More

    ಪತ್ರಕರ್ತರನ್ನೂ ಕಾರ್ವಿುಕ ಇಲಾಖೆ ವ್ಯಾಪ್ತಿಗೊಳಪಡಿಸಿ

    ಯಲ್ಲಾಪುರ: ಪತ್ರಕರ್ತರನ್ನು ಕಾರ್ವಿುಕ ಇಲಾಖೆಯ ವ್ಯಾಪ್ತಿಗೆ ತಂದು ಅವರಿಗೂ ನೆರವು ನೀಡಲು ಸರ್ಕಾರ ಮುಂದಾಗಬೇಕು ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಹೇಳಿದರು.

    ಪಟ್ಟಣದ ಅಡಕೆ ಭವನದಲ್ಲಿ ಜಿಲ್ಲಾ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯಲ್ಲಿ ಅವರು ಮಾತನಾಡಿದರು. ನಕಲಿ ಪತ್ರಕರ್ತರ ಹಾವಳಿ ಹೆಚ್ಚಿದ್ದು, ಇದರಿಂದ ಒಳ್ಳೆಯ ಪತ್ರಕರ್ತರು ಕಳೆದು ಹೋಗುವ ಅಪಾಯವಿದೆ. ಪತ್ರಕರ್ತನಿಗೆ ಬದ್ಧತೆ ಇರಬೇಕು. ಸಮಾಜದ ಅಂಕು-ಡೊಂಕು ತಿದ್ದುವ ಹೊಣೆಗಾರಿಕೆ ಇರುವಾಗ ಬದ್ಧತೆ, ಸಿದ್ಧತೆ ಇಲ್ಲದೇ ಹೊಸದಾಗಿ ಪತ್ರಿಕೋದ್ಯಮಕ್ಕೆ ಬರುವವರು ಶೋಕಿಗಾಗಿ ಬರಬಾರದು ಎಂದು ಸಲಹೆ ನೀಡಿದರು.

    ಕಾರ್ವಿುಕ ಸಚಿವ ಶಿವರಾಮ ಹೆಬ್ಬಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವೈಯಕ್ತಿಕ ತೇಜೋವಧೆ ಮಾಡುವುದು ಮಾಧ್ಯಮಗಳಿಗೆ ಭೂಷಣವಲ್ಲ. ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಮಾಧ್ಯಮಗಳು ಶ್ರಮಿಸಬೇಕು ಎಂದರು.

    ಜಿಲ್ಲಾ ಸಂಘದಿಂದ ನೀಡುವ ಕೆ. ಶ್ಯಾಮರಾವ್ ಪ್ರಶಸ್ತಿಯನ್ನು ಪತ್ರಕರ್ತ ರಾದ ಜಯರಾಮ ಹೆಗಡೆ ಶಿರಸಿ ಹಾಗೂ ವಿಠ್ಠಲದಾಸ ಕಾಮತ್ ಅಂಕೋಲಾ ಅವರಿಗೆ ನೀಡಿ ಗೌರವಿಸಲಾಯಿತು. ತಾಲೂಕು ಸಂಘದಿಂದ ಸಾಹಿತಿ ಗಣಪತಿ ಬಾಳೆಗದ್ದೆ, ಪತ್ರಿಕಾ ಸಾಗಾಟಗಾರ ಪ್ರಶಾಂತ ಗೋಖಲೆ ಕೊಡಿಗದ್ದೆ ಅವರನ್ನು ಸನ್ಮಾನಿಸಲಾಯಿತು.

    ಸಂಘದ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಭಟ್ಟ ಭಟ್ಕಳ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತೆ ಶೈಲಜಾ ಗೋರ್ನಮನೆ ದಿಕ್ಸೂಚಿ ಭಾಷಣ ಮಾಡಿದರು. ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ದಿ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್. ಪಾಟೀಲ, ಪಪಂ ಅಧ್ಯಕ್ಷೆ ಸುನಂದಾದಾಸ್, ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಜಿ. ಸುಬ್ರಾಯ ಭಟ್ಟ ಬಕ್ಕಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹ ಅಡಿ, ಅಡಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ಇತರರು ಭಾಗವಹಿಸಿದ್ದರು.

    ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್. ಭಟ್ಟ ಆನಗೋಡ, ಉಪಾಧ್ಯಕ್ಷ ಜಿ.ಎನ್. ಭಟ್ಟ ತಟ್ಟಿಗದ್ದೆ, ಕಾರ್ಯದರ್ಶಿ ಶ್ರೀಧರ ಅಣಲಗಾರ, ಖಜಾಂಚಿ ಪ್ರಭಾವತಿ ಗೋವಿ, ಸಹಕಾರ್ಯದರ್ಶಿ ಕೇಬಲ್ ನಾಗೇಶ, ಸದಸ್ಯ ಸುಬ್ರಾಯ ಬಿದ್ರೆಮನೆ ನಿರ್ವಹಿಸಿದರು. ಕಾರ್ಯಕ್ರಮಕ್ಕೂ ಮುನ್ನ ಸಮೀಪದ ಶಕ್ತಿ ಗಣಪತಿ ದೇವಸ್ಥಾನದ ಆವಾರದಲ್ಲಿ ಜಲಸೇವಕ ಸುಬ್ರಾಯ ನಾಯ್ಕ ಮಂಚಿಕೇರಿ ಅವರ ಸಹಕಾರದೊಂದಿಗೆ ವೃಕ್ಷಾರೋಪಣ ನೆರವೇರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts