More

    ಪಕ್ಷದೊಳಗಿನ ಭಿನ್ನಮತ ನಿಲ್ಲಲಿ

    ಶಿರಸಿ: ಕಾಂಗ್ರೆಸ್ ಭದ್ರಕೋಟೆಯಲ್ಲಿ ಪಕ್ಷ ಈಗಾಗಲೇ ಸೋತಿದ್ದು, ಗ್ರಾಮ ಪಂಚಾಯಿತಿ ಚುನಾವಣೆಯೊಳಗೆ ಪಕ್ಷದೊಳಗಿನ ಭಿನ್ನಮತ ಶಮನ ಆಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು.

    ನಗರದ ತೋಟಗಾರರ ಕಲ್ಯಾಣ ಮಂಟಪದಲ್ಲಿ ಶನಿವಾರ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

    ಕಾಂಗ್ರೆಸ್ ದೇಶದ ಶಕ್ತಿಯಾಗಿದೆ. ಇದರ ಇತಿಹಾಸವೇ ದೇಶದ ಇತಿಹಾಸವಾಗಿದೆ. ಹಾಗಾಗಿ ಪಕ್ಷದ ಘನತೆ ಕಾಪಾಡುವ ಅಗತ್ಯವಿದೆ. ಪಕ್ಷದೊಳಗಿನ ಭಿನ್ನಮತ ಸರಿಪಡಿಸಿಕೊಳ್ಳಬೇಕು. ಉತ್ತರ ಕನ್ನಡ ಕಾಂಗ್ರೆಸ್​ನ ಭದ್ರಕೋಟೆಯಾಗಿದ್ದರೂ ಇಲ್ಲಿ ಪಕ್ಷ ಸೋತಿದೆ. ಕಾರಣ ಜನರಲ್ಲಿ ಜಾಗೃತಿ ಮೂಡಿಸಬೇಕು. ಚುನಾವಣೆ ಪೂರ್ವ ನಮ್ಮೊಳಗಿನ ಭಿನ್ನಮತ ಶಮನದ ಕಾರ್ಯ ಆಗಬೇಕು ಎಂದು ಹೇಳಿದರು.

    ಚುನಾವಣೆಗಳಲ್ಲಿ ಈ ಹಿಂದೆ ಸೋತ ಅಭ್ಯರ್ಥಿಗಳು ಕಡ್ಡಾಯವಾಗಿ ಪಕ್ಷದ ಗೆಲುವಿಗಾಗಿ ಶ್ರಮಿಸಬೇಕು ಇಲ್ಲವೇ ಬೇರೆಯವರಿಗೆ ಅವಕಾಶ ನೀಡಬೇಕು. ನಾಯಕನಾಗ ಬಯಸುವವರು ಬೂತ್ ಮಟ್ಟದಲ್ಲಿ ಸಂಘಟನೆ ಮಾಡಿ ಗೆಲ್ಲುವುದು ಕಡ್ಡಾಯವಾಗಲಿದೆ. ಹೀಗಾಗಿ ಪ್ರತಿಯೊಬ್ಬರೂ ಇದರತ್ತ ಗಮನ ನೀಡಬೇಕು. ಬೂತ್ ಮಟ್ಟದಿಂದಲೇ ಅಭ್ಯರ್ಥಿಗಳ ಆಯ್ಕೆಗೆ ಕ್ರಮವಹಿಸಲಾಗುವುದು. ಪ್ರತಿ ಬೂತ್ ಮಟ್ಟದಲ್ಲಿ ಡಿಜಿಟಲ್ ಯೂತ್ ಆರಂಭಿಸಬೇಕು ಎಂದು ಸಲಹೆ ನೀಡಿದರು.

    ನಾವು ಧ್ವನಿ ಎತ್ತಲಿದ್ದೇವೆ
    ರಾಜ್ಯದಲ್ಲಿ ಅರಣ್ಯ ಅತಿಕ್ರಮಣದಾರರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಆಡಳಿತಾರೂಢ ಸರ್ಕಾರಗಳಿಂದ ಅದನ್ನು ತಡೆಯಲಾಗುತ್ತಿಲ್ಲ. ವಿದ್ಯುತ್ ದರ ಏರಿಸಲಾಗುತ್ತಿದೆ. ರೈತ ವಿರೋಧಿ ಕಾನೂನುಗಳು ಅನುಷ್ಠಾನ ಆಗುತ್ತಿವೆ. ಈ ಬಗ್ಗೆ ಕಾಂಗ್ರೆಸ್ ಧ್ವನಿ ಎತ್ತಲಿದೆ. ಅಲ್ಲದೆ, ಇಂತಹ ಕೆಲಸ ನಿಲ್ಲಬೇಕು ಎಂದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದು ಡಿ.ಕೆ. ಶಿವಕುಮಾರ ಹೇಳಿದರು.

    ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮಾತನಾಡಿ, ಪಕ್ಷಕ್ಕೆ ಭವಿಷ್ಯದ ಚುನಾವಣೆಗಳಲ್ಲಿ ಸೋಲಾಗದಂತೆ ಪ್ರತಿಯೊಬ್ಬ ಕಾರ್ಯಕರ್ತನೂ ಸಹಕಾರ ನೀಡಬೇಕು. ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ ಹೆಚ್ಚಾಗಿದೆ. ಈ ಸರ್ಕಾರದಿಂದ ಉತ್ತಮ ಆಡಳಿತ ನಿರೀಕ್ಷೆ ಮಾಡಲಾಗದು. ಹಾಗಾಗಿ ಕಾಂಗ್ರೆಸ್ ಕಟ್ಟುವ ಕಾರ್ಯ ಬಲವಾಗಿ ಆಗಬೇಕು ಎಂದರು.

    ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ, ಪಂಚಾಯಿತಿ ಚುನಾವಣೆಗೆ ಭರದ ಸಿದ್ಧತೆ ನಡೆಸಲಾಗಿದ್ದು, ಈಗಾಗಲೇ ಕಾರ್ಯಪ್ರವೃತ್ತರಾಗಿದ್ದೇವೆ. ಕೇವಲ ಚುನಾವಣೆಗಷ್ಟೇ ಸಂಘಟನೆ ಮಾಡದೆ ಭವಿಷ್ಯದಲ್ಲಿ ಜಿಲ್ಲೆಯಲ್ಲಿ ಪಕ್ಷದ ಬಲವರ್ಧನೆಗೆ ಶ್ರಮಿಸಲಾಗುತ್ತಿದೆ ಎಂದರು.

    ಈ ವೇಳೆ ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ಸುಷ್ಮಾ ಅಮರನಾಥ, ಪಕ್ಷದ ಪ್ರಮುಖರಾದ ಎಸ್.ಎಲ್. ಘೊಟ್ನೇಕರ, ಸತೀಶ ಸೈಲ್, ಮಂಕಾಳು ವೈದ್ಯ, ಶಾರದಾ ಶೆಟ್ಟಿ, ಕಿಸಾನ್ ಸೆಲ್ ಅಧ್ಯಕ್ಷ ಸಚಿನ್ ಮಿಘಾ, ನಿವೇದಿತ್ ಆಳ್ವಾ, ಸುಷ್ಮಾ ರೆಡ್ಡಿ, ಜಯಶ್ರೀ ಮೊಗೇರ, ವಿ.ಎಸ್.ಆರಾಧ್ಯ, ಆರ್.ಎನ್. ನಾಯ್ಕ, ಜೆ.ಡಿ.ನಾಯ್ಕ ಹಾಗೂ ಇತರರು ಇದ್ದರು. ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಕೆ. ಭಾಗವತ ಸ್ವಾಗತಿಸಿದರು.

    ಭವಿಷ್ಯದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಯುವಕರು, ಮಹಿಳೆಯರಿಗೆ ಆದ್ಯತೆ ನೀಡಬೇಕು. ಇಲ್ಲವಾದರೆ ಪಕ್ಷಕ್ಕೆ ತೀವ್ರ ಹಿನ್ನಡೆಯಾಗಲಿದೆ. ಅಭಿವೃದ್ಧಿಯೇ ಧರ್ಮ ಎಂಬ ಕಾಂಗ್ರೆಸ್ ನಡೆಯನ್ನು ಪ್ರತಿಯೊಬ್ಬರೂ ಹಿಂಬಾಲಿಸಬೇಕು.
    | ನಿವೇದಿತ್ ಆಳ್ವಾ- ಕೆಪಿಸಿಸಿ ಶಿಸ್ತುಪಾಲನಾ ಸಮಿತಿ ಸದಸ್ಯ

    ಗ್ರಾಮ ಪಂಚಾಯಿತಿ ಚುನಾವಣೆ ಪಕ್ಷಾತೀತವಾದರೂ ಪಕ್ಷದ ಕಾರ್ಯಕರ್ತರು ಸ್ಪರ್ಧಿಸುತ್ತಾರೆ. ಹಾಗಾಗಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಸ್ಥಳೀಯ ಘಟಕಗಳ ಪ್ರಮುಖರ ಅಭಿಪ್ರಾಯ ಪಡೆಯಬೇಕು. ಪಕ್ಷ ನಿಷ್ಠೆಯ ಕಾರ್ಯಕರ್ತರಿಗೆ ಅವಕಾಶ ನೀಡಬೇಕು.
    ಆರ್.ವಿ.ದೇಶಪಾಂಡೆ ಶಾಸಕ

    ಪಕ್ಷದ ಕಚೇರಿಗಾಗಿ ಭಿಕ್ಷೆ ಬೇಡುವೆ
    ಪಕ್ಷದ ಕಚೇರಿ ಎಂದರೆ ಪಕ್ಷದ ಪ್ರತಿಯೊಬ್ಬರಿಗೂ ದೇವಾಲಯವಿದ್ದಂತೆ. ಹಾಗಾಗಿ ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿಯೂ ಪಕ್ಷದ ಸ್ವಂತ ಕಚೇರಿ ಇರಬೇಕು. ಖರೀದಿಯಾದರೂ ಮಾಡಿ, ಬಾಡಿಗೆಯನ್ನಾದರೂ ಪಡೆಯಿರಿ ಅದಕ್ಕೆ ಆರ್ಥಿಕ ಸಮಸ್ಯೆಯಾದರೆ ಸ್ವತಃ ನಾನೇ ಭಿಕ್ಷೆಬೇಡಿ ಹಣ ಕ್ರೋಡೀಕರಿಸುವೆ ಎಂದು ಡಿ.ಕೆ. ಶಿವಕುಮಾರ ಹೇಳಿದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts