More

    ನೇಪಥ್ಯಕ್ಕೆ ಸರಿದ ಕುಂಬಾರಿಕೆ: ಕುಂಬಾರರಿಗೆ ಆರ್ಥಿಕ ಸಂಕಷ್ಟ ಕ್ಷೀಣಿಸುತ್ತಿರುವ ಮಡಕೆ ವ್ಯಾಪಾರ

    ಎಂ.ರಾಮೇಗೌಡ ನಂದಗುಡಿ
    ಬೇಸಿಗೆಯಲ್ಲಿ ಬೇಡಿಕೆ ಕುದುರಿಸಿಕೊಳ್ಳುವ ಮಡಕೆ ವ್ಯಾಪಾರಕ್ಕೆ ಇತ್ತೀಚಿನ ದಿನಗಳಲ್ಲಿ ಕುತ್ತು ಬರುತ್ತಿದೆ. ಇದರಿಂದ ಇದೇ ವೃತ್ತಿ ಅವಲಂಬಿಸಿರುವ ಕುಂಬಾರ ಸಮುದಾಯ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ.
    ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಕೆಲ ಗುಡಿ ಕೈಗಾರಿಕೆಗಳು ತಮ್ಮ ವಿಶಿಷ್ಟತೆಗಳಿಂದ ಇನ್ನೂ ಬೇಡಿಕೆ ಉಳಿಸಿಕೊಂಡಿವೆ. ಅದರಲ್ಲಿ ಮಡಕೆ ತಯಾರಿಕೆಯೂ ಒಂದು. ಕೆರೆಗಳ ಒತ್ತುವರಿ, ಮಣ್ಣಿನ ಕೊರತೆ ಜತೆಗೆ ಅನೇಕ ಕಾರಣಗಳಿಂದ ಈ ಗುಡಿ ಕೈಗಾರಿಕೆ ನೇಪಥ್ಯಕ್ಕೆ ಸರಿಯುವಂತಾಗಿದೆ.
    ಹೊಸಕೋಟೆ ತಾಲೂಕಿನ ಹಲವು ಗ್ರಾಮಗಳಲ್ಲಿ ಕುಂಬಾರಿಕೆ ನಂಬಿ ಜೀವನ ಸಾಗಿಸುತ್ತಿರುವ ನೂರಾರು ಕುಟುಂಬಗಳಿದ್ದು, ವರ್ಷದಲ್ಲಿ ಮೂರ‌್ನಾಲ್ಕು ತಿಂಗಳು ಆದಾಯ ಕಾಣುವ ಇವರು ಇಡೀ ವರ್ಷ ಮಡಕೆ ತಯಾರಿಕೆಯಲ್ಲೇ ಜೀವನ ದೂಡುತ್ತಾರೆ. ಮಡಕೆಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಬೇಸಿಗೆಯಲ್ಲಿ ಹೊಸಕೋಟೆ-ಮದನಪಲ್ಲಿ, ಹೊಸಕೋಟೆ-ಕೋಲಾರ ರಾಜ್ಯ ಹೆದ್ದಾರಿ ಅಂಚಿನಲ್ಲಿ ಅಂಗಡಿಗಳನ್ನು ಇಟ್ಟು ವ್ಯಾಪಾರ ಮಾಡುತ್ತಾರೆ, ಬೇಸಿಗೆ ಹಿನ್ನೆಲೆಯಲ್ಲಿ ಹಿಂದಿನ ದರಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಮಡಕೆಗಳು ಮಾರಾಟವಾಗುತ್ತಿದ್ದರೂ ಬೆಲೆಯಲ್ಲಿ ಆಗಿರುವ ಹೆಚ್ಚಳದ ಲಾಭ ತಲುಪುತ್ತಿಲ್ಲ ಎಂಬುದು ಇವರ ಅಳಲಾಗಿದೆ.


    ಮಡಕೆ ಎಲ್ಲರಿಗೂ ಅಚ್ಚುಮೆಚ್ಚು: ಮಡಕೆಗಳು ಬಡ, ಮಧ್ಯಮ, ಶ್ರೀಮಂತ ವರ್ಗದವರಿಗೂ ಅಚ್ಚುಮೆಚ್ಚು, ಈ ಮಡಕೆಗಳನ್ನು ತಯಾರಿಸಲು ಕೆಂಪು ಮತ್ತು ಕಪ್ಪು ಮಣ್ಣನ್ನೇ ಬಳಕೆ ಮಾಡಲಾಗುತ್ತಿದ್ದು, ಮಣ್ಣಿನಲ್ಲಿರುವ ಹಲವು ಖನಿಜಾಂಶಗಳು ಮಡಕೆಯಲ್ಲಿ ಸಂಗ್ರಹಿಸಿದ ನೀರಿನ ಮೂಲಕ ದೇಹ ಸೇರುವುದರಿಂದ ಆರೋಗ್ಯಕ್ಕೆ ಸಹಕಾರಿಯಾಗಿದೆ ಎನ್ನಲಾಗಿದ್ದು ಇದಕ್ಕಾಗಿ ಜನರು ಮಡಕೆಗೆ ಮೊರೆ ಹೋಗುತ್ತಿದ್ದಾರೆ, ಆದರೆ ನಗರೀಕರಣದ ಭರದಲ್ಲಿ ಮಡಕೆ ಖರೀದಿ ಪ್ರಮಾಣ ಕಡಿಮೆಯಾಗುತ್ತಿದ್ದು, ವ್ಯಾಪಾರ ಅಷ್ಟಕ್ಕಷ್ಟೆ ಎಂಬಂತಾಗಿದೆ.

    ಮಾರ್ಡನ್ ಲುಕ್: ಈಗಿನ ಕಾಲಕ್ಕೆ ತಕ್ಕಂತೆ ಮಡಕೆಗಳಿಗೂ ಮಾಡರ್ನ್ ಲುಕ್ ಬರುವಂತೆ ನಲ್ಲಿಗಳನ್ನು ಅಳವಡಿಸಲಾಗಿದೆ. ಮಣ್ಣಿನ ಮುಚ್ಚಳ (ತಟ್ಟೆ) ಅಥವಾ ತೇವಾಂಶದ ಬಟ್ಟೆಯಿಂದ ಮುಚ್ಚಿಡಬಹುದು. ಹೈಟೆಕ್ ಜೀವನಕ್ಕೆ ಹೊಂದಿಕೊಳ್ಳುವಂತೆ ಮಡಕೆಗಳನ್ನು ಮನೆಗಳಲ್ಲಿ ಇಟ್ಟುಕೊಳ್ಳಲು ಅನುಕೂಲವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಇಂಥ ಮಡಕೆಗಳಿಗೆ ಬೇಡಿಕೆ ಕುದುರುತ್ತಿದ್ದು, ಕುಂಬಾರರ ಮನದಲ್ಲಿ ತುಸು ಚೇತರಿಕೆ ಕಂಡುಬರುತ್ತಿದೆ.

    ತಳ್ಳುವ ಗಾಡಿಯಲ್ಲಿ ಊರಿಂದ ಊರಿಗೆ ಅಲೆದು ಮಡಕೆ ಮಾರುತ್ತೇವೆ. ಬೇಸಿಗೆಯಲ್ಲಿ ಆದಾಯ ಪರವಾಗಿಲ್ಲ, ಸ್ಟೀಲ್, ಅಲ್ಯೂಮಿನಿಯಂ ಪಾತ್ರೆಗಳು ಕುಂಬಾರನನ್ನು ಮೂಲೆಗೆ ತಳ್ಳುತ್ತಿವೆ. ಕುಲಕಸುಬಿಗೆ ಸರ್ಕಾರದಿಂದ ಈವರೆಗೂ ಸೌಲಭ್ಯ ದೊರೆಯುತ್ತಿಲ್ಲ.
    ರಾಮಪ್ಪ ಮಡಕೆ ವ್ಯಾಪಾರಿ, ಕುಂಬಾರ ದೊಡ್ಡಹುಲ್ಲೂರು ಗೇಟ್

    ಕುಶಲ ಕರ್ಮಿಗಳು, ಕುಂಬಾರ ವೃತ್ತಿಗೆ ಸಂಬಂಧಿಸಿದಂತೆ 2022-23ಸಾಲಿನಲ್ಲಿ ಸರ್ಕಾರದಿಂದ ಒಂದು ಕುಟುಂಬಕ್ಕೆ 50 ಸಾವಿರ ರೂ. ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸ್ವೀಕರಿಸಲು ಜಿಲ್ಲೆಯ ಎಲ್ಲ ಗ್ರಾಪಂಗೂ ಮಾಹಿತಿ ನೀಡಲಾಗಿದೆ. ಮುಂದಿನ ದಿನದಲ್ಲಿ ಸಾಲ ವಿತರಿಸಲಾಗುವುದು.
    ನರೇಂದ್ರ ಬಾಬು ಜಂಟಿ ನಿರ್ದೇಶಕರು, ಸಣ್ಣ ಕೈಗಾರಿಕೆ ಇಲಾಖೆ, ಬೆಂ.ಗ್ರಾಮಾಂತರ ಜಿಲ್ಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts