More

    ಪಕ್ಷ ದ್ರೋಹಿಗೆ ತಕ್ಕಪಾಠ ಕಲಿಸಿ

    ಅರಸೀಕೆರೆ: ಉಂಡ ಮನೆಗೆ ಎರಡು ಬಗೆದ ಪಕ್ಷ ದ್ರೋಹಿಗೆ ತಕ್ಕಪಾಠ ಕಲಿಸಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಶಾಸಕ ಕೆ.ಎಂ.ಶಿವಲಿಂಗೇಗೌಡ ವಿರುದ್ಧ ವಾಗ್ದಾಳಿ ನಡೆಸಿದರು.

    ಜೆಡಿಎಸ್ ಅಭ್ಯರ್ಥಿ ಎನ್.ಆರ್.ಸಂತೋಷ್ ಪರ ತಾಲೂಕಿನ ಗಂಡಸಿ ಹ್ಯಾಂಡ್ ಪೋಸ್ಟ್ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ರ‌್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದರು.

    ಪಕ್ಷದಿಂದ ಒಮ್ಮೆ ಜಿಲ್ಲಾ ಪಂಚಾಯಿತಿ ಸದಸ್ಯ, ಮೂರು ಬಾರಿ ಶಾಸಕನಾದವ ಈಗ ತನ್ನ ಸ್ವಾರ್ಥಕ್ಕಾಗಿ ಕಾಂಗ್ರೆಸ್ ಸೇರಿದ್ದಾರೆ. ರೇವಣ್ಣನನ್ನು ರಾಜಕೀಯವಾಗಿ ತುಳಿದು ಬಿಡುತ್ತೇನೆ ಎನ್ನುತ್ತಾರೆ. ಮತ್ತೊಂದೆಡೆ ನನ್ನ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮುಖ ನೋಡಿ ಜನರು ವೋಟು ಹಾಕುವುದಿಲ್ಲ ಎಂದು ಬಹಿರಂಗ ಹೇಳಿಕೆ ಕೊಡುವಷ್ಟರ ಮಟ್ಟಿಗೆ ಬೆಳೆದಿದ್ದಾರೆ. ಇಂತಹವರು ಮತ್ತೆ ರಾಜಕೀಯ ಕ್ಷೇತ್ರದಲ್ಲಿ ಹುಟ್ಟಬಾರದು ಎಂದು ಹೇಳಿದರು.

    ಮತದಾನದ ದಿನದಂದು ಜನರು ಮಹತ್ವದ ನಿರ್ಧಾರ ತೆಗೆದುಕೊಳ್ಳಬೇಕು. ಆಗ ಮಾತ್ರವೇ ನನ್ನ 90 ವರ್ಷದ ರಾಜಕೀಯ ಜೀವನಕ್ಕೆ ಸಾರ್ಥಕತೆ ಬರಲಿದೆ ಎಂದರು.

    ಅರಸೀಕೆರೆ ವಿಧಾನಸಭಾ ಕ್ಷೇತ್ರಕ್ಕೆ ಮೋಸ ಮಾಡಿದ್ದೇನೆ ಎಂದು ಕೆಲವರು ಇಲ್ಲಸಲ್ಲದ ಟೀಕೆಟಿಪ್ಪಣಿ ಮಾಡುತ್ತಿದ್ದಾರೆ. ಹೇಮಾವತಿ ನದಿಯಿಂದ ಕಣಕಟ್ಟೆ ಹೋಬಳಿ ಸೇರಿ 40 ಕೆರೆಗಳಿಗೆ ನೀರು ಹರಿಸಲು ಪತ್ರ ಬರೆದಿದ್ದೇನೆ. ದೇವರು ಪಾಲ್ಗೊಂಡಿರುವ ಸಭೆಯಲ್ಲಿ ಸುಳ್ಳು ಹೇಳುವ ಅಗತ್ಯವಿಲ್ಲ ಎಂದು ಪತ್ರದ ಜೆರಾಕ್ಸ್ ಪ್ರತಿ ಪ್ರದರ್ಶಿಸಿದರು. ಲಂಬಾಣಿ ಸಮುದಾಯದ ಲಚ್ಚಾನಾಯ್ಕಾ ಅವರನ್ನು ಜಿಪಂ ಉಪಾಧ್ಯಕ್ಷನನ್ನಾಗಿ ಮಾಡಿದ್ದೇನೆ. ವೀರಶೈವ-ಲಿಂಗಾಯತ ಸಮುದಾಯದ ಜಿ.ಎಸ್.ಪರಮೇಶ್ವರಪ್ಪ ಅವರನ್ನು ಶಾಸಕನನ್ನಾಗಿ ಮಾಡಿದ್ದೇನೆ. ಹಿಂದುಳಿದ ವರ್ಗದವರಿಗೆ ಮೀಸಲಾತಿ ನೀಡಿದ ಹೆಗ್ಗಳಿಕೆ ನಮ್ಮದಾಗಿದ್ದು ಕೆಲವರು ವಾಸ್ತವ ಮರೆಮಾಚಲು ಹೊರಟಿದ್ದಾರೆ ಎಂದು ಕಿಡಿಕಾರಿದರು.

    ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, ದೇವೇಗೌಡರ ಮನೆಯಲ್ಲಿ ತಿಂದುಂಡ ವ್ಯಕ್ತಿ ಇದೀಗ ಸೋನಿಯಾ ಗಾಂಧಿ ಚೆನ್ನಾಗಿ ಕಾಣುತ್ತಿದ್ದಾರೆ ಎಂದು ನೋಡಲು ಹೊರಟಿದ್ದಾರೆ. ರಾಜಕೀಯ ನೆಲೆ ಕಲ್ಪಿಸಿಕೊಟ್ಟ ಪಕ್ಷಕ್ಕೆ ಮೋಸ ಮಾಡಿದವರನ್ನು ಮನೆಗೆ ಕಳುಹಿಸಿ ಎಂದು ಏಕವಚನದಲ್ಲಿ ಶಿವಲಿಂಗೇಗೌಡರ ವಿರುದ್ಧ ಟೀಕಾಪ್ರಹಾರ ನಡೆಸಿದರು.

    ಮಾಜಿ ಸಚಿವ ಎಚ್.ಡಿ.ರೇವಣ್ಣ ಮಾತನಾಡಿ, 2004ರ ವಿಧಾನಸಭಾ ಚುನಾವಣೆಯಲ್ಲಿ ಸೋತವನನ್ನು ಕರೆತಂದು ಕೆಲಸ ಕೊಟ್ಟು ಹದಿನೈದು ವರ್ಷ ಸಾಕಿದೆ. ಆದರೆ ನಮಗಿಂದು ಆತನಿಂದಲೇ ಮೋಸವಾಗಿದ್ದು ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಮುಖ ನೋಡಿದರೆ ಯಾರೂ ವೋಟು ಹಾಕುವುದಿಲ್ಲ ಎಂದು ಅಹಂಕಾರದ ಮಾತುಗಳನ್ನಾಡಿರುವವರಿಗೆ ಚುನಾವಣೆಯಲ್ಲಿ ಮನೆಯ ದಾರಿ ತೋರಿಸುವವರೆಗೆ ವಿರಮಿಸುವುದಿಲ್ಲ ಎಂದರು.

    ಜಿಪಂ ಮಾಜಿ ಸದಸ್ಯೆ ಭವಾನಿ ರೇವಣ್ಣ ಮಾತನಾಡಿ, ಕಾಂಗ್ರೆಸ್ ನೋಟು, ಜೆಡಿಎಸ್‌ಗೆ ವೋಟು ಎನ್ನುವಂತೆ ಕೆಲಸ ಮಾಡಿ. ಮೇ 18ರಂದು ಎಚ್.ಡಿ.ದೇವೇಗೌಡರ ಜನ್ಮದಿನಕ್ಕೆ ಎನ್.ಆರ್.ಸಂತೋಷ್ ಅವರ ಗೆಲುವಿನ ಉಡುಗೊರೆ ನೀಡೋಣ ಎಂದು ಕರೆನೀಡಿದರು.


    ಅಭ್ಯರ್ಥಿ ಎನ್.ಆರ್.ಸಂತೋಷ್, ಜಿಪಂ ಮಾಜಿ ಸದಸ್ಯರಾದ ವತ್ಸಲಾ ಶೇಖರಪ್ಪ, ಬಾಣಾವರ ಅಶೋಕ್ ಇನ್ನಿತರರು ಮಾತನಾಡಿದರು. ಮುಖಂಡರಾದ ಹೊಸೂರು ಗಂಗಾಧರ್, ಕೆಂಕೆರೆ ಕೇಶವಮೂರ್ತಿ, ಗಂಡಸಿ ಮಂಜಣ್ಣ, ಸಯ್ಯದ್ ಸಿಕಂದರ್ ಸೇರಿ ಹಲವರು ಸಾಥ್ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts