More

    ಪಕ್ಷಗಳಿಗೆ ಸೆಡ್ಡು ಹೊಡೆದ ಪಕ್ಷೇತರರು

    ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಟಿಕೆಟ್ ವಂಚಿತ ಬಿಜೆಪಿ, ಕಾಂಗ್ರೆಸ್ ಹಾಗೂ ಇತರ ಪಕ್ಷದ ಕಾರ್ಯಕರ್ತರು ಇದೀಗ ರಾಜಕೀಯ ಪಕ್ಷಗಳಿಗೇ ಸೆಡ್ಡು ಹೊಡೆದಿದ್ದಾರೆ. ಪಕ್ಷೇತರರಾಗಿ ಕಣಕ್ಕಿಳಿಯುವ ಮೂಲಕ ಬಂಡಾಯದ ಬಾವುಟ ಬೀಸಿದ್ದಾರೆ. ಅವರು ಕಣದಿಂದ ಹಿಂದೆ ಸರಿಯದಿದ್ದರೆ ಪಕ್ಷದ ಚಿಹ್ನೆಯಡಿ ಸ್ಪರ್ಧಿಸುತ್ತಿರುವವರು ಗೆಲ್ಲಲು ಏದುಸಿರು ಬಿಡಬೇಕಾಗುತ್ತದೆ.

    ಪಾಲಿಕೆ ಚುನಾವಣೆಯಲ್ಲಿ ಟಿಕೆಟ್ ದೊರೆಯದ್ದರಿಂದ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ಅಸಮಾಧಾನ ಭುಗಿಲೆದ್ದಿದ್ದು, ಪಕ್ಷಗಳಿಗೂ ಬಂಡಾಯದ ಬಿಸಿ ತಟ್ಟಿದೆ. ಕೊನೆಯ ಕ್ಷಣದವರೆಗೂ ಟಿಕೆಟ್ ನಿರೀಕ್ಷೆಯಲ್ಲಿದ್ದ ಕಾರ್ಯಕರ್ತರಿಗೆ ಘೋಷಿತ ಪಟ್ಟಿಯಲ್ಲಿ ಹೆಸರು ಇಲ್ಲದ್ದನ್ನು ಕಂಡು ನಿರಾಸೆ ಆಗಿದೆ. ಹೀಗಾಗಿ ಆಕ್ರೋಶಗೊಂಡ ಕೆಲವರು ಪಕ್ಷೇತರರಾಗಿ ಸ್ಪರ್ಧಿಸಿದರೆ ಇನ್ನೂ ಕೆಲವರು ಚುನಾವಣೆಯಿಂದಲೇ ದೂರ ಸರಿದಿದ್ದಾರೆ.

    ವಾರ್ಡ್‌ಗಳಲ್ಲಿ ಕುತೂಹಲ: ಪಾಲಿಕೆಯ 58 ವಾರ್ಡ್‌ಗಳಿಗೆ ಸೋಮವಾರ ಮಧ್ಯಾಹ್ನದವರೆಗೆ ಮೂರು ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದ ಬಿಜೆಪಿ, 13 ವಾರ್ಡ್‌ಗಳಲ್ಲಿ ಕುತೂಹಲ ಉಳಿಸಿಕೊಂಡಿತ್ತು. ಅಲ್ಲದೆ, ಮಧ್ಯಾಹ್ನ 2 ಗಂಟೆಯ ನಂತರ ಕೊನೆಯ ಪಟ್ಟಿ ಬಿಡುಗಡೆ ಮಾಡಿದೆ. ಮತ್ತೊಂದೆಡೆ, ಕಾಂಗ್ರೆಸ್ ಸಹ ಭಾನುವಾರ ರಾತ್ರಿಯೇ 49 ವಾರ್ಡ್‌ಗಳಿಗೆ ಒಂದೇ ಹಂತದಲ್ಲಿ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಿದ್ದು, ಬಂಡಾಯಗಾರರನ್ನು ಸಮಾಧಾನ ಪಡಿಸಲು ಯತ್ನಿಸಿದೆ. ಆದರೆ, 9 ವಾರ್ಡ್‌ಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಹಿಂದೇಟು ಹಾಕಿರುವುದು ತೀವ್ರ ಕುತೂಹಲ ಉಂಟು ಮಾಡಿದೆ.

    ಎಂಇಎಸ್‌ಗೆ ಆತಂಕ: ಪ್ರತಿ ಚುನಾವಣೆಯಲ್ಲಿ ಹಿಂದುತ್ವ, ಭಾಷೆ ಹಾಗೂ ಗಡಿ ಹೆಸರಿನಲ್ಲಿ ಸರಳವಾಗಿ ಗೆಲುವು ಸಾಧಿಸಿಕೊಂಡು ಬರುತ್ತಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯ ಅಭ್ಯರ್ಥಿಗಳಿಗೆ ಇದೀಗ ರಾಜಕೀಯ ಪಕ್ಷಗಳ ಪ್ರವೇಶದಿಂದ ಆತಂಕ ಉಂಟಾಗಿದೆ. ಬೆಳಗಾವಿ ದಕ್ಷಿಣ ಮತ್ತು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳ ಗೆಲುವಿಗಾಗಿ ಅಭಿವೃದ್ಧಿಯ ಜತೆ ಹಿಂದುತ್ವ ಅಸ್ತ್ರ ಪ್ರಯೋಗಿಸುತ್ತಿದೆ. ಅಲ್ಲದೆ, ಮರಾಠಿ ಮುಖಂಡರಿಗೆ ಬಿಜೆಪಿ ಟಿಕೆಟ್ ನೀಡಿರುವುದು ಎಂಇಎಸ್‌ಗೆ ಆರಂಭದಲ್ಲಿಯೇ ಹಿನ್ನಡೆ ಉಂಟಾಗಿದೆ ಎನ್ನಲಾಗಿದೆ.

    364 ಪಕ್ಷೇತರ ಅಭ್ಯರ್ಥಿಗಳು: ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಿನ ಸ್ಥಾನ ಗೆಲುವಿನ ನಿರೀಕ್ಷೆ ಇಟ್ಟುಕೊಂಡಿರುವ ಕಾಂಗ್ರೆಸ್‌ಗೆ ಎಐಎಂಐಎಂ, ಜೆಡಿಎಸ್ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದು ಮತ್ತು ಪಕ್ಷದಲ್ಲಿನ ಟಿಕೆಟ್ ವಂಚಿತರು ಪಕ್ಷೇತರರಾಗಿ ಸ್ಪರ್ಧಿಸುತ್ತಿರುವುದು ನಿರಾಸೆ ತಂದಿದೆ. ಒಟ್ಟಿನಲ್ಲಿ 58 ವಾರ್ಡ್‌ಗಳಲ್ಲಿ 519 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಅದರಲ್ಲಿ 364 ಪಕ್ಷೇತರ ಅಭ್ಯರ್ಥಿಗಳೇ ಇರುವುದು ವಿಶೇಷವಾಗಿದೆ.

    ಮತದಾನ ಸಮಯ 1 ಗಂಟೆ ವಿಸ್ತರಣೆ

    ಬೆಳಗಾವಿ: ಮಹಾನಗರ ಪಾಲಿಕೆಯ 58 ವಾರ್ಡ್‌ಗಳಿಗೆ ಸೆ. 3ರಂದು ಮತದಾನ ನಡೆಯಲಿದ್ದು, ಚುನಾವಣಾ ವೀಕ್ಷಕರನ್ನು ನಿಯೋಜಿಸಿಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.

    ಭೂ ಸ್ವಾಧೀನ (ಪು.ವ.ಮತ್ತು ಪು.ನಿ.), ಬೃಹತ್ ನೀರಾವರಿ ಯೋಜನೆಗಳ ವಿಶೇಷ ಜಿಲ್ಲಾಧಿಕಾರಿ ಗೀತಾ ಕೌಲಗಿ (ಮೊ. 9448933533) ಅವರನ್ನು ವಾರ್ಡ್ ಸಂಖ್ಯೆ 1 ರಿಂದ 29ರ ವರೆಗೆ, ಕೃಷಿ ಇಲಾಖೆಯ ಜಾಗೃತ ಕೋಶದ ಜಂಟಿ ನಿರ್ದೇಶಕ ಜಿಲಾನಿ ಮೊಕಾಶಿ
    (ಮೊ. 8277934042) ಅವರನ್ನು ವಾರ್ಡ್ ಸಂಖ್ಯೆ 30ರಿಂದ 58ರ ವರೆಗೆ ಚುನಾವಣಾ ವೀಕ್ಷಕರನ್ನಾಗಿ ನಿಯೋಜಿಸಿಲಾಗಿದೆ.

    ಬೆಳಗಾವಿ ಮಹಾನಗರ ಪಾಲಿಕೆಯ 58 ವಾರ್ಡ್‌ಗಳಿಗೆ ಸಾರ್ವತ್ರಿಕ ಹಾಗೂ ರಾಯಬಾಗ ಪಟ್ಟಣ ಪಂಚಾಯಿತಿ ವಾರ್ಡ್ ನಂ. 9 ಹಾಗೂ ಪುರಸಭೆ ಸವದತ್ತಿ ಯಲ್ಲಮ್ಮ ವಾರ್ಡ್ ನಂ. 23ಕ್ಕೆ ಸೆ. 3ರಂದು ಮತದಾನದ ಸಮಯವನ್ನು ಬೆಳಗ್ಗೆ 7ರಿಂದ ಸಂಜೆ 5ರ ವರೆಗೆ ನಿಗದಿಪಡಿಸಲಾಗಿತ್ತು. ಆದರೆ, ವಿವಿಧ ಕಾರಣಗಳಿಂದಾಗಿ ಮತದಾನ ಸಮಯವನ್ನು ಬೆಳಗ್ಗೆ 7ರಿಂದ ಸಂಜೆ 6ರ ವರೆಗೆ ರಾಜ್ಯ ಚುನಾವಣಾ ಆಯೋಗವು ವಿಸ್ತರಿಸಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ಬಲಿಷ್ಠ ಕಾರ್ಯಕರ್ತರ ಪಡೆ ಹೊಂದಿರುವುದರಿಂದ ಗೆಲುವು ನಮ್ಮದಾಗಲಿದೆ.
    ಚುನಾವಣೆ ಸಂದರ್ಭದಲ್ಲಿ ಬಂಡಾಯದ ಬಿಸಿ ಎದುರಿಸುವುದು ಸಾಮಾನ್ಯ ವಿಷಯ.
    | ಉಮೇಶ ಕತ್ತಿ, ಅರಣ್ಯ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts