More

    ಪಂಪ್‌ಸೆಟ್‌ಗಳಿಗೆ 5 ಗಂಟೆ ವಿದ್ಯುತ್ ಪೂರೈಕೆ

    ಚಿತ್ರದುರ್ಗ: ಜಿಲ್ಲೆಯ ಎಲ್ಲಾ ಕೃಷಿ ಮಾರ್ಗಗಳಿಗೆ ನಿತ್ಯ 5 ಗಂಟೆ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಬೆಂಗಳೂರಿನ ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಹಂತೇಶ ಬೀಳಗಿ ಭರವಸೆ ನೀಡಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಿಎಂ ಸೂಚನೆ ಮೇರೆಗೆ ಸೋಮವಾರ ಜಿಲ್ಲಾಮಟ್ಟದ ರೈತ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ರೈತರ ಸಮಸ್ಯೆ ಆಲಿಸಿದ ನಂತರ ಮಾತನಾಡಿದರು.

    ಕೃಷಿ ಮಾರ್ಗಗಳಲ್ಲಿ ಬರುವಂತ ತೋಟದ ಮನೆಗಳಿಗೆ ಲೈಟಿಂಗ್ ವ್ಯವಸ್ಥೆಗಾಗಿ ಮಾತ್ರ ಸಂಜೆ 6ರಿಂದ ಬೆಳಗ್ಗೆ 6ರವರೆಗೂ ನಿರಂತರವಾಗಿ ಸಿಂಗಲ್ ಫೇಸ್ ವಿದ್ಯುತ್ ಪೂರೈಸಲು ಕ್ರಮವಹಿಸಲಾಗುವುದು ಎಂದು ಆಶ್ವಾಸನೆ ನೀಡಿದರು.

    ಸಿಂಗಲ್ ಫೇಸ್ ಅವಧಿಯಲ್ಲಿ ಯಾವುದೇ ಕಾರಣಕ್ಕೂ ತೋಟದ ಮನೆಯ ದೀಪದ ಬಳಕೆ ಹೊರತುಪಡಿಸಿ ಯಾರೂ ಪಂಪ್‌ಸೆಟ್‌ಗೆ ವಿದ್ಯುತ್ ಬಳಸಬಾರದು ಎಂದು ಸೂಚನೆ ನೀಡಿದರು.

    ವಿಫಲವಾದ ವಿದ್ಯುತ್ ಪರಿವರ್ತಕಗಳನ್ನು ನಿಗದಿತ ಅವಧಿಯಲ್ಲಿ ಬದಲಾಯಿಸಬೇಕು. 11 ಕೆವಿ ಮತ್ತು ಎಲ್‌ಟಿ ಮಾರ್ಗಗಳಿಗೆ ಅಡಚಣೆ ಉಂಟು ಮಾಡುವ ಮರ-ಗಿಡಗಳನ್ನು ತೆರವು ಮಾಡಲು ಅಧಿಕಾರಿಗಳಿಗೆ ತಾಕೀತು ಮಾಡಿದರು.

    ಅಕ್ರಮ-ಸಕ್ರಮದಡಿ ಹಣ ಪಾವತಿಸಿರುವ ರೈತರಿಗೆ ಮೂಲಸೌಲಭ್ಯ ಕಲ್ಪಿಸಲು ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಹಳೆಯ ವಿದ್ಯುತ್ ತಂತಿಗಳನ್ನು ತ್ವರಿತವಾಗಿ ಬದಲಿಸಲು ಮುಂದಾಗಬೇಕು ಎಂದು ಸೂಚಿಸಿದರು.

    ಬೆಸ್ಕಾಂಗೆ ಆದಾಯದ ಮೂಲವಾದ ಉತ್ಪಾದಿತ ವಿದ್ಯುತ್ ಅನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ, ನಿಮಗೆ ಉಚಿತ ವಿದ್ಯುತ್ ಅನ್ನು ನೀಡಬೇಕಿದೆ. ಸಮತೋಲನ ಕಾಯ್ದುಕೊಳ್ಳದಿದ್ದರೆ, ಪೂರೈಕೆ ಕಷ್ಟಕರವಾಗಲಿದೆ. ಇದಕ್ಕೆ ಸಹಕಾರ ಅಗತ್ಯ ಎಂದು ಮನವಿ ಮಾಡಿದರು.

    ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ, ಬೆಸ್ಕಾಂ ತಾಂತ್ರಿಕ ನಿರ್ದೇಶಕ ಎಚ್.ಜೆ.ರಮೇಶ್, ಚಿತ್ರದುರ್ಗ ವಲಯ ಮುಖ್ಯ ಇಂಜಿನಿಯರ್ ಗೋವಿಂದಪ್ಪ, ಅಧೀಕ್ಷಕ ಇಂಜಿನಿಯರ್ ಬಿ.ಎಸ್.ಜಗದೀಶ್, ಅಧಿಕಾರಿಗಳಾದ ಜಯಣ್ಣ, ರಾಮಚಂದ್ರ, ರೇವಣಸಿದ್ದಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts