More

    ನೆರೆ ಸಂತ್ರಸ್ತ ಕುಟುಂಬಗಳಿಗೆ ದೊರೆಯದ ಪರಿಹಾರ; ಶಾಸಕಿ ಅಸಮಾಧಾನ

    ಕಾರವಾರ: ಜಿಲ್ಲೆಯಲ್ಲಿ ನೆರೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ಸರಿಯಾಗಿ ಪರಿಹಾರ ದೊರೆಯದೇ ಇದ್ದ ಬಗ್ಗೆ ಸ್ವತಃ ಶಾಸಕಿ ರೂಪಾಲಿ ನಾಯ್ಕ ಅಸಮಾಧಾನಗೊಂಡಿದ್ದಾರೆ.

    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಭಾಭವನದಲ್ಲಿ ಬುಧವಾರ ಆಯೋಜಿಸಿದ ತ್ರೖೆಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.

    ಮಲ್ಲಾಪುರ ಹಳಗಾ ಭಾಗದಲ್ಲಿ ಏನೂ ಹಾನಿಯಾಗದವರಿಗೆ ಪರಿಹಾರ ಸಿಕ್ಕಿದೆ. ಮನೆಯಲ್ಲಿ ಸಂಪೂರ್ಣ ನೀರು ತುಂಬಿದ್ದವರಿಗೆ ಪರಿಹಾರವೇ ಸಿಕ್ಕಿಲ್ಲ. ಇದರಲ್ಲಿ ಗ್ರಾಮ ಲೆಕ್ಕಿಗರ ಕೈವಾಡ ಇದೆ ಎಂಬ ಅನುಮಾನವಿದೆ. ಈ ಕುರಿತು ಮಾಹಿತಿ ಕಲೆ ಹಾಕಿ ನೀಡಿ. ಸರ್ಕಾರದ ಹಣ ಯಾವುದೇ ಕಾರಣಕ್ಕೂ ಪೋಲಾಗಲು ಬಿಡುವುದಿಲ್ಲ. ಪರಿಹಾರ ಹಣ ಅಕ್ರಮ ಎಸಗಿದವರ ವಿರುದ್ಧ ಕ್ರಮ ಕಾನೂನು ಕ್ರಮಕ್ಕೆ ಶಿಫಾರಸು ಮಾಡುತ್ತೇನೆ ಎಂದರು.

    ಎನ್​ಡಬ್ಲ್ಯುಕೆಆರ್​ಟಿಸಿ ಬಸ್​ಗಳನ್ನು ಸುಂಕಸಾಳದಲ್ಲಿ ನಿಲುಗಡೆ ಮಾಡುತ್ತಿಲ್ಲ. ಶಾಲೆ, ಕಾಲೇಜ್ ವಿದ್ಯಾರ್ಥಿನಿಯರು ಲಾರಿ, ಖಾಸಗಿ ವಾಹನ ಹತ್ತಿ ಬರುತ್ತಿದ್ದಾರೆ. ಅವರಿಗೆ ಏನಾದರೂ ತೊಂದರೆ ಉಂಟಾದಲ್ಲಿ ಸಂಸ್ಥೆಯ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು. ಶಾಲೆ, ಕಾಲೇಜ್ ವಿದ್ಯಾರ್ಥಿಗಳನ್ನು ಯಾವುದೇ ಕಾರಣಕ್ಕೂ ಬಿಟ್ಟು ಬರಬಾರದು. ಶಾಲಾ ಅವಧಿಗೆ ಸರಿಯಾಗಿ ಬಸ್​ಗಳ ಅವಧಿಯನ್ನು ಹೊಂದಿಕೆ ಮಾಡಬೇಕು ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಗೆ ಸೂಚಿಸಿದರು.

    ತಾಲೂಕಿನಲ್ಲಿ ಶಿಥಿಲಾವಸ್ಥೆಯಲ್ಲಿರುವ ಅಂಗನವಾಡಿ ಕಟ್ಟಡಗಳು ಹಾಗೂ ಬಾಡಿಗೆ ಕಟ್ಟಡದಲ್ಲಿರುವ 64 ಅಂಗನವಾಡಿಗಳ ಬಗ್ಗೆ ಮಾಹಿತಿ ನೀಡಿ ಸ್ವಂತ ಕಟ್ಟಡ ನಿರ್ವಣಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗೆ ಸೂಚಿಸಿದರು.

    ಜನಾವಶ್ಯಕ ಕಾಮಗಾರಿಗಳಿಗೆ ಅರಣ್ಯಾಧಿಕಾರಿ ಗಳು ತೊಂದರೆ ನೀಡಬೇಡಿ ಎಂದು ಸೂಚಿಸಿದರು.

    ತಾಪಂ ಅಧ್ಯಕ್ಷೆ ಪ್ರಮಿಳಾ ನಾಯ್ಕ, ಉಪಾಧ್ಯಕ್ಷ ರವೀಂದ್ರ ಪವಾರ, ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗೌಡ, ತಹಸೀಲ್ದಾರ್ ರಾಮಚಂದ್ರ ಕಟ್ಟಿ, ತಾಪಂ ಇಒ ಆನಂದಕುಮಾರ ಬಾಲಣ್ಣನವರ್ ಇದ್ದರು.

    10 ವರ್ಷಗಳ ನಂತರ ಪರಿಹಾರ: ಪೈಪ್ ಲೈನ್ ಕೊಂಡೊಯ್ದ ಪ್ರದೇಶದ ಭೂಮಿಯ ಪರಿಹಾರ ನೀಡಿದ ಹೊರತು ನೀರು ಹೋಗಲು ಬಿಡುವುದಿಲ್ಲ ಎಂದು ಕೆಲ ಭೂ ಮಾಲೀಕರು ತಡೆದಿದ್ದರಿಂದ ಗೋಟೆಗಾಳಿ ಬಹುಗ್ರಾಮ ಯೋಜನೆಯಲ್ಲಿ ನೀರು ಸರಬರಾಜು ಸಮರ್ಪಕವಾಗಿ ಮಾಡಲಾಗದ ಬಗ್ಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ಯಾರದ್ದೋ ಕುಮ್ಮಕ್ಕಿನಿಂದ ಕಾಮಗಾರಿ ಮಾಡಿ 10 ವರ್ಷಗಳ ನಂತರ ಭೂಮಿಯ ಪರಿಹಾರ ಕೇಳುತ್ತಿದ್ದಾರೆ. ಈ ಕುರಿತು ಜನರ ಜತೆ ರ್ಚಚಿಸಿ ಕ್ರಮ ವಹಿಸಿ ಎಂದು ತಹಸೀಲ್ದಾರ್ ರಾಮಚಂದ್ರ ಕಟ್ಟಿ ಅವರಿಗೆ ಶಾಸಕಿ ರೂಪಾಲಿ ನಾಯ್ಕ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts