More

    ಪತ್ರಿಕಾ ಕಚೇರಿ ನವೀಕರಣಕ್ಕೆ ಪುರಸಭೆ ಅನುದಾನ: ಅಧ್ಯಕ್ಷರ ವಿರುದ್ಧ ಉಪಾಧ್ಯಕ್ಷರ ಮುಂದಾಳತ್ವದಲ್ಲಿ 4 ಗಂಟೆ ಪ್ರತಿಭಟನೆ

    ಸೊರಬ: ಪಟ್ಟಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಕಚೇರಿಯ ನವೀಕರಣಕ್ಕೆ ಪುರಸಭೆ ಅಧಿಕಾರಿಗಳು ಹಣ ಖರ್ಚು ಮಾಡಿದ್ದನ್ನು ಆಡಳಿತ ಪಕ್ಷದ ಸದಸ್ಯರು ವಿರೋಧಿಸಿದರು. ಸೋಮವಾರ ಆಯೋಜಿಸಿದ್ದ ಸಾಮಾನ್ಯಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿ, ಅಧ್ಯಕ್ಷರ ವಿರುದ್ಧ ಉಪಾಧ್ಯಕ್ಷರ ನೇತೃತ್ವದಲ್ಲಿ ಗಂಟೆಗಟ್ಟಲೇ ಪ್ರತಿಭಟನೆ ನಡೆಸಿದರು.
    ಸಭೆ ಆರಂಭವಾಗುತ್ತಿದ್ದಂತೆ ಪುರಸಭೆಯ ಸಾಮಾನ್ಯ ಹಣಕಾಸು ಯೋಜನೆಯಡಿಯಲ್ಲಿ ಯಾವ ಯಾವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಹಾಗೂ ಎಷ್ಟು ಅನುದಾನ ಬಳಕೆ ಆಗಿದೆ ಎಂದು ಉಪಾಧ್ಯಕ್ಷ ಮಧುರಾಯ್ ಜಿ.ಶೇಟ್, ಸದಸ್ಯರಾದ ಎಂ.ಡಿ.ಉಮೇಶ್, ನಟರಾಜ, ಪ್ರಭು ಮೇಸ್ತ್ರಿ ಪ್ರಶ್ನಿಸಿದರು.
    ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಗಿರೀಶ್, ಈಗಾಗಲೇ ಪಟ್ಟಣದಲ್ಲಿ ಹಲವು ಕಾಮಗಾರಿಗಳನ್ನು ನಡೆಸಲಾಗಿದೆ. ಅದರಲ್ಲಿ ಕಾನಕೇರಿಯಲ್ಲಿ ಪತ್ರಕರ್ತರ ಕೆಲಸ ಕಾರ್ಯಗಳಿಗೆ ಕಚೇರಿಗಾಗಿ ನೀಡಲು ಹಳೇ ಗ್ರಂಥಾಲಯವನ್ನು ನವೀಕರಣಗೊಳಿಸಲು 2.10 ಲಕ್ಷ ರೂ. ವೆಚ್ಚ ಮಾಡಲಾಗಿದೆ ಎಂದು ಸಭೆ ಗಮನಕ್ಕೆ ತಂದರು. ಇದನ್ನು ಪ್ರಶ್ನಿಸಿದ ಸದಸ್ಯರು, ಯಾರ ಅನುಮತಿ ಕೇಳಿ ಅನುದಾನ ನೀಡಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಅಧ್ಯಕ್ಷ ಈರೇಶ್ ಮೇಸ್ತ್ರಿ ಮಧ್ಯೆಪ್ರವೇಶಿಸಿ ಶಾಸಕ ಕುಮಾರ್ ಬಂಗಾರಪ್ಪ ಅವರ ಸಲಹೆ ಮೇರೆಗೆ ತಾಲೂಕು ಕಚೇರಿಯಲ್ಲಿ ಪುರಸಭೆ ಸದಸ್ಯರನ್ನು ಒಳಗೊಂಡಂತೆ ತುರ್ತುಸಭೆ ನಡೆಸಿ, ಘಟನೋತ್ತರ ನಿರ್ಣಯ ಕೈಗೊಂಡು ಗ್ರಂಥಾಲಯ ನವೀಕರಣಗೊಳಿಸಿ ಪತ್ರಕರ್ತರಿಗೆ ಹಸ್ತಾಂತರಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಕಾಮಗಾರಿ ನಡೆಸಲಾಗಿದೆ. ಈ ಬಗ್ಗೆ ಇಂದಿನ ಸಭೆಯಲ್ಲಿ ಅನುಮತಿ ಪಡೆಯಲಾಗುವುದು ಎಂದು ತಿಳಿಸುತ್ತಿದ್ದಂತೆ, ಮಧುರಾಯ್ ಶೇಟ್ ಪ್ರತಿರೋಧ ವ್ಯಕ್ತಪಡಿಸಿದರು. ಯಾರೋ ಹೇಳಿದ್ದಾರೆಂದು ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿ ಸದಸ್ಯರ ಗಮನಕ್ಕೆ ತರದೆ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
    ನಾನು ಪ್ರತಿನಿಧಿಸುವ ವಾರ್ಡ್‌ನಲ್ಲಿಯೇ ನವಿಕರಣಗೊಳಿಸಿದ ಪತ್ರಿಕಾ ಕಚೇರಿ ಇದ್ದು ಅದರ ಉದ್ಘಾಟನೆಗೂ ಕರೆಯಲಿಲ್ಲ. ಆಹ್ವಾನ ಪತ್ರಿಕೆಯಲ್ಲಿಯೂ ಹೆಸರನ್ನು ಹಾಕಿಲ್ಲ. ಅಷ್ಟಕ್ಕೂ ತುರ್ತು ಸಭೆ ನಡೆಸಿ ಘಟನೋತ್ತರ ನಿರ್ಣ ುಕೈಗೊಂಡು ಪತ್ರಿಕಾ ಕಚೇರಿ ನವೀಕರಣಗೊಳಿಸುವ ತುರ್ತಾದರೂ ಏನಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ದನಿಗೂಡಿಸಿದ ಕೆಲವು ಸದಸ್ಯರು ಸದನದ ಅಂಗಳಕ್ಕೆ ಇಳಿದು ಮೂರ‌್ನಾಲ್ಕು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು.
    ಇದರಿಂದ ಸೋಮವಾರದ ಸಭೆಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಯಲಿಲ್ಲ. ಇದರಿಂದ ವಿರೋಧ ಪಕ್ಷದ ಸದಸ್ಯರು ಅಸಮಾಧಾನಗೊಂಡರು. ಈ ನಡುವೆ 7 ಜನ ಸದಸ್ಯರು ಕಚೇರಿ ನವೀಕರಣ ವೆಚ್ಚದ ಅನುಮೋದನೆಗೆ ಒಪ್ಪಿಗೆ ಸೂಚಿಸಿದರು. ಅಭಿಯಂತ ಓಂಕಾರಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts