More

    ಪರದೆಯ ಮೇಲೆ ಡಿಕೆಶಿ ಪದಗ್ರಹಣ ವೀಕ್ಷಣೆ

    ಹುಬ್ಬಳ್ಳಿ: ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ ಹಾಗೂ ಮೂವರು ಕಾರ್ಯಾಧ್ಯಕ್ಷರು ಗುರುವಾರ ಬೆಂಗಳೂರಿನಲ್ಲಿ ಅಧಿಕಾರ ಸ್ವೀಕರಿಸಿದ ‘ಪ್ರತಿಜ್ಞಾ ದಿನ’ ಕಾರ್ಯಕ್ರಮದ ನೇರಪ್ರಸಾರವನ್ನು ಜಿಲ್ಲೆಯಲ್ಲಿ ವಿವಿಧೆಡೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಎಲ್​ಇಡಿ, ಟಿವಿ ಪರದೆ ಮೇಲೆ ವೀಕ್ಷಿಸಿದರು.

    ಮಹಾಮಾರಿ ಕರೊನಾ ಸೋಂಕು ಹರಡುವಿಕೆ ಹಿನ್ನೆಲೆಯಲ್ಲಿ ಬೆಂಗಳೂರಿಗೆ ತೆರಳಿ ನೇರ ಕಾರ್ಯಕ್ರಮ ವೀಕ್ಷಣೆಗೆ ನಿರ್ಬಂಧ ಇತ್ತು. ಹಾಗಾಗಿ ಸ್ಥಳೀಯವಾಗಿ ಪಕ್ಷದ ಕಚೇರಿ, ಮುಖಂಡರ ಮನೆಯ ಆವರಣ, ಸಮುದಾಯ ಭವನದಲ್ಲಿ ಎಲ್​ಇಡಿ ಪರದೆ ಅಳವಡಿಸಿ ನೇರ ಪ್ರಸಾರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲೆಯಲ್ಲಿ 312 ಕಡೆ ಇಂಥ ವ್ಯವಸ್ಥೆ ಮಾಡಲಾಗಿತ್ತು.

    ಜಿಲ್ಲಾ ಕಾಂಗ್ರೆಸ್ ಕಚೇರಿ: ಕಾರವಾರ ರಸ್ತೆಯಲ್ಲಿರುವ ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅಧ್ಯಕ್ಷ ಅಲ್ತಾಫ್ ಹಳ್ಳೂರ ನೇತೃತ್ವದಲ್ಲಿ ಪ್ರತಿಜ್ಞಾ ದಿನ ಕಾರ್ಯಕ್ರಮ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಬೃಹತ್ ಎಲ್​ಇಡಿ ಪರದೆ ಅಳವಡಿಸಲಾಗಿತ್ತು. ಬೆಂಗಳೂರಿನ ಕಾರ್ಯಕ್ರಮದ ವಿಷಯ ಸೂಚಿಯಂತೆ ನಡೆದ ವಂದೇ ಮಾತರಂ ಗೀತೆ ಗಾಯನ, ಉದ್ಘಾಟನೆ, ಭಾರತದ ಸಂವಿಧಾನದ ಕುರಿತು ಪ್ರತಿಜ್ಞಾ ವಿಧಿ ಬೋಧನೆಯು ಇಲ್ಲಿಯೂ ಅದೇ ಸಮಯಕ್ಕೆ ಅನುಸರಣೆಯಾದವು. ಪಕ್ಷದ ಕಾರ್ಯಕರ್ತರಿಗೂ ಪ್ರತ್ಯೇಕವಾಗಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

    ಹಿಂದಿನ ಅಧ್ಯಕ್ಷ ದಿನೇಶ ಗುಂಡೂರಾವ್ ಅವರಿಂದ ಡಿಕೆಶಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಭಾಗಿಯಾಗಿದ್ದ ಮುಖಂಡರು, ಕಾರ್ಯಕರ್ತರು ಮಾಸ್ಕ್ ಧರಿಸಿದ್ದರು. ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿತ್ತು. ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ದೂರ ದೂರದಲ್ಲಿ ಖುರ್ಚಿ ಇಟ್ಟಿದ್ದರು. ಆದರೆ, ಕಾರ್ಯಕ್ರಮ ವೀಕ್ಷಣೆಗೆ ಆಗಮಿಸಿದ್ದ ಒಬ್ಬೊಬ್ಬರು ಖುರ್ಚಿ ಎತ್ತಿಕೊಂಡು ಹೋಗಿ ಹತ್ತಿರ ಹತ್ತಿರ ಕುಳಿತರು. 70-80 ಜನ ಗುಂಪಾಗಿ ಸೇರಿದ್ದರು.

    ಡಿಸಿಸಿ ಮಾಜಿ ಅಧ್ಯಕ್ಷ ಶಿವಾ ನಾಯ್ಕ, ಉಪಾಧ್ಯಕ್ಷ ಯಮನೂರ ಗುಡಿಹಾಳ, ಸೇವಾದಳ ಅಧ್ಯಕ್ಷ ಡಿ.ಎಂ. ದೊಡಮನಿ, ನವೀದ ಮುಲ್ಲಾ, ಪೀತಾಂಬರಪ್ಪ ಬೀಳಾರ, ರವಿ ಬದ್ನಿ, ಮುತ್ತುರಾಜ ಮಕಾಡವಾಲೆ, ರಜೀಯಾ ಬೇಗಂ, ಚಿದಾನಂದ ಶಿಶ್ನಳ್ಳಿ, ಇನ್ನಿತರರು ಇದ್ದರು. ಅವಳಿ ನಗರದಲ್ಲಿ 93 ಕಡೆ ಆಯೋಜನೆಯಾಗಿದ್ದವು.

    ಗ್ರಾಮೀಣ ಕಾಂಗ್ರೆಸ್: ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಪಾಟೀಲ, ಕಾರವಾರ ರಸ್ತೆಯಲ್ಲಿರುವ ತಮ್ಮ ಮನೆಯ ಆವರಣದಲ್ಲಿ ಪ್ರತಿಜ್ಞಾ ದಿನ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಣೆಗೆ ವ್ಯವಸ್ಥೆ ಮಾಡಿದ್ದರು.

    ಎಲ್​ಇಡಿ ಪರದೆ ಅಳವಡಿಸಲಾಗಿತ್ತು. ಶಾಮಿಯಾನ, ಖುರ್ಚಿ ಹಾಕಲಾಗಿತ್ತು. ಮಾಜಿ ಸಚಿವ ವೀರಕುಮಾರ ಪಾಟೀಲ, ಪುಷ್ಪಾ ಅರಳಿಕಟ್ಟಿ, ವೆಂಕಟೇಶ ಮೇಸ್ತ್ರಿ, ತುಕಾರಾಮ ಮಾಂಡೇಕರ, ಬಸವರಾಜ ಇದ್ದರು.

    ಮಹಾನಗರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಹಜಮಾನ ಮುಜಾಹಿದ್ ಕೇಶ್ವಾಪುರದಲ್ಲಿರುವ ತಮ್ಮ ಮನೆಯ ಆವರಣದಲ್ಲಿ ಆಯೋಜಿಸಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ದೇಶವನ್ನು ಲೂಟಿ ಮಾಡುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಕುಸಿದಿದ್ದರೂ ದೇಶದ ಜನರಿಗೆ ಹೆಚ್ಚಿನ ದರದಲ್ಲಿ ಪೆಟ್ರೋಲ್, ಡೀಸೆಲ್ ಮಾರಾಟ ಮಾಡಲಾಗುತ್ತಿದೆ. ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ಪಕ್ಷ ಸಂಘಟನೆ ಮಾಡಿ, ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವ ಜವಾಬ್ದಾರಿ ಪ್ರತಿ ಕಾರ್ಯಕರ್ತನ ಮೇಲಿದೆ ಎಂದರು. ಶ್ರೀಕಾಂತ ರೆಡ್ಡಿ, ಮಣಿಕಂಠ ಗುಡಿಹಾಳ, ರಘು ಅರ್ಷಿದ, ಸಮೀರಖಾನ, ಫಾರೂಕ್ ಕಾಲೇಬುಡ್ಡೆ, ಇತರರು ಇದ್ದರು. ವಿದ್ಯಾನಗರ ಲೋಕಪ್ಪನಹಕ್ಕಲ ಸುಧರ್ಮ ಸಭಾಂಗಣದಲ್ಲಿ ಶ್ರೇಯಾ ಹಿರೇಕೆರೂರ, ಸೋಮಲಿಂಗ ಎಲಿಗಾರ, ಮಹಮ್ಮದ ಪಿಂಜಾರ ನೇತೃತ್ವದಲ್ಲಿ, ಗಿರಣಿಚಾಳ ಸಮುದಾಯ ಭವನದಲ್ಲಿ ಮೋಹನ ಹಿರೇಮನಿ, ಸಾಗರ ಹಿರೇಮನಿ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಹಳೇ ಹುಬ್ಬಳ್ಳಿ ಫತೇಶಾ ಸಭಾಭವನದಲ್ಲಿ ಪಾಲಿಕೆ ಮಾಜಿ ಸದಸ್ಯ ಅಲ್ತಾಫ್ ಕಿತ್ತೂರ ವ್ಯವಸ್ಥೆ ಮಾಡಿದ್ದರು. ಮಾಜಿ ಕಾಪೋರೇಟರ್ ದಶರಥ ವಾಲಿ, ಜಿ. ಲಕ್ಷ್ಮೀಪತಿ, ಅರವಿಂದ ಮೆಹರವಾಡೆ, ರವಿ ಹನುಮಸಾಗರ, ಎಸ್.ಎಸ್. ಪಠಾಣ ಇದ್ದರು.

    ಡಿ.ಕೆ. ಶಿವಕುಮಾರ ಅವರು ಇಂದಿಗೆ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವುದರಿಂದ ಭವಿಷ್ಯದಲ್ಲಿ ಪಕ್ಷ ಸಂಘಟನೆಗೆ ದೊಡ್ಡ ಪ್ರಮಾಣದಲ್ಲಿ ಉಪಯೋಗವಾಗಲಿದೆ.

    | ಅನಿಲಕುಮಾರ ಪಾಟೀಲ, ಧಾ.ಜಿ.ಗ್ರಾ. ಕಾಂಗ್ರೆಸ್ ಅಧ್ಯಕ್ಷ

    ಧಾರವಾಡದಲ್ಲೂ ವೀಕ್ಷಣೆ: ಧಾರವಾಡದ ಖಾಸಗಿ ಹೋಟೆಲ್​ನಲ್ಲಿ ಆಯೋಜಿಸಿದ್ದ ನೇರಪ್ರಸಾರ ವೀಕ್ಷಣೆ ಕಾರ್ಯಕ್ರಮವನ್ನು ಕಾಂಗ್ರೆಸ್ ಮಾಧ್ಯಮ ವಕ್ತಾರ ಪಿ.ಎಚ್. ನೀರಲಕೇರಿ ಉದ್ಘಾಟಿಸಿದರು. ಮಾಜಿ ಮೇಯರ್ ಐ.ಎಂ. ಜವಳಿ, ಮುಖಂಡರಾದ ಪ್ರತಾಪ ಚವ್ಹಾಣ, ಎಸ್.ಎ. ಪವಾರ, ವಿಲ್ಸನ್ ಫರ್ನಾಡಿಸ್, ರತ್ನಾಕರ್ ದೇವಾನಂದ, ವರಲಕ್ಷ್ಮೀ, ಸುಮಿತ್ರಾ ಕೋಟಕರ್, ಅಕ್ಷಯ ಪಾಟೀಲ, ರವಿ ಗೌಳಿ, ಕಿರಣ ಉಳ್ಳಿಗೇರಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

    <

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts