More

    ಪಠ್ಯ ಪರಿಷ್ಕರಣೆ ದ್ವೇಷಕ್ಕಾಗಿ ಅಲ್ಲ- ಕೆಪಿಸಿಸಿ ವಕ್ತಾರ ಮಹಾಂತೇಶ ಹಟ್ಟಿ

    ದಾವಣಗೆರೆ: ಮಕ್ಕಳಲ್ಲಿ ಸದ್ಭಾವನೆ ಹಾಗೂ ಕೋಮು ಸಾಮರಸ್ಯ ಬಿತ್ತಲು ಕಾಂಗ್ರೆಸ್ ಸರ್ಕಾರ ಪಠ್ಯ ಪರಿಷ್ಕರಣೆ ಮಾಡಿದೆಯೇ ಹೊರತಾಗಿ ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧದ ದ್ವೇಷದಿಂದಲ್ಲ. ಶಿಕ್ಷಣ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಕೆಪಿಸಿಸಿ ವಕ್ತಾರ ಮಹಾಂತೇಶ ಹಟ್ಟಿ ಹೇಳಿದರು.
    ಹಿಂದಿನ ಪಠ್ಯಪುಸಕ್ತ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅಳವಡಿಸಿದ್ದ ಗೊಂದಲಪೂರಿತ ಪಠ್ಯಗಳನ್ನು ಬದಲಾವಣೆ ಮಾಡಿದ್ದೇವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು, ಗುಲ್ಬರ್ಗಾ ಸೇರಿ ನಾಲ್ಕು ವಿಭಾಗದ ಶಿಕ್ಷಣ ತಜ್ಞರೊಂದಿಗೆ ಸಮಾಲೋಚಿಸಿದ ಬಳಿಕವೇ ಈ ತೀರ್ಮಾನ ಕೈಗೊಂಡಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಸಮರ್ಥಿಸಿಕೊಂಡರು.
    ಸರ್ಕಾರ ನೀಡಿದ್ದ ಐದೂ ಗ್ಯಾರಂಟಿಗಳನ್ನು ಈಡೇರಿಸಲಿದೆ. ಇದರಲ್ಲಿ 10 ಕೆಜಿ ಅಕ್ಕಿ ಕೊಡುವ ವಿಚಾರದಲ್ಲಿ ರಾಜ್ಯದ ಜತೆಗೆ ಕೇಂದ್ರ ಸರ್ಕಾರ ಕೂಡ ಪಾಲನ್ನು ನೀಡಬೇಕು. ಆದರೆ ಈ ವಿಚಾರದಲ್ಲಿ ಸರ್ಕಾರ ಮಲತಾಯಿಧೋರಣೆ ಅನುಸರಿಸುತ್ತಿದೆ. ಇದನ್ನು ಖಂಡಿಸಿ ರಾಜ್ಯದ ಎಲ್ಲ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಜೂ. 20ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
    ರಾಜ್ಯ ಸರ್ಕಾರಿ ನೌಕರರ ಬೇಡಿಕೆಯಂತೆ ಹಳೆಯ ಪಿಂಚಣಿ ವ್ಯವಸ್ಥೆಯನ್ನು ನಮ್ಮ ಸರ್ಕಾರ ಜಾರಿಗೆ ತರಲು ಶತಪ್ರಯತ್ನ ನಡೆಸಲಿದೆ. ಇದನ್ನು ಬಜೆಟ್‌ನಲ್ಲಿ ಮಂಡಿಸಿ ಕ್ರಮ ವಹಿಸಲಿದೆ. ಇದರಿಂದ ನೌಕರರಿಗೆ ಆಗುವ ಅನುಕೂಲ ಕಲ್ಪಿಸುವತ್ತ ಸರ್ಕಾರ ಗಮನ ಹರಿಸಿದೆ ಎಂದು ತಿಳಿಸಿದರು.
    ದಾವಣಗೆರೆಯ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಭ್ರಷ್ಟಾಚಾರ ಆಗುತ್ತಿರುವ ಬಗ್ಗೆ ಕೆಲವು ಶಿಕ್ಷಕರು ದೂರು ನೀಡಿದ್ದಾರೆ. ಇದನ್ನು ಕಡಿವಾಣ ಹಾಕುವ ನಿಟ್ಟಿನಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹಾಗೂ ಇಲಾಖೆ ಮುಖ್ಯ ಕಾರ್ಯದರ್ಶಿ ಅವರ ಗಮನಕ್ಕೆ ತರಲಾಗುವುದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸುವರ್ಣಮ್ಮ, ನೀತಾ ನಂದೀಶ, ರಾಮಪ್ಪ, ರಂಜನ್‌ಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts