More

    ನೆಲಮಂಗಲದಲ್ಲಿ ರಾಜಕಾಲುವೆ ಒತ್ತುವರಿ ತೆರವು, ಶೆಡ್, ಶೌಚಗೃಹ ನಿರ್ಮಿಸಿಕೊಂಡಿದ್ದ ಖಾಸಗಿ ವ್ಯಕ್ತಿ, ಮಳೆಗಾಲದಲ್ಲಿ ಭಾರಿ ತೊಂದರೆ ಹಿನ್ನೆಲೆ ಜನರ ದೂರು

    ನೆಲಮಂಗಲ: ನಗರಸಭೆ ವ್ಯಾಪ್ತಿಯ 12 ಮತ್ತು 16 ನೇ ವಾರ್ಡ್‌ನಲ್ಲಿದ್ದ ರಾಜಕಾಲುವೆಯನ್ನು ಖಾಸಗಿ ವ್ಯಕ್ತಿಯೊಬ್ಬರು ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ಕಾರಿನ ಶೆಡ್ ಮತ್ತು ಶೌಚಗೃಹವನ್ನು ನಗರಸಭೆ ಅಧಿಕಾರಿಗಳು ಮಂಗಳವಾರ ತೆರವುಗೊಳಿಸಿದರು.

    ನಗರದ ಸರ್ವೇ ನಂ.165/8ರಲ್ಲಿ ಹಾದು ಹೋಗಿರುವ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಶೆಡ್ ಹಾಗೂ ಶೌಚಗೃಹ ನಿರ್ಮಿಸಿದ್ದರಿಂದ, ಮಳೆಗಾಲದಲ್ಲಿ ಭಾರಿ ತೊಂದರೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಜನರು ಇದನ್ನು ತೆರವುಗೊಳಿಸುವಂತೆ ಪೌರಾಯುಕ್ತ ಅವರಿಗೆ ದೂರು ನೀಡಿದ್ದರು.

    ಈ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನ ಪೊಲೀಸರ ಸಹಕಾರದಲ್ಲಿ ಕಾರ್ಯಾಚರಣೆ ನಡೆಸಿದ ನಗರಸಭೆ ಅಧಿಕಾರಿಗಳು, ಒತ್ತುವರಿಯನ್ನು ತೆರವುಗೊಳಿಸಿದರು.

    ನಗರಸಭೆ ಸದಸ್ಯರಾದ ಎನ್. ಗಣೇಶ್, ಆಂಜಿನಪ್ಪ, ಮುಖಂಡ ನಾರಾಯಣ್‌ರಾವ್, ನಗರಸಭೆ ಪ್ರಭಾರ ಎಇಇ ತಿಮ್ಮೇಗೌಡ, ಜೆಇ ಶ್ರೀನಿವಾಸ್‌ಮೂರ್ತಿ, ಕಂದಾಯ ವಸೂಲಿಗಾರ ಪ್ರವೀಣ್ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

    ಹಿಂದೆಯೇ ಪರಿಶೀಲಿಸಿದ್ದ ಅಧಿಕಾರಿಗಳು: ಸಾರ್ವಜನಿಕರ ದೂರು ಬಂದ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದರು. ರಾಜಕಾಲುವೆ ಮೇಲೆ ಶೆಡ್ ಹಾಗೂ ಶೌಚಗೃಹ ನಿರ್ಮಿಸಿರುವ ಬಗ್ಗೆ ಅಗತ್ಯ ದಾಖಲೆಗಳೊಂದಿಗೆ ಸ್ಪಷ್ಟನೆ ನೀಡುವಂತೆ ನೋಟಿಸ್ ಜಾರಿ ಮಾಡಿದ್ದರು. ಆದರೂ ಆ ಜಾಗದ ಮಾಲೀಕರು ಯಾವುದೇ ದಾಖಲೆಗಳನ್ನು ಒದಗಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ನಡೆಸಿದ್ದಾಗಿ ಪೌರಾಯುಕ್ತ ಎಲ್. ಮಂಜುನಾಥಸ್ವಾಮಿ ತಿಳಿಸಿದರು.

    ಕಾಲಾವಕಾಶ ನೀಡದ ಅದಿಕಾರಿಗಳು: ರಾಜಕಾಲುವೆ ಒತ್ತುವರಿ ಆಗಿದ್ದರೆ, ಅದನ್ನು ಪರಿಶೀಲಿಸಿ ನೋಟಿಸ್ ಜಾರ ಮಾಡಬೇಕು. ಅದಕ್ಕೆ ಉತ್ತರಿಸಲು ಸಾಕಷ್ಟು ಕಾಲಾವಕಾಶ ನೀಡಬೇಕು. ಆದರೆ, ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಿರುವ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಏಕಾಏಕಿ ತೆರವು ಕಾರ್ಯಾಚರಣೆ ನಡೆಸಿದ್ದಾರೆ ಎಂದು ಶೆಡ್ ಮಾಲೀಕ ಗಂಗಾಧರ್‌ಚಾರ್ ಆರೋಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts