More

    ನೆಲದ ಮೇಲೆ ಕುಳಿತು ಮಕ್ಕಳು ಪಾಠ ಕೇಳುವುದು ಹೇಗೆ?; ಕೆಜಿಎಫ್​ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಿಬ್ಬಂದಿಗೆ ಶಾಸಕಿ ತರಾಟೆ

    ಕೆಜಿಎಫ್: ಕಾಲೇಜಿನ ವಿದ್ಯಾರ್ಥಿಗಳು ನೆಲದ ಮೇಲೆ ಕುಳಿತು ಪಾಠ ಕೇಳುವುದಾದರೂ ಹೇಗೆ ? ಪದವಿ ವಿದ್ಯಾರ್ಥಿಗಳು ಚಿಕ್ಕ ಮಕ್ಕಳಾ?, ಉಪನ್ಯಾಸಕರಾದ ನಿಮಗೆ ವಿದ್ಯಾರ್ಥಿಗಳ ಮೇಲೆ ಅಷ್ಟು ಕಾಳಜಿ ಇಲ್ಲವೇ?
    ಡೆಸ್ಕ್​ ಇಲ್ಲದೆ ಇರುವುದನ್ನು ಯಾಕೆ ನನ್ನ ಗಮನಕ್ಕೆ ತರಲಿಲ್ಲ ?ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಸೇರಿದಂತೆ ಸಿಬ್ಬಂದಿಗೆ ಶಾಸಕಿ ಎಂ. ರೂಪಕಲಾ ತರಾಟೆಗೆ ತೆಗೆದುಕೊಂಡರು.

    ಸೋಮವಾರ ನಗರದ ಸರ್ಕಾರಿ ಕಾಲೇಜಿಗೆ ಭೇಟಿ ನೀಡಿ, ಕಾಲೇಜಿನಲ್ಲಿ ಉತ್ತಮ ಬೋಧಕ ವರ್ಗ ಇದೆ. ಆದರೆ ವಿದ್ಯಾರ್ಥಿಗಳನ್ನು ನೆಲದ ಮೇಲೆ ಕುಳ್ಳಿರಿಸಿ ಬೋಧಿಸಲು ನಿಮಗೆ ಹೇಗೆ ಮನಸ್ಸು ಬರುತ್ತಿದೆ?
    ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ 2000ಕ್ಕೂ ಹೆಚ್ಚಳವಾದ ಹಿನ್ನೆಲೆಯಲ್ಲಿ ಡೆಸ್ಕ್​ಗಳ ಕೊರತೆ ಬಂದಿರುವುದನ್ನು ನನ್ನ ಗಮನಕ್ಕೆ ತಂದಿದ್ದರೆ, ಒಂದೇ ವಾರದಲ್ಲಿ ಅವಶ್ಯವಿರುವ ಡೆಸ್ಕ್​ಗಳನ್ನು ಒದಗಿಸಿಕೊಡುತ್ತಿದ್ದೆ ಎಂದರು.

    ಸ್ವಚ್ಛತೆಯ ಕುರಿತು ಪಾಠ ಮಾಡಿದ ಶಾಸಕಿ: ಕಾಲೇಜಿನ ಕೊಠಡಿಗಳನ್ನು ಸ್ವಚ್ಛಗೊಳಿಸಲು ಮೂವರನ್ನು ನೇಮಕ ಮಾಡಿಕೊಂಡಿದ್ದೀರಿ, ಸಮರ್ಪಕ ಸ್ವಚ್ಛತೆ ಕಾರ್ಯ ನಡೆಯುತ್ತಿಲ್ಲ ಎಂದು ವಿದ್ಯಾರ್ಥಿಗಳು ದೂರು ನೀಡಿದ್ದಾರೆ. ಕನಿಷ್ಠ ವಾರಕ್ಕೊಮ್ಮೆ ಕೊಠಡಿಗಳನ್ನು ಸ್ವಚ್ಛಗೊಳಿಸಿದ್ದೀರಾ? ಎಂದು ಪ್ರಶ್ನಿಸಿದರು. ಇನ್ನು ಮುಂದೆ ಪ್ರತಿ ದಿನ ವಿದ್ಯಾರ್ಥಿಗಳು ಬರುವಷ್ಟರಲ್ಲಿ ಕಾಲೇಜಿನ ಕೊಠಡಿಗಳು ಸ್ವಚ್ಛವಾಗಿರಬೇಕು. ವಿದ್ಯಾರ್ಥಿಗಳಿಂದ ದೂರು ಬಂದಲ್ಲಿ ಸ್ವಚ್ಛತೆಗೆ ಬೇರೆಯವರನ್ನು ನೇಮಕ ಮಾಡಿಕೊಳ್ಳಬೇಕಾಗುತ್ತದೆ ಎಂದು ಡಿ. ಗ್ರೂಪ್​ ನೌಕರರಿಗೆ ಎಚ್ಚರಿಸಿದರು.

    ಶೌಚಗೃಹದ ಬೀಗ ತೆಗೆಸಿದ ಶಾಸಕಿ: ಗುತ್ತಿಗೆದಾರರು ಹೊಸ ಕಟ್ಟಡದ ಶೌಚಗೃಹಕ್ಕೆ ಬೀಗ ಹಾಕಿದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗಿತ್ತು.
    ಗುತ್ತಿಗೆದಾರರನ್ನು ಸ್ಥಳಕ್ಕೆ ಕರೆಯಿಸಿ, ಬೀಗ ತೆಗೆಸಿ ಬಳಸುವಂತೆ ವಿದ್ಯಾರ್ಥಿಗಳಿಗೆ ಶೌಚಗೃಹದ ಬೀಗವನ್ನು ಹಸ್ತಾಂತರಿಸಿದರು.

    ನಗರಸಭೆಯಿಂದ 100 ಡೆಸ್ಕ್​: ನಗರಸಭೆಯ 10 ಲಕ್ಷ ರೂ. ಅನುದಾನದಲ್ಲಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ 100 ಡೆಸ್ಕ್​ ಒದಗಿಸಿಕೊಡುವುದಾಗಿ ಎಂ. ರೂಪಕಲಾ ಹೇಳಿದರು.
    ಮೊದಲು ಕಾಲೇಜಿಗೆ ಅವಶ್ಯವಿರುವ ಪೀಠೋಪಕರಣಗಳ ಕೊರತೆ ಕುರಿತು ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ, 450 ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಕೂಡಲೇ ಅಗತ್ಯವಿರುವ ಡೆಸ್ಕ್​ಗಳನ್ನು ಪೂರೈಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ಕಾಲೇಜಿಗೆ ಬಸ್​ಸೌಲಭ್ಯ ಕಲ್ಪಿಸಿ: ಸ್ಥಳಕ್ಕೆ ಸಾರಿಗೆ ಇಲಾಖೆಯ ಅಧಿಕಾರಿಗಳನ್ನು ಕರೆಸಿಯಿಸಿ ಬೆಳಿಗ್ಗೆ 9ಕ್ಕೆ ನಗರಸಭೆ ಬಸ್​ ನಿಲ್ದಾಣದಿಂದ ಕಾಲೇಜಿಗೆ ಬಸ್​ ಸೌಲಭ್ಯವನ್ನು ಕೂಡಲೇ ಕಲ್ಪಿಸಬೇಕು ಎಂದು ಶಾಸಕಿ ಅಧಿಕಾರಿಗೆ ಆದೇಶಿಸಿದರು.
    ವಾರದೊಳಗೆ ಅಗತ್ಯ ಬಸ್​ ಸೇವೆಯನ್ನು ಒದಗಿಸುವುದಾಗಿ ಅಧಿಕಾರಿ ಭರವಸೆ ನೀಡಿದರು.

    ಲೆಕ್ಕ ಪತ್ರ ಕೇಳಿದ ಶಾಸಕಿ: ಕಾಲೇಜು ಸಮಿತಿಯ ಅಧ್ಯೆಯಾಗಿರುವ ಶಾಸಕಿ ಕಳೆದ ವರ್ಷ ಹಾಗೂ ಪ್ರಸ್ತುತ ವರ್ಷದ ಲೆಕ್ಕದ ಪುಸ್ತಕ ತೆಗೆದು ಪರಿಶೀಲಿಸಿದರು.
    ಪ್ರತಿ ತಿಂಗಳು ಖರ್ಚಿನ ಕುರಿತು ಶಾಸಕರು ವಿವರಣೆ ನೀಡುವಂತೆ ಸಿಬ್ಬಂದಿಗೆ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts