More

    ಪಶುವೈದ್ಯ ಇಲಾಖೆಯಲ್ಲಿ ಸಿಬ್ಬಂದಿ ಬರ

    ಹಾವೇರಿ: ಜಿಲ್ಲೆಯ ಪಶುಪಾಲನಾ ಹಾಗೂ ಪಶುವೈದ್ಯ ಸೇವಾ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಎದುರಾಗಿದೆ. ಹೀಗಾಗಿ, ಜಾನುವಾರುಗಳ ಸಂರಕ್ಷಣೆ ಮಾಡಲು ಹಾಗೂ ರೈತರಿಗೆ ಸಕಾಲಕ್ಕೆ ಸೌಲಭ್ಯ ತಲುಪಿಸಲು ಈಗಿರುವ ಸಿಬ್ಬಂದಿ ಹೆಣಗಾಡುವಂತಾಗಿದೆ.

    ಜಿಲ್ಲೆಯ ಪಶುವೈದ್ಯ ಇಲಾಖೆಯಲ್ಲಿ 521 ಮಂಜೂರಾತಿ ಹುದ್ದೆಗಳಿವೆ. ಇದರಲ್ಲಿ 275 ಹುದ್ದೆಗಳು ಖಾಲಿ ಇವೆ. ಶೇ. 55 ಹುದ್ದೆಗಳು ಭರ್ತಿಯಾಗಬೇಕಿದ್ದು, ಸದ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 246 ಸಿಬ್ಬಂದಿ ಹೆಚ್ಚುವರಿ ಜವಾಬ್ದಾರಿ ನಿರ್ವಹಿಸುವ ಸ್ಥಿತಿ ಎದುರಾಗಿದೆ.

    ಪ್ರಸ್ತುತ ಕರೊನಾ ಹಿನ್ನೆಲೆಯಲ್ಲಿ ಲಾಕ್​ಡೌನ್ ಘೊಷಿಸಿದ್ದರಿಂದ ಯುವ ಸಮೂಹವು ನಗರ ಪ್ರದೇಶ ತೊರೆದು ಹೈನುಗಾರಿಕೆಗಾಗಿ ಹಳ್ಳಿಗಳತ್ತ ಆಗಮಿಸಿ, ಸ್ವಯಂ ಉದ್ಯೋಗದ ದಾರಿ ಕಂಡುಕೊಳ್ಳುತ್ತಿದೆ. ರೈತರು ಜಾನುವಾರ ಸಂರಕ್ಷಣೆ ವಿಷಯದಲ್ಲಿ ಪಶು ಇಲಾಖೆಯನ್ನೇ ಅವಲಂಬಿಸಿದ್ದಾರೆ. ಆದರೆ, ಇಲಾಖೆಯಲ್ಲಿ ವೈದ್ಯರಿಂದ ಹಿಡಿದು ಡಿ ದರ್ಜೆಯ ಹುದ್ದೆಗಳು ಖಾಲಿ ಇರುವುದರಿಂದ ಇಲಾಖೆಯ ಸೌಲಭ್ಯಗಳನ್ನು ಪಡೆಯಲು ರೈತಾಪಿ ವರ್ಗಕ್ಕೆ ಸಮಸ್ಯೆಯಾಗುತ್ತಿದೆ. ಅಗತ್ಯ ಸಂದರ್ಭದಲ್ಲಿ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ದೊರಕದೇ ಪರದಾಡುವಂತಾಗಿದೆ.

    ಏನೇನು ಸಮಸ್ಯೆ: ಜಿಲ್ಲೆಯಲ್ಲಿನ ರೈತರು ಕೃಷಿ ಜೊತೆಗೆ ಹೈನುಗಾರಿಕೆಯನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ. ಹಾಲು ಉತ್ಪಾದನೆಯಲ್ಲಿಯೂ ಜಿಲ್ಲೆ ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ 1ನೇ ಸ್ಥಾನದಲ್ಲಿದೆ. ಹಾಲು ನೀಡುವ ಹಸು, ಎಮ್ಮೆಗಳಿಗೆ ಪ್ರಮುಖವಾಗಿ ಕಾಲಕಾಲಕ್ಕೆ ಸೂಕ್ತ ಚಿಕಿತ್ಸೆ ಹಾಗೂ ಪಶುವೈದ್ಯರ ಮಾರ್ಗದರ್ಶನದ ಅವಶ್ಯಕತೆಯೂ ಬಹಳಷ್ಟಿದೆ. ಸಾಂಕ್ರಾಮಿಕ ರೋಗ ಬಾಧೆ ಬಂದಾಗಲಂತೂ ನಮ್ಮ ಗೋಳು ಹೇಳತೀರದಾಗಿದೆ. ಸಕಾಲಕ್ಕೆ ವೈದ್ಯಕೀಯ ಸೇವೆ ಸಿಗದೇ ಅನೇಕ ಜಾನುವಾರುಗಳು ಮೃತಪಟ್ಟಿರುವ ಘಟನೆಗಳೂ ನಡೆದಿವೆ. ಕೋಳಿ, ಕುರಿಗಳಿಗೂ ಸಾಮೂಹಿಕ ರೋಗ ಬಂದಾಗ ಅದನ್ನು ಶೀಘ್ರ ಹತೋಟಿಗೆ ತರುವುದಕ್ಕೆ ಸಾಧ್ಯವಾಗುತ್ತಿಲ್ಲ. ಇದಕ್ಕೆಲ್ಲ ಪ್ರಮುಖ ಕಾರಣ ವೈದ್ಯರ ಕೊರತೆಯಾಗಿದೆ ಎನ್ನುತ್ತಾರೆ ರೈತ ಹನುಮಂತಗೌಡ ಪಾಟೀಲ.

    ಖಾಲಿ ಹುದ್ದೆಗಳು

    ಸಹಾಯಕ ನಿರ್ದೇಶಕರು 5, ಮುಖ್ಯ ಪಶು ವೈದ್ಯಾಧಿಕಾರಿಗಳು 10, ಹಿರಿಯ ಪಶು ವೈದ್ಯಾಧಿಕಾರಿಗಳು 7, ಪಶು ವೈದ್ಯಾಧಿಕಾರಿಗಳು 30, ಜಾನುವಾರು ಅಭಿವೃದ್ಧಿ ಅಧಿಕಾರಿಗಳು 5, ಜಾನುವಾರು ಅಧಿಕಾರಿಗಳು 11, ಹಿರಿಯ ಪಶು ವೈದ್ಯಕೀಯ ಪರೀಕ್ಷಕರು 13, ಪಶು ವೈದ್ಯಕೀಯ ಪರೀಕ್ಷಕರು 32, ಪಶು ವೈದ್ಯಕೀಯ ಸಹಾಯಕರ 37 ಹುದ್ದೆಗಳು ಖಾಲಿ ಇವೆ. ಅಲ್ಲದೆ, ಲ್ಯಾಬ್ ಟೆಕ್ನಿಷಿಯನ್ 1, ಬೆರಳಚ್ಚುಗಾರರು 2, ವಾಹನ ಚಾಲಕರು 9 ಹಾಗೂ ಡಿ ದರ್ಜೆ ನೌಕರರ 113 ಹುದ್ದೆಗಳು ಖಾಲಿ ಇವೆ.

    ಜಿಲ್ಲೆಯ ಪಶುವೈದ್ಯ ಇಲಾಖೆಯಲ್ಲಿ ಖಾಲಿ ಇರುವ ಪ್ರಮುಖ ಹುದ್ದೆಗಳ ಭರ್ತಿ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಹುದ್ದೆ ಭರ್ತಿಗೆ ಇಲಾಖೆ ಮಟ್ಟದಲ್ಲಿ ಬಡ್ತಿ ನೀಡುವ ಕಾರ್ಯ ನಡೆಯುತ್ತಿದೆ. ಸಿಬ್ಬಂದಿ ಕೊರತೆಯಿದ್ದರೂ ಸಹ ರೈತರಿಗೆ ಇಲಾಖೆಯಿಂದ ಯಾವುದೇ ಸಮಸ್ಯೆಯಾಗದಂತೆ ಕಾರ್ಯನಿರ್ವಹಿಸಲಾಗುತ್ತಿದೆ.
    | ಡಾ. ರಾಜು ಕೂಲೇರ, ಉಪನಿರ್ದೇಶಕರು ಪಶುವೈದ್ಯ ಇಲಾಖೆ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts