More

    ನೆಪ ಹೇಳದೆ ಕನಕಗಿರಿಯಲ್ಲೇ 100 ಹಾಸಿಗೆ ಆಸ್ಪತ್ರೆ ನಿರ್ಮಿಸಿ; ಶಾಸಕ, ಡಿಎಚ್‌ಒಗೆ ಮುಖಂಡರ ಒತ್ತಾಯ

    ಕನಕಗಿರಿ: ಜಾಗದ ಕೊರತೆ ನೆಪ ಹೇಳದೆ 100 ಹಾಸಿಗೆ ತಾಲೂಕು ಆಸ್ಪತ್ರೆಯನ್ನು ಪಟ್ಟಣದಲ್ಲೇ ನಿರ್ಮಿಸಬೇಕು ಎಂದು ಶಾಸಕ ಬಸವರಾಜ ದಢೇಸೂಗೂರು, ಡಿಎಚ್‌ಒ ಅಲಕನಂದಾಗೆ ಸ್ಥಳೀಯ ಮುಖಂಡರು ಆಗ್ರಹಿಸಿದರು.
    ಕಾರಟಗಿಗೆ ಆಸ್ಪತ್ರೆ ನೀಡುವಂತೆ ಶಿಫಾರಸು ಪತ್ರದಿಂದ ಎದ್ದಿದ್ದ ಗೊಂದಲಕ್ಕೆ ತೆರೆ ಎಳೆಯಲು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರೆದಿದ್ದ ಸಭೆಯಲ್ಲಿ ಒತ್ತಾಯ ಕೇಳಿಬಂತು. ಪ್ರಾಕೃಪಸ ಸಂಘದ ಅಧ್ಯಕ್ಷ ಬಿ.ಕನಕಪ್ಪ ಮಾತನಾಡಿ, 2022-23ರ ರಾಜ್ಯ ಬಜೆಟ್‌ನಲ್ಲಿ ರಾಜ್ಯದ 7 ಹೊಸ ತಾಲೂಕುಗಳಿಗೆ 100 ಹಾಸಿಗೆ ಆಸ್ಪತ್ರೆ ಮಂಜೂರಾಗಿವೆ. ಕನಕಗಿರಿ ತಾಲೂಕಿಗೂ ಸರ್ಕಾರ ಮಂಜೂರು ಮಾಡಿದೆ. ಈ ಸಂಬಂಧ ಇಲಾಖೆ, ಡಿಎಚ್‌ಒ, ತಹಸೀಲ್ದಾರ್ ನಡುವೆ ಪತ್ರ ವ್ಯವಹಾರ ನಡೆದಿವೆ. ಇಷ್ಟೆಲ್ಲ ಆದರೂ ಆಸ್ಪತ್ರೆಯನ್ನು ಕಾರಟಗಿಗೆ ನೀಡಲು ಮುಂದಾಗಿರುವುದು ಖಂಡನೀಯ. ಆದ್ದರಿಂದ ಪಟ್ಟಣದಲ್ಲಿಯೇ 100 ಬೆಡ್ ಆಸ್ಪತ್ರೆ ನಿರ್ಮಿಸಬೇಕು. ಅದಕ್ಕೆ ಬೇಕಾದ ಜಾಗ ನೀಡುತ್ತೇವೆ. ಕಾರಟಗಿಗೆ ಬೇಕಾದರೆ ಮತ್ತೊಂದು ಆಸ್ಪತ್ರೆ ತನ್ನಿ, ನಮಗೆ ಸಂತೋಷ ಎಂದರು.
    ಡಿಎಚ್‌ಒ ಅಲಕಾನಂದ ಮಾತನಾಡಿ, ಕನಕಗಿರಿ ಹಾಗೂ ಕಾರಟಗಿಯಲ್ಲಿ ಆಸ್ಪತ್ರೆ ಆರಂಭಿಸಲಾಗುವುದು ಎನ್ನುತ್ತಿದ್ದಂತೆ ಎರಡು ಕಡೆಗೆ ಆಗುವುದಿದ್ದರೆ ಶಾಸಕರು ಇಲ್ಲಿಗೆ ಮಂಜೂರಾದ ಆಸ್ಪತ್ರೆಯನ್ನು ಕಾರಟಗಿಗೆ ನೀಡಿ ಎಂದು ಶಿಫಾರಸು ಪತ್ರ ಬರೆದಿರುವುದು ಯಾಕೆ?. ಅಲ್ಲಿಗೆ ಮಂಜೂರಾದ ದಾಖಲೆ ತೋರಿಸಿ ಎಂದು ಪಟ್ಟು ಹಿಡಿದರು. ಇದರಿಂದ ಡಿಎಚ್‌ಒ ತಟಸ್ಥರಾಗಿ ಕುಳಿತರು. ಶಾಸಕ ಬಸವರಾಜ ದಢೇಸುಗೂರು ಮಾತನಾಡಿ, ವಿಪಕ್ಷದವರು ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಾರೆ. ಅವರ ಮಾತಿಗೆ ಬೆಲೆ ಕೊಡಬೇಕಿಲ್ಲ. ನವಲಿ ಗ್ರಾಮಕ್ಕೆ ಸಿಎಚ್‌ಸಿ ಮಂಜೂರಾಗಿದ್ದು, 10 ಕೋಟಿ ರೂ. ಅನುದಾನ ಮಂಜೂರಾಗಿದೆ. ಕನಕಗಿರಿ ನನಗೆ ಬೇರೆಯಲ್ಲ. ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ. ಈ ನಿಟ್ಟಿನಲ್ಲಿ ಎರಡು ಕಡೆಗಳಲ್ಲಿ ಆಸ್ಪತ್ರೆ ನಿರ್ಮಿಸಲು ಮುಂದಾಗುತ್ತೇನೆ ಸಣ್ಣ ಪುಟ್ಟ ತಪ್ಪುಗಳಾಗಿದ್ದರೆ ಸಲಹೆ ನೀಡಿದರೆ ಸರಿಪಡಿಸಿಕೊಳ್ಳಲಾಗುವುದು ಎಂದರು.
    ಪಟ್ಟಣದ ಸಿಎಚ್‌ಸಿ ಪಕ್ಕದಲ್ಲಿ ಸೂಕ್ತ ಜಾಗವಿದ್ದು, ಸ್ವಚ್ಛಗೊಳಿಸಿ ಆಸ್ಪತ್ರೆ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಬೇಕು ಎಂದು ಪ್ರಮುಖರು ಮನವಿ ಮಾಡಿದರು. ಟಿಎಚ್‌ಒ ರಾಘವೇಂದ್ರ ಠಿಕಾರೆ, ಆರೋಗ್ಯ ಕವಚ ಸಮಿತಿಯ ಸದಸ್ಯ ಟಿ.ಜೆ.ರಾಜಶೇಖರ್, ನರಸಪ್ಪ ಕುರುಗೋಡು, ಮಂಡಲ ಅಧ್ಯಕ್ಷ ಮಹಾಂತೇಶ ಸಜ್ಜನ, ಪ್ರಮುಖರಾದ ಸಣ್ಣ ಕನಕಪ್ಪ, ವಿರೂಪಾಕ್ಷಪ್ಪ ಭತ್ತದ, ಚನ್ನಪ್ಪ ತೆಗ್ಗಿನಮನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts