More

    ಪಂಚಮಸಾಲಿ ಮೀಸಲಾತಿ-  ಜ.20 ರೊಳಗೆ ನಿಲುವು ಪ್ರಕಟಿಸಲಿ – ಜಯಮೃತ್ಯುಂಜಯ ಶ್ರೀ ಒತ್ತಾಯ  

    ದಾವಣಗೆರೆ: ರಾಜ್ಯ ಸರ್ಕಾರ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ಕುರಿತಂತೆ ಜ.20ರೊಳಗೆ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ ತನ್ನ ನಿಲುವು ಪ್ರಕಟಿಸಬೇಕು ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಮಹಾಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು.
    ಬೆಳಗಾವಿ ಸುವರ್ಣಸೌಧ ಮುತ್ತಿಗೆ ಹಾಕಲು ಉದ್ದೇಶಿಸಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿ ಹಾಗೂ ಸಮಾಜದ ಸಚಿವರ ಭರವಸೆ ಮೇರೆಗೆ ಹೋರಾಟವನ್ನು ತಾತ್ಕಾಲಿಕ ಮುಂದೂಡಿ ಸರ್ಕಾರಕ್ಕೆ ಕಾಲಾವಕಾಶ ನೀಡಲಾಗಿತ್ತು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಸರ್ಕಾರಕ್ಕೆ ಕಾಲಾವಕಾಶ ನೀಡಿ 15 ದಿನವಾದರೂ ಮೀಸಲಾತಿ ನೀಡುವ ಪ್ರಕ್ರಿಯೆ ಆರಂಭಿಸಿಲ್ಲ. ಕಾನೂನು ತಜ್ಞರು, ಸಮಾಜದ ಪ್ರಮುಖರ ಸಭೆ ಕರೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಪಂಚಮಸಾಲಿ ಪೀಠದಿಂದ ಜ.14ರಂದು ಕೃಷಿ ಸಂಕ್ರಾಂತಿ ಹಾಗೂ ರಾಷ್ಟ್ರೀಯ ಬಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಬರ ಹಿನ್ನೆಲೆಯಲ್ಲಿ ಸರಳವಾಗಿ ನಡೆಸಲಾಗುವುದು. ಮೀಸಲಾತಿ ವಿಚಾರವಾಗಿ ತೆಗೆದುಕೊಳ್ಳುವ ನಿರ್ಧಾರ ಹಾಗೂ ಮುಂದಿನ ಹೋರಾಟದ ಕುರಿತು ಇದೇವೇಳೆ ಮುಖಂಡರೊಂದಿಗೆ ಚರ್ಚೆ ನಡೆಸಲಾಗುವುದು ಎಂದರು.
    ದಾವಣಗೆರೆಯಲ್ಲಿ ಒಳಪಂಗಡಗಳ ಸಭೆ: ಲಿಂಗಾಯತ ಸಮಾಜದ ಎಲ್ಲ ಒಳಪಂಗಡಗಳಿಗೆ ಒಬಿಸಿ ಮೀಸಲಾತಿ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ದಾವಣಗೆರೆಯಲ್ಲಿ ಶೀಘ್ರ ಲಿಂಗಾಯತ ಸಮಾಜದ ಎಲ್ಲ ಒಳಪಂಗಡಗಳ ಮಠಾಧೀಶರು ಹಾಗೂ ರಾಜ್ಯಾಧ್ಯಕ್ಷರ ಸಭೆ ನಡೆಸಲಾಗುವುದು ಎಂದು ಸ್ವಾಮೀಜಿ ತಿಳಿಸಿದರು.
    ಜಾತಿ ಕಾಲಂನಲ್ಲಿ ಉಪಜಾತಿ ಹೆಸರು ಬರೆಸಬಾರದು ಎಂಬುದಾಗಿ ವೀರಶೈವ ಮಹಾಸಭಾ ನಿರ್ಣಯ ಕೈಗೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ. ಏನು ಬರೆಸಬೇಕೆಂಬುದರ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.
    ಮೀಸಲಾತಿ ಪಡೆದ ಒಳಪಂಗಡಗಳು ಉಪಜಾತಿ ಹೆಸರು ಬರೆಸದಿರಬಹುದು. ಆದರೆ, ಜಾತಿ ಕಾಲಂನಲ್ಲಿ ಒಳಪಂಗಡದ ಹೆಸರನ್ನು ಬರೆಸುವುದು ನಮ್ಮ ಅಸ್ಮಿತೆ ಹಾಗೂ ಹಕ್ಕು. ಮಹಾಸಭಾ ನಿರ್ಣಯ ಒಳಪಂಗಡಗಳ ಸಾಮಾಜಿಕ ನ್ಯಾಯಕ್ಕೆ ತೊಡಕಾಗಬಾರದು. ಇದರ ಬಗ್ಗೆ ಮಹಾಸಭಾ ಮರು ಪರಿಶೀಲನೆ ನಡೆಸಬೇಕು ಎಂದು ಸಲಹೆ ನೀಡಿದರು.
    ರಾಜ್ಯದಲ್ಲಿ ವೈಜ್ಞಾನಿಕವಾಗಿ ಜಾತಿಗಣತಿ ಆಗಬೇಕು ಎಂದು ಸುತ್ತೂರು ಶ್ರೀಗಳು ನೀಡಿರುವ ಹೇಳಿಕೆಗೆ ಬೆಂಬಲಿಸಲಾಗುವುದು. ಸರ್ಕಾರ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕು ಎಂದರು.
    ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ಹೊಳೆಸಿರಿಗೆರೆ ಪರಮೇಶ್ವರಗೌಡ್ರು, ಅಶೋಕ್ ಗೋಪನಾಳ್, ವಕೀಲ ಯೋಗೀಶ್, ಮಂಜು ಪೈಲ್ವಾನ್, ಈಶ್ವರಪ್ಪ ಇತರರು ಸುದ್ದಿಗೋಷ್ಠಿಯಲ್ಲಿದ್ದರು.
    ಲಿಂಗಾಯತ ಒಳಪಂಗಡಗಳ ಶಕ್ತಿ ಪ್ರದರ್ಶನ
    ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹಾಗೂ ಒಳಪಂಗಡಗಳ ಒಬಿಸಿ ಮೀಸಲಾತಿ ಕುರಿತಂತೆ ದಾವಣಗೆರೆಯಲ್ಲಿ 2024ರ ಫೆಬ್ರವರಿ ಅಂತ್ಯದೊಳಗೆ ಲಿಂಗಾಯತ ಸಮಾಜದ ಒಳಪಂಗಡಗಳ ಸಮಾವೇಶದೊಂದಿಗೆ ಶಕ್ತಿ ಪ್ರದರ್ಶನ ಮಾಡಲಾಗುವುದು ಎಂದು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ತಿಳಿಸಿದರು.
    ದಶದಿಕ್ಕುಗಳಿಂದ ಪಂಚಮಸಾಲಿ ಜತೆಗೆ ಎಲ್ಲ ಒಳಪಂಗಡಗಳ ನಡಿಗೆ ದಾವಣಗೆರೆಯ ಕಡೆಗೆ ನಡೆಯಲಿದ್ದು, ಸಮಾವೇಶದಲ್ಲಿ ಸುಮಾರು 10 ಲಕ್ಷ ಜನರನ್ನು ಸೇರಿಸುವ ಮೂಲಕ ಸರ್ಕಾರದ ಕಣ್ತೆರೆಸುವ ಕೆಲಸ ಮಾಡಲಾಗುವುದು ಎಂದರು.

    ನನಗೆ ಆಹ್ವಾನಿಸಿಲ್ಲ
    ಜಿಲ್ಲೆ ಹಾಗೂ ರಾಜ್ಯದಲ್ಲಿದ್ದ ಸಮುದಾಯದ ಅನೇಕ ಮುಖಂಡರನ್ನು ವೀರಶೈವ ಮಹಾಸಭಾ ಅಧಿವೇಶನದಲ್ಲಿ ಸರಿಯಾಗಿ ತೊಡಗಿಸಿಕೊಳ್ಳಲಿಲ್ಲ ಎಂದು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಬೇಸರ ವ್ಯಕ್ತಪಡಿಸಿದರು.
    ಮಹಾಸಭಾ ಎಲ್ಲ ಒಳಪಂಗಡಗಳನ್ನು ಒಳಗೊಂಡಿದೆ. ಸಾವಿರಾರು ಮಠಾಧೀಶರನ್ನು ಆಹ್ವಾನಿಸಿ ಒಂದೇ ವೇದಿಕೆಗೆ ಕರೆತಂದು ಕಾರ್ಯಕ್ರಮ ನಡೆಸಿದ್ದರೆ ಸಮುದಾಯದ ಶಕ್ತಿ ಪ್ರದರ್ಶನ ಆಗುತ್ತಿತ್ತು. ನನ್ನ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಹಾಕಿಸಿದ್ದಾರೆ. ಆದರೆ, ಯಾರೂ ಕೂಡ ಅಧಿವೇಶನಕ್ಕೆ ಕರೆದಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts