More

    ಪಂಚಮಸಾಲಿ ರಾಜ್ಯ ಕಾರ್ಯಕಾರಿಣಿ ನಾಳೆ

    ದಾವಣಗೆರೆ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲು ನೀಡಿಕೆ ವಿಳಂಬ ಹಿನ್ನೆಲೆಯಲ್ಲಿ ಬೆಳಗಾವಿಯ ಗಾಂಧಿಭವನದಲ್ಲಿ ಡಿ.12ರಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ರಾಜ್ಯ ಕಾರ್ಯಕಾರಿಣಿ ಸಭೆ ಆಯೋಜಿಸಲಾಗಿದೆ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
    ಚಳಿಗಾಲದ ವಿಧಾನಸಭಾ ಅಧಿವೇಶನದೊಳಗಾಗಿ ಅಂದರೆ ಡಿ.19ರೊಳಗೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಪಡೆದು ಮೀಸಲು ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದೆ. ಸರ್ಕಾರ ಮಾತಿನಂತೆ ನಡೆದಲ್ಲಿ ಅಭಿನಂದನೆ, ಇಲ್ಲವಾದಲ್ಲಿ ಹೋರಾಟ ನಡೆಸುವ ಕುರಿತ ರೂಪರೇಷೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಡಿ.22ರಂದು ಬೆಳಗಾವಿ ಸುವರ್ಣ ವಿಧಾನಸೌಧದೆದುರು 25 ಲಕ್ಷ ಸಮಾಜ ಬಾಂಧವರನ್ನು ಸೇರಿಸಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವುದು. ಇಲ್ಲವೇ ಹೋರಾಟದ ವಿರಾಟ್ ಪಂಚ ಶಕ್ತಿ ಸಮಾವೇಶದ ಸಿದ್ಧತೆ ಕುರಿತಂತೆ ಸಭೆಯಲ್ಲಿ ತೀರ್ಮಾನಿಸಲಾಗುವುದು. ಸಭೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್, ವಿಜಯಾನಂದ ಕಾಶೆಪ್ಪನವರ್, ಲಕ್ಷ್ಮೀ ಹೆಬ್ಬಾಳ್ಕರ್, ಎ.ಬಿ.ಪಾಟೀಲ್, ಈರಣ್ಣ ಕಡಾಡಿ, ಎಚ್.ಎಸ್.ಶಿವಶಂಕರ್ ಸೇರಿ ಹಾಲಿ ಮಾಜಿ ಜನಪ್ರತಿನಿಧಿಗಳು, ಪ್ರಮುಖರು ಭಾಗವಹಿಸುವರು ಎಂದರು.
    ಕ್ರೆಡಿಟ್‌ನ ಅಪೇಕ್ಷೆ ತಮಗಿಲ್ಲ
    ಪಂಚಮಸಾಲಿ ಸಮಾಜದ ಬೇಡಿಕೆ ಈಡೇರುವ ಸಮಯ ಹತ್ತಿರ ಬಂದಂತೆ ಕೆಲ ರಾಜಕಾರಣಿಗಳು, ಮಠಾಧೀಶರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಯಾವ ಪೀಠ ಬೀದಿಗಿಳಿದು ಹೋರಾಟ ಮಾಡಿದೆ ಎಂಬುದನ್ನು ಸಮಾಜದ ಜನರು ತಿಳಿದಿದ್ದಾರೆ. ಹೀಗಾಗಿ ಬೇಡಿಕೆ ಈಡೇರಿದಲ್ಲಿ ಅದರ ಯಶಸ್ಸು ಸಮಾಜದ ಜನರಿಗೆ ಸಲ್ಲಬೇಕು. ಕ್ರೆಡಿಟ್‌ನ ಅಪೇಕ್ಷೆ ತಮಗಿಲ್ಲ ಎಂದು ಸ್ವಾಮೀಜಿ ಸ್ಪಷ್ಟಪಡಿಸಿದರು.
    ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಅಶೋಕ್ ಗೋಪನಾಳ್, ಮುಖಂಡರಾದ ಕಾರಿಗನೂರು ರಾಘವೇಂದ್ರ, ಯೋಗೇಶ್, ಅಭಿಕಾಟನ್ ಬಕ್ಕೇಶ್, ಬಸವರಾಜ್ ಕಾರಿಗನೂರು, ಪ್ರಕಾಶ್ ಹೊನ್ನಮರಡಿ, ಸಿದ್ದಣ್ಣ ಕಂಚಿಕೆರೆ, ವಿಜಯ್ ಬೆಂಡಿಗೆರೆ, ಶಶಿ ಬಸಾಪುರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts