More

    ನೆರೆ ಹಾನಿ ಸಮೀಕ್ಷೆ ಶೀಘ್ರ ಪೂರ್ಣಗೊಳಿಸಿ

    ಹಾವೇರಿ: ನೆರೆ ಹಾಗೂ ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆಗಳ ಸಮೀಕ್ಷೆಯನ್ನು ಎರಡು ದಿನಗಳಲ್ಲಿ ತುರ್ತಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚಿಸಿದರು.

    ನಗರದ ಗುರುಭವನದಲ್ಲಿ ಸೋಮವಾರ ಆಯೋಜಿಸಿದ್ದ ಹಾವೇರಿ ತಾಲೂಕಿನ ನೆರೆ ಹಾನಿ ಮನೆಗಳ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಮನೆಗಳ ಸಮೀಕ್ಷೆಗೆ ಗಡುವು ನೀಡಲಾಗಿದ್ದರೂ ಸಮೀಕ್ಷೆ ವಿಳಂಬವಾಗುತ್ತಿದೆ. ಇಂಜಿನಿಯರ್​ಗಳ ಕೊರತೆಯಾಗಿದ್ದರೆ ಪಿಆರ್​ಇಡಿ ಇಂಜಿನಿಯರ್​ಗಳನ್ನು ನೇಮಿಸಿ ಶೀಘ್ರವಾಗಿ ಹಾನಿ ಮನೆಗಳ ಸಮೀಕ್ಷೆ ಪೂರ್ಣಗೊಳಿಸಬೇಕು. ಪಿಡಿಒ ಹಾಗೂ ಗ್ರಾಮ ಲೆಕ್ಕಾಧಿಕಾರಿ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಅರ್ಹ ಫಲಾನುಭವಿಗಳು ಸಮೀಕ್ಷೆಯಿಂದ ತಪ್ಪಿ ಹೋಗಬಾರದು. ಇಂಜಿನಿಯರ್​ಗಳು ಮನೆ ಸಮೀಕ್ಷೆ ಸಮಯದಲ್ಲಿ ಮನೆಯ ನೈಜ ಸ್ಥಿತಿಗತಿ ಪರಿಶೀಲಿಸಿ ಶೇಕಡವಾರು ಹಾನಿ ನಮೂದಿಸಬೇಕು ಎಂದರು.

    ಜಿಪಂ ಸಿಇಒ ರಮೇಶ ದೇಸಾಯಿ ಮಾತನಾಡಿ, ಹಾವೇರಿ ತಾಲೂಕಿನಲ್ಲಿ 33 ಗ್ರಾಪಂಗಳಲ್ಲಿ 657 ಅರ್ಜಿಗಳಲ್ಲಿ 116 ಫಲಾನುಭವಿಗಳು ಅರ್ಹರೆಂದು ತಿಳಿಸಲಾಗಿದೆ. ಇನ್ನುಳಿದ 448 ಅರ್ಜಿಗಳ ಪರಿಶೀಲನೆ ನಡೆಯುತ್ತಿದೆ.

    ತಾಲೂಕಿನ ವಿವಿಧ ಗ್ರಾಪಂಗಳಲ್ಲಿ ಮನೆಗಳ ಸಮೀಕ್ಷೆ ಕುರಿತು ಪರಿಶೀಲನೆ ನಡೆಸಿದ ಅವರು ವಿವಿಧ ವಸತಿ ಯೋಜನೆಗಳಡಿ ಮಂಜೂರಾದ ಮನೆಗಳ ನಿರ್ಮಾಣ ವಿವಿಧ ಹಂತದಲ್ಲಿದೆ. 3 ಮತ್ತು 4ನೇ ಹಂತದ ಮನೆಗಳ ಫಲಾನುಭವಿಗಳಿಗೆ ಮನರೇಗಾ ಯೋಜನೆಯಡಿ 28 ದಿನದ ಹಣ 10 ಸಾವಿರ ರೂ. ನೀಡಿದರೆ ಬಡವರಿಗೆ ಅನುಕೂಲವಾಗುತ್ತದೆ. ಇನ್ನೆರಡು ದಿನದಲ್ಲಿ ಇಂತಹ ಮನೆಗಳ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಬೇಕು ಎಂದು ಪಿಡಿಒಗಳಿಗೆ ಸೂಚಿಸಿದರು.

    ಸಭೆಯಲ್ಲಿ ಎಸಿ ಡಾ. ದಿಲೀಪ್ ಶಶಿ, ತಾಪಂ ಇಒ ಬಸವರಾಜ, ನಗರಸಭೆ ಪೌರಾಯುಕ್ತ ಬಸವರಾಜ ಜಿದ್ದಿ, ತಹಸೀಲ್ದಾರ್ ಶಂಕರ ಜಿ.ಎಸ್., ನೋಡಲ್ ಅಧಿಕಾರಿಗಳು, ಪಿಡಿಒಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು.

    ಪಿಡಿಒ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಮನೆಮನೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬೇಕು. ಕಳೆದ ಸಾಲಿನಲ್ಲಿ 50 ಸಾವಿರ ಪರಿಹಾರ ಪಡೆದ ಫಲಾನುಭವಿಗಳ ಪಟ್ಟಿ ಮಾಡಿ. ಇಂತಹ ಮನೆಗಳ ಕುರಿತು ಪರಿಶೀಲಿಸಿ ಕ್ರಮಕೊಳ್ಳಲಾಗುವುದು. ಕಾರಣ ಹಾನಿಗೊಳಗಾದ ಮನೆಗಳ ಸಮೀಕ್ಷೆ ಕಾರ್ಯಕ್ಕೆ ತಕ್ಷಣ ಕಾರ್ಯಪ್ರವೃತ್ತರಾಗಬೇಕು.
    | ನೆಹರು ಓಲೇಕಾರ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts