More

    ಪಡಿತರ ಒಯ್ಯಲು ಆಟೋ ವ್ಯವಸ್ಥೆ ಮಾಡಿದ ಪೊಲೀಸರು

    ಶಿರಸಿ: ಬಡ ಪಡಿತರದಾರರು ನ್ಯಾಯಬೆಲೆ ಅಂಗಡಿಯಿಂದ ಪಡಿತರ ಸಾಮಗ್ರಿ ಒಯ್ಯಲು ಸಮಸ್ಯೆ ಆಗಬಾರದೆಂಬ ಉದ್ದೇಶದಿಂದ ಇಲ್ಲಿನ ಮಾರುಕಟ್ಟೆ ಠಾಣೆ ಪಿಎಸ್​ಐ ನಾಗಪ್ಪ ಬಿ. ಅವರು ಪಡಿತರದಾರರಿಗೆ ಅಂಗಡಿಯಿಂದ ಮನೆವರೆಗೂ ಆಟೋ ವ್ಯವಸ್ಥೆ ಕಲ್ಪಿಸಿ ಮಾದರಿಯಾಗಿದ್ದಾರೆ.

    ಲಾಕ್​ಡೌನ್ ಸಂದರ್ಭದಲ್ಲಿ ಜನರಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಎರಡು ತಿಂಗಳ ಪಡಿತರವನ್ನು ಒಂದೇ ಬಾರಿಗೆ ಸರ್ಕಾರ ನೀಡುತ್ತಿದೆ. ವಾಹನ ಉಳ್ಳವರು ಪಡಿತರವನ್ನು ಸುಲಭವಾಗಿ ಕೊಂಡೊಯ್ದರೆ ಬಡವರು ಕಾಲ್ನಡಿಗೆಯ ಮೂಲಕ ಪಡಿತರ ಹೊತ್ತು ಎರಡ್ಮೂರು ಕಿಲೋ ಮೀಟರ್ ನಡೆದು ಮನೆ ಸೇರಬೇಕು. ಈ ತಿಂಗಳ ಪಡಿತರ ಹೆಚ್ಚಿರುವ ಕಾರಣ ಬಹುತೇಕ ಬಡವರು ಅದನ್ನು ಮನೆಗೆ ಕೊಂಡೊಯ್ಯಲು ಸಮಸ್ಯೆ ಅನುಭವಿಸಿದ್ದರು. ಇದನ್ನು ಮನಗಂಡ ಮಾರುಕಟ್ಟೆ ಠಾಣೆ ಪಿಎಸ್​ಐ ನಾಗಪ್ಪ ಬಿ. ಅವರು ತಮ್ಮ ಠಾಣಾ ವ್ಯಾಪ್ತಿಯ 6 ನ್ಯಾಯಬೆಲೆ ಅಂಗಡಿಗಳೆದುರು ತಲಾ ಒಂದೊಂದು ಆಟೋ ವ್ಯವಸ್ಥೆ ಮಾಡಿಸಿದ್ದಾರೆ. ಪಡಿತರ ಪಡೆಯುವ ಜನರನ್ನು ಕನಿಷ್ಠ ದರಕ್ಕೆ ಅವರವರ ಮನೆಗಳಿಗೆ ಬಿಟ್ಟು ಬರುವಂತೆ ಸೂಚಿಸಿದ್ದಾರೆ. ಇದಕ್ಕೆ ಅನುಕೂಲ ಆಗುವಂತೆ ಆಟೋಗಳಿಗೆ ಪೆಟ್ರೋಲ್ ವ್ಯವಸ್ಥೆಯನ್ನು ಮಾಡಿಸಿದ್ದಾರೆ. ಹೀಗಾಗಿ ಹೆಚ್ಚಿನ ಭಾರದ ಪಡಿತರವನ್ನು ಹೊತ್ತು ಸಾಗುತ್ತಿದ್ದ ಪಡಿತರದಾರರು ಪೊಲೀಸರ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

    ಈ ಮೊದಲಾದರೆ ಬೈಕ್ ಮೂಲಕ ಪಡಿತರ ಸಾಮಗ್ರಿ ಮನೆಗೆ ಕೊಂಡೊಯ್ಯುತ್ತಿದ್ದೆವು. ಆದರೆ, ಈಗ ವಾಹನ ಹೊರಗೆ ತೆಗೆಯುವ ವಾತಾವರಣವಿಲ್ಲ. ಹೀಗಾಗಿ 60 ಕೆ.ಜಿ. ಪಡಿತರ ಅಕ್ಕಿಯನ್ನು ಹೊತ್ತು ಸಾಗುವುದು ಕಷ್ಟವಾಗಿತ್ತು. ನ್ಯಾಯಬೆಲೆ ಅಂಗಡಿಯಿಂದ ಮನೆಯವರೆಗೂ ಆಟೋ ಇರುವುದರಿಂದ ತುಂಬ ಅನುಕೂಲವಾಗಿದೆ. | ಸೀತಮ್ಮ ಪಡಿತರದಾರರು

    ಏಪ್ರಿಲ್ ಹಾಗೂ ಮೇ ತಿಂಗಳ ಪಡಿತರವನ್ನು ಒಟ್ಟಿಗೆ ನೀಡಲಾಗುತ್ತಿದೆ. ವಾಹನಗಳ ವ್ಯವಸ್ಥೆಯೂ ಇಲ್ಲದ ಕಾರಣ ಪಡಿತರದಾರರು ಸಮಸ್ಯೆ ಅನುಭವಿಸುವಂತಾಗಿದೆ. ಮಾನವೀಯ ನೆಲೆಯಲ್ಲಿ ಈ ಆಟೋ ವ್ಯವಸ್ಥೆ ಮಾಡಲಾಗಿದೆ. | ನಾಗಪ್ಪ ಬಿ ಮಾರುಕಟ್ಟೆ ಠಾಣೆ ಪಿಎಸ್​ಐ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts