More

    ಪರೀಕ್ಷಾ ಗೊಂದಲ… ವಿದ್ಯಾರ್ಥಿಗಳಲ್ಲಿ ಕೋಲಾಹಲ

    ಬೆಳಗಾವಿ: ಒಂದೇ ತಿಂಗಳಲ್ಲಿ ಮತ್ತೊಂದು ಸೆಮಿಸ್ಟರ್ ಪರೀಕ್ಷೆ ನಡೆಸಲು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ (ಆರ್‌ಸಿಯು) ಮುಂದಾಗಿದ್ದು, ಸಾವಿರಾರು ವಿದ್ಯಾರ್ಥಿಗಳು ಗೊಂದಲಕ್ಕೆ ಸಿಲುಕಿದ್ದಾರೆ.

    ಪಿಎಸ್‌ಐ ದೈಹಿಕ ಪರೀಕ್ಷೆ ಹಾಗೂ ದ್ವಿತೀಯ ದರ್ಜೆ ಸಹಾಯಕ(ಎಸ್‌ಡಿಎ) ಪರೀಕ್ಷೆ ದಿನದಂದೇ ಪದವಿ(ಯುಜಿ) ಹಾಗೂ ಸ್ನಾತಕೋತ್ತರ ಪದವಿ(ಪಿಜಿ) ಅಂತಿಮ ಸೆಮಿಸ್ಟರ್ ಪರೀಕ್ಷೆಗಳೂ ಇರುವುದರಿಂದ ಅನೇಕರಿಗೆ ಉದ್ಯೋಗ ಕೈತಪ್ಪುವ ಭೀತಿ ಕಾಡತೊಡಗಿದೆ.

    ವಿದ್ಯಾರ್ಥಿಗಳ ಆಕ್ಷೇಪ: ಯುಜಿ 1, 3, 5ನೇ ಸೆಮಿಸ್ಟರ್ ಹಾಗೂ ಪಿಜಿ 1, 3ನೇ ಸೆಮಿಸ್ಟರ್ ಪರೀಕ್ಷೆ ತಿಂಗಳ ಹಿಂದಷ್ಟೇ ಮುಗಿದಿದ್ದು, ಸೆ. 13ರಿಂದ ಅಂತಿಮ ಸೆಮಿಸ್ಟರ್ ಪರೀಕ್ಷೆ ಆರಂಭಗೊಳ್ಳಲಿವೆ. ಉಳಿದ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಮುಂದಿನ ಸೆಮಿಸ್ಟರ್‌ಗೆ ಬಡ್ತಿ ನೀಡಲಾಗಿದೆ. ಆದರೆ, ಒಂದೇ ತಿಂಗಳಲ್ಲೇ ಮತ್ತೊಂದು ಪರೀಕ್ಷೆ ನಡೆಸುತ್ತಿರುವ ಆರ್‌ಸಿಯು ಕ್ರಮಕ್ಕೆ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಸಿದ್ಧವಾಗುವುದು ಹೇಗೆ?: ‘ಕೋವಿಡ್-19 ಹಿನ್ನೆಲೆಯಲ್ಲಿ ಈ ಬಾರಿ ಸರಿಯಾಗಿ ಭೌತಿಕ ತರಗತಿ ನಡೆದಿಲ್ಲ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳೂ ಅಷ್ಟಾಗಿ ತಲುಪಿಲ್ಲ. ಹಾಗಾಗಿ ಮೊದಲೇ ಗೊಂದಲದಲ್ಲಿದ್ದೇವೆ. ಹೀಗಿರುವಾಗ ತರಾತುರಿಯಲ್ಲೇ ಮತ್ತೆ ಪರೀಕ್ಷೆ ನಡೆಸಿದರೆ ಸಿದ್ಧವಾಗುವುದಾದರೂ ಹೇಗೆ?’ ಎಂದು ಅಳಲು ತೋಡಿಕೊಂಡಿದ್ದಾರೆ.

    ಪರೀಕ್ಷೆ ಮುಂದೂಡಿ: ತಿಂಗಳ ಹಿಂದಷ್ಟೇ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ವಿವಿಧ ವಿಭಾಗಗಳ ಯುಜಿ ಹಾಗೂ ಪಿಜಿ ವಿದ್ಯಾರ್ಥಿಗಳು ಈಚೆಗಷ್ಟೇ ಪ್ರಾಜೆಕ್ಟ್ ವರ್ಕ್ ಪೂರ್ಣಗೊಳಿಸಿದ್ದಾರೆ. ಅಂತಿಮ ಸೆಮಿಸ್ಟರ್ ಪರೀಕ್ಷೆಗೆ ಸಿದ್ಧರಾಗಲು ಅವರಿಗೆ ಸಮಯವೇ ಇಲ್ಲದಂತಾಗಿದೆ. ಹಾಗಾಗಿ ಪರೀಕ್ಷೆ ಮುಂದೂಡಬೇಕು ಎಂದು ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುರೇಶ ಜಂಗೋಣಿ, ನಗರ ಘಟಕದ ಕಾರ್ಯದರ್ಶಿ ಕಿರಣ ದುಕಾಂದಾರ ಒತ್ತಾಯಿಸಿದ್ದಾರೆ.

    ಏನು ಮಾಡೋದು?: ಸೆ. 18ರಂದು ಬೆಳಗ್ಗೆ 6:30ಕ್ಕೆ ಬೆಳಗಾವಿಯಲ್ಲಿ ಪಿಎಸ್‌ಐ ಹುದ್ದೆಗಾಗಿ ದೈಹಿಕ ಪರೀಕ್ಷೆಯಿದೆ. ಅಂದೇ ಬೆಳಗ್ಗೆ 9ಕ್ಕೆ ವಿಜಯಪುರದ ಕಾಲೇಜ್‌ನಲ್ಲಿ ಎಂ.ಎ. ಅಂತಿಮ ಸೆಮಿಸ್ಟರ್ ಪರೀಕ್ಷೆ ಇದೆ. ಹಾಗಾಗಿ ಯಾವುದಕ್ಕೆ ಹಾಜರಾಗಬೇಕೋ ತಿಳಿಯುತ್ತಿಲ್ಲ ಎಂದು ವಿದ್ಯಾರ್ಥಿಯೊಬ್ಬರು ‘ವಿಜಯವಾಣಿ’ ಬಳಿ ಅಳಲು ತೋಡಿಕೊಂಡಿದ್ದಾರೆ.
    52 ಸಾವಿರ ವಿದ್ಯಾರ್ಥಿಗಳು: ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರದ ಕಾಲೇಜ್‌ಗಳು ರಾಣಿ ಚನ್ನಮ್ಮ ವಿವಿ ವ್ಯಾಪ್ತಿಗೆ ಒಳಪಡುತ್ತವೆ. 50 ಸಾವಿರ ವಿದ್ಯಾರ್ಥಿಗಳು (ರೆಗ್ಯುಲರ್ ಹಾಗೂ ಪುನರಾವರ್ತಿತ) ಯುಜಿ ಹಾಗೂ 2,800 ವಿದ್ಯಾರ್ಥಿಗಳು ಪಿಜಿ ಅಂತಿಮ ಸೆಮಿಸ್ಟರ್ ಪರೀಕ್ಷೆ ಬರೆಯಲಿದ್ದಾರೆ ಎಂದು ಆರ್‌ಸಿಯು ಅಧಿಕಾರಿಗಳು ತಿಳಿಸಿದ್ದಾರೆ.

    ಯಾವ ಎಕ್ಸಾಮ್‌ಗೆ ಹೋಗುವುದು?

    ಬೆಳಗಾವಿಯ ಡಿಎಆರ್ ಪರೇಡ್ ಗ್ರೌಂಡ್‌ನಲ್ಲಿ ಸೆ. 13ರಿಂದ 18ರ ವರೆಗೆ ಪಿಎಸ್‌ಐ (ಸಿವಿಲ್) ಹುದ್ದೆಗಳ ನೇಮಕಾತಿಗಾಗಿ ದೈಹಿಕ ಪರೀಕ್ಷೆ ನಡೆಯಲಿದೆ.
    ಎಸ್‌ಡಿಎ ಹುದ್ದೆ ನೇಮಕಾತಿಗೆ ಕೆಪಿಎಸ್ಸಿ ಸೆ.18, 19ರಂದು ಪರೀಕ್ಷೆ ದಿನಾಂಕ ನಿಗದಿಪಡಿಸಿದೆ. ಇದೇ ವೇಳೆ ಆರ್‌ಸಿಯು ವ್ಯಾಪ್ತಿಯ ಕಾಲೇಜ್‌ಗಳಲ್ಲಿ ಪರೀಕ್ಷೆಗಳು ನಡೆಯುತ್ತಿದ್ದು, ವಿದ್ಯಾರ್ಥಿಗಳು ಗೊಂದಲಕ್ಕೆ ಸಿಲುಕಿದ್ದಾರೆ. ‘ನಾವೂ ಎಸ್‌ಡಿಎ ಹುದ್ದೆಗೆ ಅರ್ಜಿ ಸಲ್ಲಿಸಿದ್ದೇವೆ. ಅಂದೇ ಪದವಿ ಪರೀಕ್ಷೆ ಇರುವುದರಿಂದ ಒಂದು ಪರೀಕ್ಷೆ ಕೈಬಿಡಬೇಕಾಗಿದೆ’ ಎಂದು ಅಳಲು ತೋಡಿಕೊಂಡಿದ್ದಾರೆ.

    ಪರೀಕ್ಷೆಗೆ ತಯಾರಾಗಲು ಇನ್ನಷ್ಟು ಕಾಲಾವಕಾಶ ನೀಡಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸುತ್ತಿದ್ದಾರೆ. ಅವರ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಪರೀಕ್ಷೆ ಮುಂದೂಡಿಕೆಗೆ ವಿವಿ ಕ್ರಮ ಕೈಗೊಳ್ಳಬೇಕು.
    | ಅರುಣ ಶಹಾಪುರ ವಿಧಾನ ಪರಿಷತ್ ಸದಸ್ಯ

    2021-22ನೇ ಸಾಲಿನಿಂದ ನಮ್ಮಲ್ಲಿ ನೂತನ ಶಿಕ್ಷಣ ನೀತಿ ಜಾರಿಯಾಗಲಿದ್ದು, ಆ. 4ರಿಂದ ಭೌತಿಕ ತರಗತಿ ಆರಂಭವಾಗಲಿವೆ. ಹಾಗಾಗಿ ಈ ತಿಂಗಳೊಳಗೆ ಪರೀಕ್ಷೆ ನಡೆಸುವಂತೆ ಸರ್ಕಾರದಿಂದ ಆದೇಶ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದ್ದೇವೆ. ಆದರೂ, ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.
    | ಪ್ರೊ. ಎಸ್.ಎಂ.ಹುರಕಡ್ಲಿ ಮೌಲ್ಯಮಾಪನ ಕುಲಸಚಿವ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ

    | ಇಮಾಮ್‌ಹುಸೇನ್ ಗೂಡುನವರ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts