More

    ನೆಲಕಚ್ಚಿದ ಅಡಕೆ ಬೆಳೆ

    ಕಾರವಾರ/ಸಿದ್ದಾಪುರ: ಗಾಳಿ-ಮಳೆಯ ರೌದ್ರಾವತಾರಕ್ಕೆ ಜಿಲ್ಲೆಯ ಅಡಕೆ ಬೆಳೆಗಾರರು ಕಂಗಾಲಾಗಿದ್ದಾರೆ. ಶಿರಸಿ, ಸಿದ್ದಾಪುರ, ಯಲ್ಲಾಪುರ, ಕುಮಟಾ, ಹೊನ್ನಾವರ ಭಾಗದ ಪ್ರಮುಖ ಆರ್ಥಿಕ ಬೆಳೆ ಕಳೆದ ಒಂದು ವಾರದ ಗಾಳಿಮಳೆಗೆ ನೆಲಕಚ್ಚಿದ್ದು ತೋಟಿಗರ ಗೋಳು ಕೇಳುವವರಿಲ್ಲದಂತಾಗಿದೆ.

    ಗಾಳಿ-ಮಳೆಯಿಂದ ಒಂದು ಏಕರೆ ಅಡಕೆ ತೋಟದಲ್ಲಿ ಹತ್ತಕ್ಕೂ ಹೆಚ್ಚು ಕ್ವಿಂಟಾಲ್ ಅಡಕೆ ಮಿಳ್ಳೆಗಳು ಉದುರಿವೆ. ಅಲ್ಲದೇ ಹತ್ತಾರು ಅಡಕೆ ಮರಗಳು ಮುರಿದು ಬಿದ್ದಿವೆ. ಕೆಲವೆಡೆ ಹಳ್ಳ ತೋಟಕ್ಕೆ ಹತ್ತಿ ಸಾಕಷ್ಟು ಹಾನಿಯಾಗಿದೆ. ಪ್ರತಿ ವರ್ಷ ಮಳೆಗಾಲದ ಮಧ್ಯಂತರದಲ್ಲಿ ಅಡಕೆ ಬೆಳೆಗಾರರ ಪಡಿಪಾಟಲು ಹೆಚ್ಚುತ್ತಿದ್ದು, ಪರಿಹಾರ ಶೂನ್ಯವಾಗಿದೆ.

    400 ಹೆಕ್ಟೇರ್​ಗೂ ಅಧಿಕ: ಕಳೆದ ಒಂದು ವಾರದಲ್ಲಿ ಉಂಟಾದ ಗಾಳಿ ಮಳೆಗೆ ಜಿಲ್ಲೆಯಲ್ಲಿ ಒಟ್ಟು 510 ಹೆಕ್ಟೇರ್ ತೋಟಗಾರಿಕೆ ಬೆಳೆಗೆ ಹಾನಿಯಾಗಿದೆ. ಅದರಲ್ಲಿ ಸುಮಾರು 400 ಹೆಕ್ಟೇರ್​ಗಳಷ್ಟು ಅಡಕೆ ಬೆಳೆ ಹಾನಿಯಾಗಿದೆ ಎಂದು ತೋಟಗಾರಿಕೆ ಇಲಾಖೆ ಲೆಕ್ಕ ಹಾಕಿದೆ. ಅದರಲ್ಲಿ ಮುಖ್ಯವಾಗಿ ಸಿದ್ದಾಪುರ, ಶಿರಸಿ, ಯಲ್ಲಾಪುರ ಭಾಗದಲ್ಲಿ ಹೆಚ್ಚಿದೆ. ಹೊನ್ನಾವರ ಹಾಗೂ ಕುಮಟಾ ಭಾಗದಲ್ಲಿ ಅಡಕೆ ತೋಟಗಳಿಗೆ ನೀರು ನುಗ್ಗಿ ಹಾನಿಯಾಗಿದೆ.

    ಹತ್ತಾರು ಬಾಧೆ: ಅಡಕೆ ಸಸಿ ನೆಟ್ಟಾಗಿನಿಂದ ಹಿಡಿದು ಫಲ ಕೈಸೇರುವವರೆಗೆ ಹತ್ತಾರು ಬಾಧೆ ಕಾಡುತ್ತಿದೆ. ಕಾಡು ಪ್ರಾಣಿಗಳ ಕಾಟ, ಕೊಳೆ, ಬೇರು ಹುಳು ಹೀಗೆ… ಇದರ ನಡುವೆ ಅಧಿಕ ಮಳೆಯಿಂದ ಹಾನಿಯಾಗುತ್ತಿದೆ. ಎನ್​ಡಿಆರ್​ಎಫ್ ನಿಯಮಾವಳಿಯಂತೆ ಶೇ. 33 ರಕ್ಕಿಂತ ಹೆಚ್ಚು ಹಾನಿಯಾದ ಅಡಕೆ ಬೆಳೆಗೆ ಪ್ರತಿ ಹೆಕ್ಟೇರ್​ಗೆ 18 ಸಾವಿರ ರೂ. ಪರಿಹಾರ ಸಿಗುತ್ತಿದೆ. ಇದನ್ನು ಪಡೆಯಲು ರೈತರು ಹರಸಾಹಸ ಪಡುವ ಪರಿಸ್ಥಿತಿ ಇದೆ.

    ಕೊಳೆಗೆ ಪರಿಹಾರವಿಲ್ಲ: 2019 ರ ನೆರೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಅಡಕೆಗೆ ಎಲ್ಲಿಲ್ಲದಷ್ಟು ಕೊಳೆ ರೋಗ ಬಾಧಿಸಿತ್ತು. 31980 ಹೆಕ್ಟೇರ್ ಅಡಕೆ ಬೆಳೆಗೆ ಕೊಳೆಯಿಂದ ಒಟ್ಟು 34 ಕೋಟಿ ರೂ. ಹಾನಿಯಾಗಿತ್ತು. ಆದರೆ, ಸರ್ಕಾರ ಯಾವುದೇ ಪರಿಹಾರ ನೀಡಿಲ್ಲ.

    ಗಾಳಿ-ಮಳೆಯಿಂದ ಪ್ರತಿ ವರ್ಷ ಅಡಕೆ ಉದುರುವುದು, ಮರಬೀಳುವುದು, ತೋಟದ ಮೇಲೆ ನೀರು ನುಗ್ಗುವುದು ಸೇರಿದಂತೆ ಅಪಾರ ಹಾನಿ ಆಗುತ್ತಿದ್ದು ಇದಕ್ಕೆ ಸೂಕ್ತ ಪರಿಹಾರ ಮಾತ್ರ ಸಿಗುತ್ತಿಲ್ಲ. ಅಡಕೆ ಬೆಳೆಯುವ ಜಿಲ್ಲೆಯ ಎಲ್ಲ ಶಾಸಕರು ಈ ಕುರಿತು ಸರ್ಕಾರದ ಗಮನಕ್ಕೆ ತಂದು ಬೆಳೆಗಾರರಿಗೆ ಪರಿಹಾರ ಕೊಡಿಸುವುದಕ್ಕೆ ಮುಂದಾಗಿ ಸಂಕಷ್ಟದಲ್ಲಿರುವ ಬೆಳೆಗಾರರ ಹಿತಕಾಪಾಡಬೇಕು. | ಗಣಪತಿ ಹೆಗಡೆ ಹೇರೂರು ಹಿರೇಕೈ ಅಡಕೆ ಬೆಳೆಗಾರ

    ಹವಾಮಾನ ವೈಪರೀತ್ಯದಿಂದ ಉಂಟಾಗುವ ಬೆಳೆ ಹಾನಿಗೆ ಪರಿಹಾರ ದೊರೆಯುತ್ತದೆ. ಕೊಳೆ ರೋಗಕ್ಕೆ ಎನ್​ಡಿಆರ್​ಎಫ್ ನಿಯಮಾವಳಿಯಂತೆ ಪರಿಹಾರ ಬಾರದು. ಆದರೆ, ಬಹುತೇಕ ರೈತರಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಸೌಲಭ್ಯ ಲಭ್ಯವಾಗಲಿದೆ. | ಸತೀಶ್ ತೋಟಗಾರಿಕೆ ಇಲಾಖೆ ಉಪನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts