More

    ನ್ಯಾಯಬೆಲೆ ಅಂಗಡಿ ಎದುರು ಜನಜಂಗುಳಿ

    ರಾಣೆಬೆನ್ನೂರ: ನಗರ ಸೇರಿ ತಾಲೂಕಿನಾದ್ಯಂತ ಪಡಿತರ ವಿತರಣೆಗೆ ಸರ್ಕಾರ ಆದೇಶಿಸಿದೆ. ಜತೆಗೆ ಪಡಿತರ ಪಡೆದುಕೊಳ್ಳುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ತಿಂಗಳ ಎಲ್ಲ ದಿನವೂ ನ್ಯಾಯಬೆಲೆ ಅಂಗಡಿ ತೆರೆದಿರಬೇಕು ಎಂದೂ ಸೂಚಿಸಿದೆ.

    ಆದರೆ, ಬಹುತೇಕ ಕಡೆ ಸರ್ಕಾರದ ಆದೇಶ ಪಾಲನೆಯಾಗುತ್ತಿಲ್ಲ. ನ್ಯಾಯಬೆಲೆ ಅಂಗಡಿಕಾರರು ಮನಬಂದಾಗ ಅಂಗಡಿ ತೆರೆಯುತ್ತಿರುವ ಕಾರಣ ಜನ ಒಟ್ಟಿಗೆ ಪಡಿತರ ಪಡೆಯಲು ಬರುತ್ತಿದ್ದಾರೆ. ಹೀಗಾಗಿ, ನ್ಯಾಯಬೆಲೆ ಅಂಗಡಿಗಳ ಎದುರು ಜನಜಂಗುಳಿ ಸೇರುತ್ತಿದೆ.

    ನ್ಯಾಯಬೆಲೆ ಅಂಗಡಿಕಾರರು ಸಾಮಾನ್ಯ ದಿನದಲ್ಲಿ ಬೆಳಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ಹಾಗೂ ಸಂಜೆ 4 ಗಂಟೆಯಿಂದ ರಾತ್ರಿ 8ರವರೆಗೆ ಅಂಗಡಿ ತೆರೆಯಬೇಕು. ಆದರೆ, ನ್ಯಾಯಬೆಲೆ ಅಂಗಡಿಯ ಯಾರೊಬ್ಬರೂ ಪೂರ್ಣ ಸಮಯ ಅಂಗಡಿ ತೆರೆಯುತ್ತಿಲ್ಲ. ಬದಲಾಗಿ ಬೆಳಗ್ಗೆ 2 ಗಂಟೆ ಅಥವಾ ಸಂಜೆ ಒಂದೆರಡು ಗಂಟೆ ಮಾತ್ರ ಅಂಗಡಿ ತೆರೆಯುತ್ತಿದ್ದಾರೆ. ಅಲ್ಲದೆ, ‘ಪಡಿತರ ಖಾಲಿಯಾದರೆ ನಮಗೆ ಗೊತ್ತಿಲ್ಲ’ ಎಂದು ಪಡಿತರದಾರರಲ್ಲಿ ಆತಂಕ ಹುಟ್ಟಿಸುತ್ತಿದ್ದಾರೆ. ಹೀಗಾಗಿ, ಪಡಿತರದಾರರು ನ್ಯಾಯಬೆಲೆ ಅಂಗಡಿಗಳಿಗೆ ಮುಗಿ ಬೀಳುತ್ತಿದ್ದಾರೆ.

    ಕೆಲ ನ್ಯಾಯಬೆಲೆ ಅಂಗಡಿಗಳ ಎದುರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಾಕ್ಸ್ ಗುರುತು ಮಾಡಿದ್ದಾರೆ. ಆದರೆ, ಜನ ಬಾಕ್ಸ್​ಗಳಲ್ಲಿ ನಿಲ್ಲದೆ, ನಿಯಮ ಉಲ್ಲಂಘಿಸುತ್ತಿದ್ದಾರೆ. ಇನ್ನೂ ಕೆಲ ಅಂಗಡಿಕಾರರು ಬಾಕ್ಸ್ ಸಹ ಗುರುತು ಮಾಡಿಲ್ಲ. ಹೀಗಾಗಿ, ಜನ ಗುಂಪುಗೂಡಿ ನಿಲ್ಲುತ್ತಿದ್ದಾರೆ.

    ಕ್ರಮ ವಹಿಸಬೇಕಿದೆ ಅಧಿಕಾರಿಗಳು: ಕಂದಾಯ, ಆಹಾರ ಮತ್ತು ನಾಗರಿಕ ಇಲಾಖೆ, ಪೊಲೀಸ್, ನಗರಸಭೆ ಅಧಿಕಾರಿಗಳು ಸೇರಿ ಯಾರೊಬ್ಬರೂ ಇತ್ತ ಕಡೆ ಗಮನ ಹರಿಸುತ್ತಿಲ್ಲ. ನ್ಯಾಯಬೆಲೆ ಅಂಗಡಿಯವರು ಕೂಡ ಸಾಮಾಜಿಕ ಅಂತರ ಕಾಯ್ದುಕೊಂಡು ಬಂದವರಿಗೆ ಮಾತ್ರ ಪಡಿತರ ನೀಡಲಾಗುವುದು ಎಂದು ಕಟ್ಟಪ್ಪಣೆ ಸಹ ಮಾಡುತ್ತಿಲ್ಲ. ಆದ್ದರಿಂದ ನ್ಯಾಯಬೆಲೆ ಅಂಗಡಿಗಳ ಎದುರು ಜನರನ್ನು ನಿಯಂತ್ರಿಸುವವರೇ ಇಲ್ಲದಂತಾಗಿದೆ.

    ಜಿಲ್ಲೆಯಲ್ಲಿ ಈವರೆಗೂ ಕರೊನಾ ಸೋಂಕು ದೃಢಪಟ್ಟಿಲ್ಲ. ಆದರೆ, ನಗರ ಸೇರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿಯ ಹಲವಾರು ಜನರನ್ನು ಹೋಂ ಕ್ವಾರೆಂಟೈನ್​ನಲ್ಲಿಡಲಾಗಿದೆ. ಆದ್ದರಿಂದ ತಾಲೂಕು ಆಡಳಿತ ಇನ್ನಷ್ಟು ದಿನಗಳ ಕಾಲ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಸೇರಿ ಸರ್ಕಾರ ಸೂಚಿಸಿದ ಮಾರ್ಗದರ್ಶಿಗಳನ್ನು ಪಾಲಿಸುವಂತೆ ಜನತೆಗೆ ತಿಳಿಹೇಳಬೇಕಿದೆ. ಸರ್ಕಾರ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

    ಸರ್ಕಾರ ಸೂಚಿಸಿದಂತೆ ಜನರಿಗೆ ಪಡಿತರ ಸಂಪೂರ್ಣ ತಲುಪಿಸುವವರೆಗೂ ನ್ಯಾಯಬೆಲೆ ಅಂಗಡಿ ಬಂದ್ ಮಾಡಬಾರದು. ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು. ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.
    | ಕೆ.ಎಸ್. ವಡ್ಡನಕಟ್ಟೆ, ಆಹಾರ ಇಲಾಖೆ ತಾಲೂಕು ನಿರೀಕ್ಷಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts