More

    ಪರೀಕ್ಷೆ ಮಾಡಿಸಿಕೊಳ್ಳಲು ಅಸಹಕಾರ

    ಹುಬ್ಬಳ್ಳಿ: ಇಲ್ಲಿಯ ಮುಲ್ಲಾ ಓಣಿಯ ಒಂದೇ ಕುಟುಂಬದ ಐವರು ಕರೊನಾ ಪೀಡಿತರಾಗಿ ಕಿಮ್್ಸ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಲ್ಲಿ ಒಬ್ಬನಾದ 37 ವರ್ಷದ ವ್ಯಕ್ತಿ ಲಾಕ್​ಡೌನ್ ಸಂತ್ರಸ್ತರಿಗೆ ಆಹಾರ ಧಾನ್ಯಗಳ ಕಿಟ್ ಹಂಚಿದ್ದನು. ಕಿಟ್ ಪಡೆದವರಿಗೆ ವೈರಸ್ ಸಹ ಹಬ್ಬಿರುವ ಶಂಕೆ ಇದೆ. ಯಾವುದಕ್ಕೂ ಒಮ್ಮೆ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಜಿಲ್ಲಾಡಳಿತ ಕರೆ ನೀಡಿದೆ.

    ಆಶ್ಚರ್ಯವೆಂದರೆ, ಆವತ್ತು ಉಚಿತ ಆಹಾರಧಾನ್ಯದ ಗಂಟು ಪಡೆದುಕೊಳ್ಳಲು ಕೈ ಮುಂದೆ ಮಾಡಿದ ಯಾರೊಬ್ಬರೂ ಈಗ ಉಚಿತ ತಪಾಸಣೆಗೆ ಮುಂದೆ ಬರುತ್ತಿಲ್ಲ! ಸಹಾಯವಾಣಿಗೆ ಒಂದು ಫೋನ್ ಮಾಡಿದರೆ ಸಾಕು, ನಾವೇ ಬಂದು ಗೌರವದಿಂದ ಕರೆದೊಯ್ದು ಪರೀಕ್ಷೆ ಮಾಡಿಸುತ್ತೇವೆ, ಕರೊನಾ ಸೋಂಕು ಇಲ್ಲದೇ ಇದ್ದರೆ ಚಿಂತೆ ಇಲ್ಲ. ಒಂದುವೇಳೆ ಸೋಂಕು ಕಂಡುಬಂದರೆ ಉಚಿತ ಚಿಕಿತ್ಸೆ ನೀಡುತ್ತೇವೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಕಿಟ್ ಪಡೆದವರು ಮಾತ್ರ ತಮ್ಮನ್ನು ತಾವು ಬಚ್ಚಿಟ್ಟುಕೊಳ್ಳುವ ಯತ್ನ ನಡೆಸಿದ್ದಾರೆ!

    ಮುಲ್ಲಾ ಓಣಿಯ ಸೋಂಕಿತನಿಂದಲೇ ಖಬರಸ್ತಾನ ಕಾಯುವ ಬಡಪಾಯಿಗೆ ಸಹ ವೈರಸ್ ಹಬ್ಬಿದೆ. ಅದೇ ರೀತಿ ಮತ್ತಿಷ್ಟು ಜನರಿಗೆ ಆಗಿದ್ದಲ್ಲಿ ಅಕ್ಷರಶಃ ಮೂರನೇ ಹಂತದ (ವ್ಯಾಪಕವಾಗಿ ಹರಡಿದ) ಕರೊನಾ ಆಗಿ ಘನಘೊರ ಪರಿಸ್ಥಿತಿ ಬಂದೀತು ಎನ್ನುವುದು ಸರ್ಕಾರದ ಕಾಳಜಿ. ಆದರೆ, ಕಿಟ್ ಪಡೆದವರು ಇದ್ಯಾವುದನ್ನೂ ಅರ್ಥ ಮಾಡಿಕೊಂಡಿಲ್ಲ ಎನ್ನುವುದಕ್ಕೆ ಭಾನುವಾರ ಸಂಜೆವರೆಗೆ ಒಬ್ಬರೂ ಸಹಾಯವಾಣಿಗೆ ಕರೆ ಮಾಡದಿರುವುದೇ ಸಾಕ್ಷಿ. ಅಷ್ಟೇ ಅಲ್ಲ; ಪರೀಕ್ಷೆಯಿಂದ ತಪ್ಪಿಸಿಕೊಳ್ಳುವುದು ಸಮಾಜಘಾತುಕ ಕೆಲಸವಾಗುತ್ತದೆ ಎನ್ನುವುದೂ ಗಮನಾರ್ಹ. ಈ ರೀತಿಯ ನಿಃಸ್ಪಂದನ ಸುತ್ತಲಿನ ಬಡಾವಣೆಗಳ ಜನರು, ಜಿಲ್ಲಾಡಳಿತಕ್ಕೆ ತಲೆನೋವು ತಂದಿದೆ. ಸೋಂಕಿತನಿಂದ ಕಿಟ್ ಪಡೆದವರು ಸೋಮವಾರವಾದರೂ ಸ್ವಯಂ ಸ್ಪೂರ್ತಿಯಿಂದ ಪರೀಕ್ಷೆಗೆ ಬರದೇ ಇದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಚಿಂತನೆ ನಡೆಸಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

    ತಡವಾದಷ್ಟೂ ಅಪಾಯ: ಯಾವುದೇ ರೀತಿಯಲ್ಲಿ ಸೋಂಕಿತನ ಸಂಪರ್ಕಕ್ಕೆ ಬಂದವರು ಆದಷ್ಟು ಬೇಗ ಪರೀಕ್ಷೆ ಮಾಡಿಸಿಕೊಳ್ಳಬೇಕು. ತಡ ಮಾಡಿದಷ್ಟೂ ಅಪಾಯ ಹೆಚ್ಚು ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು. ಕರೊನಾ ವೈರಸ್ ಸೋಂಕು ತಗಲಿದರೂ ಅದು ಗೊತ್ತಾಗಲು 14 ದಿನಗಳಷ್ಟು ಸಮಯ ಹಿಡಿಯುತ್ತದೆ. ಅಷ್ಟರಲ್ಲಿ ರೋಗಿಯ ಪರಿಸ್ಥಿತಿ ಉಲ್ಬಣಿಸಬಹುದಷ್ಟೇ ಅಲ್ಲ, ಆತ/ಆಕೆಯಿಂದ ಕುಟುಂಬದ ಹಾಗೂ ಸುತ್ತಮುತ್ತಲಿನ ಜನರಿಗೆ ವೈರಸ್ ಹಬ್ಬಿರುವ ಸಾಧ್ಯತೆ ಇದ್ದೇ ಇರುತ್ತದೆ. ಹೀಗಾಗಿ, ಅನುಮಾನಗಳನ್ನು ಪರಿಹರಿಸಿಕೊಂಡರೆ ಮಾತ್ರ ವ್ಯಕ್ತಿ, ಕುಟುಂಬ ಹಾಗೂ ಸಮಾಜದ ನೆಮ್ಮದಿಗೆ ದಾರಿಯಾಗುತ್ತದೆ. ಹಾಗಾಗಿ ಸಂಬಂಧಪಟ್ಟ ಯಾರೂ ಪರೀಕ್ಷೆಯಿಂದ ತಪ್ಪಿಸಿಕೊಳ್ಳಬಾರದು ಎನ್ನುವುದು ಅಧಿಕಾರಿಗಳ ಸಲಹೆಯಾಗಿದೆ.

    ಮೂರನೇ ಹಂತ: ಕರೊನಾ ವೈರಸ್ ಮೂರನೇ ಹಂತಕ್ಕೆ ಹೋಗುವುದು ಎಂದರೆ ಅತ್ಯಂತ ಘೊರವಾಗಿರುತ್ತದೆ. ಇಲ್ಲಿ ಯಾರಿಂದ ಯಾರಿಗೆ ವೈರಸ್ ಹಬ್ಬಿತು ಎಂದು ರ್ತಸಲು ಅವಕಾಶ ಇರುವುದಿಲ್ಲ. ಎಲ್ಲಿ ಬೇಕಾದರೂ ವೈರಸ್ ಇದ್ದು, ಕೈ-ಕಾಲು ಇಟ್ಟಲ್ಲೆಲ್ಲ ಅಂಟಿಕೊಳ್ಳುವ ಅಪಾಯಕಾರಿ ಹಂತ ಅದು. ಹಾಗೆ ಆದಲ್ಲಿ, ಸೀಲ್​ಡೌನ್ ವ್ಯಾಪ್ತಿ ಹಾಗೂ ಅವಧಿ ವಿಸ್ತರಣೆ ಸೇರಿ ಹಲವು ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts