More

    ನೂತನ ತಂತ್ರಜ್ಞಾನದೊಂದಿಗೆ ಸಕ್ಕರೆ ಉತ್ಪಾದಿಸೋಣ

    ಸಂಕೇಶ್ವರ: ಅಂತಾರಾಷ್ಟ್ರೀಯ ಮಾರುಕಟ್ಟೆಯ ಸ್ಪರ್ಧೆಯನ್ನು ಗಮನದಲ್ಲಿಟ್ಟು ನೂತನ ತಂತ್ರಜ್ಞಾನದಿಂದ ಸಲ್ಫರ್ ಮುಕ್ತ ಸಕ್ಕರೆ ಉತ್ಪಾದಿಸುವ ಮೂಲಕ ಜನರ ಆರೋಗ್ಯ ಕಾಳಜಿಯೊಂದಿಗೆ ಕಾರ್ಖಾನೆಗಳನ್ನು ಸದೃಢಗೊಳಿಸೋಣ ಎಂದು ಸಚಿವ ಉಮೇಶ ಕತ್ತಿ ಹೇಳಿದರು.

    ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ದಿ. ಡೆಕ್ಕನ್ ಶುಗರ್ಸ್ ಟೆಕ್ನಾಲಜಿ ಅಸೋಸಿಯೇಷನ್ ಹಾಗೂ ವಿಶ್ವರಾಜ್ ಶುಗರ್ಸ್ ನಿಂದ ಶನಿವಾರ ಏರ್ಪಡಿಸಿದ್ದ ಸೆಮಿನಾರ್‌ನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಬ್ಬು ಉತ್ಪಾದನೆ ವೆಚ್ಚ ಹೆಚ್ಚಾಗಿರುವ ದಿನಗಳಲ್ಲಿ ರೈತರ ಯೋಗಕ್ಷೇಮ ಸರಿಯಾಗಿ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಕಾರ್ಖಾನೆಗಳಿಗೆ ಇರುವುದರಿಂದ ಸಕ್ಕರೆ ಉದ್ಯಮದಲ್ಲಿ ನಾವು ಹೆಚ್ಚಿನ ಪ್ರಗತಿ ಸಾಧಿಸುವತ್ತ ಕಾರ್ಯ ಪ್ರವೃತ್ತರಾಗಬೇಕಿದೆ. ಈ ಹಿನ್ನೆಲೆಯಲ್ಲಿ ಬದಲಾದ ಕಾಲಮಾನದಲ್ಲಿ ನೂತನ ಆವಿಷ್ಕಾರಗಳನ್ನು ಮಾಡಬೇಕಾದ ಅನಿವಾರ್ಯತೆ ಇದೆ ಎಂದರು.ಶ್ರೀ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ನಿಖಿಲ್ ಕತ್ತಿ ಮಾತನಾಡಿ, ಈಗಾಗಲೇ ವಿಎಸ್‌ಎಲ್ ಕಾರ್ಖಾನೆಯಿಂದ ಸಕ್ಕರೆ ಉದ್ಯಮದ ಇತಿಹಾಸದಲ್ಲೇ ಮೊದಲ ಬಾರಿಗೆ ಕಬ್ಬಿನ ರಸದಿಂದ ನೇರವಾಗಿ ಶೇ.40ಕ್ಕಿಂತ ಕಡಿಮೆ ಐಸಿಯುಎಂಎಸ್‌ಎ ಹೊಂದಿರುವ 9,27,000 ಕ್ವಿಂಟಾಲ್ ಸಂಸ್ಕರಿಸಿದ ಸಕ್ಕರೆ ಉತ್ಪಾದಿಸಿದ ಕೀರ್ತಿ ನಮ್ಮ ಕಾರ್ಖಾನೆಗೆ ಸಲ್ಲುತ್ತದೆ ಎಂದರು.

    ಈಗಾಗಲೇ ವಿದೇಶಿ ಮಾರುಕಟ್ಟೆಯಲ್ಲೂ ಉತ್ತಮ ಬೇಡಿಕೆಯೊಂದಿಗೆ 2,50,000 ಕ್ವಿಂಟಾಲ್ ಸಕ್ಕರೆ ರ್ತು ಮಾಡುವಲ್ಲಿ ನಾವು ಯಶಸ್ವಿಯಾಗಿದ್ದು, ಈ ಮಾದರಿಯನ್ನು ಹೆಚ್ಚಿನ ಕಾರ್ಖಾನೆಗಳು ಅಳವಡಿಸಿಕೊಂಡರೆ ಭವಿಷ್ಯದಲ್ಲಿ ಕಾರ್ಖಾನೆಗಳು ಪ್ರಗತಿಯತ್ತ ಸಾಗುತ್ತವೆ ಎಂದರು.

    ಡಾ. ವೈ.ಎಸ್.ನೇರೆಕರ ಮಾತನಾಡಿ, ಕಬ್ಬಿಗೆ ಪರ್ಯಾಯವಾಗಿ ಸಕ್ಕರೆ ಗಡ್ಡೆ (ಶುಗರ್ ಬೀಟ್) ಬೆಳೆಯುವತ್ತ ಹೆಜ್ಜೆ ಹಾಕೋಣ. ಬರಡು ಭೂಮಿ, ಸವಳು-ಜವಳು ಭೂಮಿಯಲ್ಲೂ ಬೆಳೆಯಬಲ್ಲ ಶುಗರ್ ಬೀಟ್‌ನಿಂದ ಇಥೆನಾಲ್ ಕೂಡ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತದೆ. ಉಳಿದ ತ್ಯಾಜ್ಯವನ್ನು ಜಾನುವಾರುಗಳಿಗೆ ಮೇವಿನ ರೀತಿಯಲ್ಲಿ ಬಳಸಬಹುದು ಹಾಗೂ ಸಾವಯವ ಗೊಬ್ಬರ ಮಾಡಬಹುದು. ಶುಗರ್ ಬೀಟ್ ಕುರಿತು ಹೆಚ್ಚಿನ ಪ್ರಯೋಗಗಳಾದರೆ ರೈತರಿಗೆ ಹಾಗೂ ಸಕ್ಕರೆ ಉದ್ಯಮಕ್ಕೆ ಹೆಚ್ಚಿನ ಲಾಭವಿದೆ ಎಂದು ತಿಳಿಸಿದರು.

    ಕಬ್ಬಿನ ರಸದಿಂದ ನೇರವಾಗಿ ಸಂಸ್ಕರಿಸಿದ ಸಕ್ಕರೆಯ ಉತ್ಪಾದನೆಯ ಕುರಿತು ವಿಶ್ವರಾಜ ಶುಗರ್ಸ್ ನಿರ್ದೇಶಕ ವಿ.ಎಂ.ಕುಲಕರ್ಣಿ, ಸಿಇಒ ಮುಕೇಶ್ ಕುಮಾರ್, ಜನರಲ್ ಮ್ಯಾನೇಜರ್ ವಿನಾಯಕ ಭೋಸ್ಲೆ ಸೆಮಿನಾರ್ ನೀಡಿದರು.

    ಡೆಕ್ಕನ್ ಶುಗರ್ಸ್ ಟೆಕ್ನಾಲಜಿ ಅಸೋಶಿಯೇಷನ್ ಅಧ್ಯಕ್ಷ ಎಸ್.ಬಿ.ಬಡ್, ಉಪಾಧ್ಯಕ್ಷ ಎಸ್.ಎಸ್.ಶಿರಗಾಂವಕರ, ಕಾರ್ಯದರ್ಶಿ ಎಂ.ಆರ್.ಕುಲಕರ್ಣಿ, ಎನ್.ವಿ.ಥೇಟೆ, ಎಸ್.ವಿ.ಗೋಡಗಾವಂಕರ, ಪೃಥ್ವಿ ಕತ್ತಿ ಹಾಗೂ ವಿವಿಧ ಸಕ್ಕರೆ ಕಾರ್ಖಾನೆಗಳ ಮಾಲೀಕರು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts