಗೆ ಮಾಹಿತಿ ನೀಡಲಾಗಿದೆ.

    ಅರಣ್ಯ ಇಲಾಖೆಯು ಚಿಟ್ಟೆ ಪಾರ್ಕ್ ವೀಕ್ಷಣೆಗೆ ತಲಾ 50 ರೂಪಾಯಿ ಶುಲ್ಕ ನಿಗದಿಪಡಿಸಿದೆ. ಈ ವರ್ಷ ಪ್ರತಿಯೊಂದು ಚಿಟ್ಟೆಗಳ ಆಹಾರ, ಜೀವನ ಕ್ರಮಗಳ ಬಗ್ಗೆ ಮಾಹಿತಿ ನೀಡಲು ಅರಣ್ಯ ಇಲಾಖೆಯ ಡಿಆರ್​ಎಫ್​ಒ ಸಂತೋಷ ಗವಸ ಮತ್ತು ಗಾರ್ಡ್ ರಾಮಚಂದ್ರ ಮೇಗಾಣಿ ಮೊದಲಾದ ಸಿಬ್ಬಂದಿ ಇಲ್ಲಿದ್ದಾರೆ.

    ಹೀಗೆ ತಲುಪಬಹುದು: ದಾಂಡೇಲಿಯಿಂದ 24 ಕಿ.ಮೀ., ಗಣೇಶಗುಡಿಯಿಂದ 20 ಕಿ.ಮೀ., ಕಾರವಾರದಿಂದ 80 ಕಿ.ಮೀ ಹಾಗೂ ಹುಬ್ಬಳ್ಳಿಯಿಂದ ಸುಮಾರು 95 ಕಿ.ಮೀ. ದೂರದಲ್ಲಿ ಚಿಟ್ಟೆ ಪಾರ್ಕ್ ಇದೆ. ಅಕ್ಟೋಬರ್ ತಿಂಗಳಿಂದ ಮೇ ತಿಂಗಳತನಕ ಚಿಟ್ಟೆಗಳನ್ನು ನೋಡಲು ಸುಸಮಯವಾಗಿದೆ. ಪ್ರವಾಸಿಗರು ಬೆಳಗ್ಗೆ 9ರಿಂದ ಮಧ್ಯಾಹ್ನ 3 ಗಂಟೆ ವರೆಗೆ ಚಿಟ್ಟೆಗಳ ವೀಕ್ಷಣೆ ಮಾಡಬಹುದಾಗಿದೆ.

    ಕರೊನಾ ಕಾರಣದಿಂದ ಪ್ರವಾಸಿಗರು ಬರುವುದು ಕಡಿಮೆಯಾಗಿದೆ. ಪ್ರವಾಸಿಗರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದೇವೆ. ನಮ್ಮ ಇಲಾಖೆಯ ಸಿಸಿಎಫ್ ಯತೀಶಕುಮಾರ ಮತ್ತು ಹಳಿಯಾಳ ಡಿಸಿಎಫ್ ಅಜ್ಜಯ್ಯ ಅವರ ಮಾರ್ಗದರ್ಶನ ಮತ್ತು ಎಲ್ಲರ ಸಹಕಾರದೊಂದಿಗೆ ಚಿಟ್ಟೆ ಪಾರ್ಕ ಅನ್ನು ಇನ್ನಷ್ಟು ಅಭಿವೃದ್ಧಿಪಡಿಸುವತ್ತ ಸಾಗುತ್ತಿದ್ದೇವೆ.

    | ಸಿ.ಜಿ. ನಾಯ್ಕ ವಲಯ ಅರಣ್ಯಾಧಿಕಾರಿ ಜೊಯಿಡಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts