More

    ನೆಮ್ಮದಿಯಿಂದ ಜೀವನ ನಡೆಸಲು ಅವಕಾಶ ಮಾಡಿಕೊಡಿ : ರಾಜೀವ್ ಗಾಂಧಿ ಪುರ ಗುಡಿಸಲು ವಾಸಿಗಳ ಒತ್ತಾಯ, ಅಪರ ಡಿಸಿಗೆ ಮನವಿ

     ರಾಮನಗರ : ನಗರದ ಹೊರಭಾಗದ ರಾಜೀವ್ ಗಾಂಧಿ ಪುರದಲ್ಲಿ ತಾತ್ಕಾಲಿಕವಾಗಿ ಗುಡಿಸಲು ನಿರ್ಮಿಸಿಕೊಂಡಿರುವ ನಿರ್ಗತಿಕರಿಗೆ ಅಲ್ಲೇ ಮೂಲಸೌಲಭ್ಯ, ಶಾಶ್ವತ ಸೂರು ಕಲ್ಪಿಸಿಕೊಡುವಂತೆ ಆಗ್ರಹಿಸಿ ನಿರ್ಗತಿಕರ ಒಕ್ಕೂಟ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿತು.
    ನಗರದ ಅಭಯ ಆಂಜನೇಯ ಸ್ವಾಮಿ ಬೃಹತ್ ಪ್ರತಿಮೆ ಆವರಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪಾದಯಾತ್ರೆ ನಡೆಸಿದ ನೂರಾರು ಪ್ರತಿಭಟನಾಕಾರರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಘೋಷಣೆ ಕೂಗಿದರು.
    ಈ ವೇಳೆ ಮಾತನಾಡಿದ ಮುಖಂಡ ಮಲ್ಲಿಕಾರ್ಜುನ್, ರಾಜೀವ್‌ಗಾಂಧಿಪುರದ ಗೋಮಾಳ ಸರ್ವೇ ನಂ. 37-38ರ ಸುಮಾರು 6 ಎಕರೆ ಪ್ರದೇಶದಲ್ಲಿ ಹಲವಾರು ಮಂದಿ ಗುಡಿಸಲುಗಳನ್ನು ಹಾಕಿಕೊಂಡಿದ್ದಾರೆ. ಇವರೆಲ್ಲರೂ ಕರೊನಾ ಸಂದರ್ಭದಲ್ಲಿ ಕೆಲಸ ಕಳೆದುಕೊಂಡ ನಿರ್ಗತಿಕರು. ವಾಸಿಸಲು ಸೂರು ಇಲ್ಲದ ಸಂದರ್ಭದಲ್ಲಿ ಇಲ್ಲಿಗೆ ಬಂದು ಸರ್ಕಾರಿ ಜಾಗದಲ್ಲಿ ಗುಡಿಸಲುಗಳನ್ನು ಕಟ್ಟಿಕೊಂಡಿದ್ದಾರೆ. ಆದರೆ, ಇವರನ್ನು ಅಲ್ಲಿಂದ ತೆರವುಗೊಳಿಸುವ ಪ್ರಯತ್ನಗಳು ಸದ್ದಿಲ್ಲದೆ ನಡೆಯುತ್ತಿದ್ದು ಇದನ್ನು ನಿಲ್ಲಿಸುವ ಜತೆಗೆ, ಅವರಿಗೆ ಅಲ್ಲಿಯೇ ಬದುಕಲು ಜಿಲ್ಲಾಡಳಿತ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
    ಸರ್ಕಾರ ಬಡವರ ಉದ್ದಾರಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದರೂ ಅವುಗಳು ಅರ್ಹರಿಗೆ ತಲುಪುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಜೀವ್ ಗಾಂಧಿಪುರದಲ್ಲಿ ಈಗಾಗಲೇ ಶೆಡ್ ನಿರ್ಮಾಣ ಮಾಡಿಕೊಂಡಿರುವ ನಿರ್ಗತಿಕರಿಗೆ ಕೂಡಲೇ ಕುಡಿಯುವ ನೀರು, ಶೌಚಗೃಹ, ಚರಂಡಿ ವ್ಯವಸ್ಥೆ, ರಸ್ತೆ ಸೇರಿ ಅಗತ್ಯ ಮೂಲಸೌಕರ್ಯ ಕಲ್ಪಿಸಿಕೊಡಬೇಕು ಹಾಗೂ ಹಕ್ಕುಪತ್ರ ನೀಡುವ ಮೂಲಕ ಆತಂಕವಿಲ್ಲದೆ ನೆಮ್ಮದಿಯಿಂದ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಮಲ್ಲಿಕಾರ್ಜುನ್ ಒತ್ತಾಯಿಸಿದರು.
    ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ ಅವರಿಗೆ ಮನವಿ ಸಲ್ಲಿಸಿದರು. ಹೋರಾಟಗಾರರಾದ ಸರಸ್ವತಿ, ಡಾ. ವಿ.ಎಸ್. ತೇಜೋವತಿ, ಜಯಕರ್ನಾಟಕ ಸಂಘಟನೆಯ ವೀರೇಶ್, ಸಿದ್ದಪ್ಪ, ರಾಮು, ಮಂಜಮ್ಮ, ರಮ್ಯ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts