More

    ಪರಿಷತ್ ಬಹುಮತಕ್ಕೆ ಸಂಕನೂರ ಗೆಲುವು ಅಗತ್ಯ

    ಶಿಗ್ಗಾಂವಿ: ಬಿಜೆಪಿಗೆ ವಿಧಾನ ಪರಿಷತ್​ನಲ್ಲಿ ಬಹುಮತದ ಅವಶ್ಯಕತೆ ಇದೆ. ಈ ಚುನಾವಣೆಯಲ್ಲಿ ಪಕ್ಷ ನಾಲ್ಕು ಸ್ಥಾನ ಗೆದ್ದರೆ ಬಹುಮತಕ್ಕೆ ಸಮೀಪವಾಗುತ್ತದೆ. ಕಳೆದ ಆರು ವರ್ಷಗಳಿಂದ ಎಸ್.ವಿ. ಸಂಕನೂರ ಅವರು ಶಿಕ್ಷಕರ ಮತ್ತು ಪದವೀಧರರ ಸಾಕಷ್ಟು ವಿಚಾರ ಪ್ರಸ್ತಾಪಿಸಿ, ಸದನದಲ್ಲಿ ಧ್ವನಿ ಎತ್ತಿದ್ದಾರೆ. ಆದ್ದರಿಂದ ಇನ್ನೊಂದು ಅವಧಿಗೆ ಆಯ್ಕೆ ಮಾಡಿ ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು.

    ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ನಿವಾಸದಲ್ಲಿ ಬಿಜೆಪಿಯಿಂದ ಭಾನುವಾರ ಆಯೋಜಿಸಿದ್ದ ಪಶ್ಚಿಮ ಪದವೀಧರ ಮತಕ್ಷೇತ್ರದ ಮತದಾರರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.ಪಶ್ಚಿಮ ಪದವೀಧರ ಕ್ಷೇತ್ರ ನಾಲ್ಕು ಜಿಲ್ಲೆಗಳಲ್ಲಿನ 23 ವಿಧಾನಸಭೆ ಕ್ಷೇತ್ರಗಳ ಪೈಕಿ 19ರಲ್ಲಿ ಬಿಜೆಪಿ ಶಾಸಕರಿದ್ದಾರೆ. 4ರಲ್ಲಿ ಮಾತ್ರ ಕಾಂಗ್ರೆಸ್ ಇದ್ದು, ಜೆಡಿಎಸ್ ಹೆಸರಿಲ್ಲದಂತಾಗಿದೆ. ಇದಕ್ಕೆ ಮೋದಿಯವರ ನಾಯಕತ್ವ, ಪಕ್ಷದ ಸಂಘಟನೆ ಕಾರಣ ಎಂದರು.

    ಶಿಗ್ಗಾಂವಿ ವಿಧಾನಸಭೆ ಮತ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯ ಮತ್ತು ಸಾಧನೆಗಳ ಕಿರು ಹೊತ್ತಿಗೆ ಬಿಡುಗಡೆ ಮಾಡಿ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ನನಗೆ ಕೋವಿಡ್-19 ಸೋಂಕು ತಗುಲಿದ್ದರಿಂದ ಕಳೆದ ಒಂದು ತಿಂಗಳಿಂದ ಕ್ಷೇತ್ರದ ಜನರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ. ಆದರೂ, ಕಳೆದ ಒಂದು ವರ್ಷದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ನನ್ನ ಕ್ಷೇತ್ರ ಸೇರಿದಂತೆ ಹಾವೇರಿ ಜಿಲ್ಲೆಯಿಂದ ಅತ್ಯಧಿಕ ಮತಗಳನ್ನು ಬಿಜೆಪಿ ಅಭ್ಯರ್ಥಿ ಸಂಕನೂರ ಅವರಿಗೆ ಹಾಕಿಸುವ ಭರವಸೆ ನೀಡುತ್ತೇನೆ ಎಂದರು.

    ಕೃಷಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ವಿಧಾನ ಪರಿಷತ್ತಿನಲ್ಲಿನ ಸದಸ್ಯರ ಕೊರತೆ ನೀಗಿಸುವ ಉದ್ದೇಶದಿಂದ ಬಿಜೆಪಿ ನಾಲ್ಕು ಸ್ಥಾನ ಗೆಲ್ಲಬೇಕಾಗಿದೆ. ಇದಲ್ಲದೆ, ಎರಡು ವಿಧಾನಸಭೆ ಉಪಚುನಾವಣೆಯಲ್ಲಿಯೂ ಬಿಜೆಪಿ ಗೆಲುವು ಸಾಧಿಸಿ ಯಡಿಯೂರಪ್ಪನವರ ಕೈ ಬಲಪಡಿಸಲಿದೆ ಎಂದರು.

    ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಮಾತನಾಡಿ, ಸರ್ವರಿಗೂ ಸಮಬಾಳು, ಸಮಪಾಲು ಪರಿಕಲ್ಪನೆಯ ಯಡಿಯೂರಪ್ಪನವರ ರಾಮರಾಜ್ಯದ ಕನಸು ನನಸಾಗುವ ಈ ಸಂದರ್ಭದಲ್ಲಿ ಪಕ್ಷ ನನಗೆ ಎರಡನೇ ಬಾರಿ ಸ್ಪರ್ಧಿಸುವ ಅವಕಾಶ ಕಲ್ಪಿಸಿದೆ. ಕಳೆದ ಆರು ವರ್ಷಗಳಲ್ಲಿ ನಾನು ಇಟ್ಟಿರುವ ಪ್ರಮುಖ ಹೆಜ್ಜೆಗಳನ್ನು ಕಿರು ಹೊತ್ತಿಗೆಯ ಮೂಲಕ ತಮ್ಮ ಗಮನಕ್ಕೆ ತರ ಬಯಸುತ್ತಿದ್ದೇನೆ. ಕ್ಷೇತ್ರದ ವ್ಯಾಪ್ತಿ ವಿಶಾಲವಾಗಿರುವುದರಿಂದ ಹಾಗೂ ಕರೊನಾ ಸಮಸ್ಯೆಯಿಂದಾಗಿ ಎಲ್ಲರನ್ನೂ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಪ್ರತಿ ಹತ್ತು ಮತದಾರರಿಗೆ ಒಬ್ಬರಂತೆ ಕಾರ್ಯಕರ್ತರನ್ನು ನೇಮಕ ಮಾಡಲಾಗಿದ್ದು, ಅವರ ಮೂಲಕ ಪ್ರಚಾರ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದರು.

    ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಸಂಸದ ಶಿವಕುಮಾರ ಉದಾಸಿ, ಶಾಸಕ ನೆಹರು ಓಲೇಕಾರ, ಸಿದ್ದರಾಜ ಕಲಕೋಟಿ ಮಾತನಾಡಿದರು. ವಿಪ ಸದಸ್ಯ ಪ್ರದೀಪ ಶೆಟ್ಟರ್, ಶಿವರಾಜ ಸಜ್ಜನ, ಶಿವಾನಂದ ಮ್ಯಾಗೇರಿ, ಶೋಭಾ ನಿಸ್ಸಿಮಗೌಡ್ರ, ಗಂಗಾಧರ ಬಾಣದ, ಮಂಜುನಾಥ ಬ್ಯಾಹಟ್ಟಿ, ಬಸವರಾಜ ನಾರಾಯಣಪುರ ಹಾಗೂ ಪಕ್ಷದ ಕಾರ್ಯಕರ್ತರು, ಮತದಾರರು ಸಭೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts