More

    ನೂತನ ಎಸ್ಪಿಯಾಗಿ ಉಮಾ ಪ್ರಶಾಂತ್ -ಜಿಲ್ಲೆಯ ಮೂರನೇ ಮಹಿಳಾ ವರಿಷ್ಠಾಧಿಕಾರಿ – ಅಪಘಾತ ತಡೆಗೆ ಸುಧಾರಿತ ಕ್ರಮದ ಇಂಗಿತ

    ದಾವಣಗೆರೆ: ನೂತನ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಉಮಾ ಪ್ರಶಾಂತ್ ಶುಕ್ರವಾರ ಅಧಿಕಾರ ವಹಿಸಿದರು. ಇದುವರೆಗೆ ಅವರು ಚಿಕ್ಕಮಗಳೂರು ಜಿಲ್ಲೆಯ ಎಸ್ಪಿಯಾಗಿ ಕಾರ್ಯ ನಿರ್ವಹಿಸಿದ್ದರು.
    ಕಲಬುರಗಿಯ ಪೊಲೀಸ್ ತರಬೇತಿ ಶಾಲೆಯ ಪ್ರಾಚಾರ್ಯರಾಗಿ ವರ್ಗಾವಣೆಯಾದ, ನಿರ್ಗಮಿತ ಎಸ್ಪಿ ಡಾ.ಕೆ. ಅರುಣ್ ಪೊಲೀಸ್ ದಂಡ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.
    ವರಮಹಾಲಕ್ಷ್ಮಿ ಹಬ್ಬದ ದಿನವೇ ಮಹಿಳಾ ಅಧಿಕಾರಿ ಜಿಲ್ಲೆಗೆ ಆಗಮಿಸಿರುವುದು ವಿಶೇಷ. ಜಿಲ್ಲೆಯ 25ನೇ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡ ದಿನವೂ ಕೂಡ ಆಗಸ್ಟ್ 25 ಎಂಬುದು ಮತ್ತೊಂದು ವಿಶೇಷ!
    ಮಾಲಿನಿ ಕೃಷ್ಣಮೂರ್ತಿ 2003-04ನೇ ಸಾಲಿನಲ್ಲಿ ಹಾಗೂ ಸೋನಿಯಾನಾರಂಗ್ 2006 ಹಾಗೂ 2008ರಲ್ಲಿ ಎರಡು ಅವಧಿಗೆ ಎಸ್ಪಿಯಾಗಿದ್ದರು. ಅವರ ನಂತರ ಉಮಾ, ಮೂರನೇ ಮಹಿಳಾ ಜಿಲ್ಲಾ ರಕ್ಷಣಾಧಿಕಾರಿಯಾಗಿದ್ದಾರೆ.
    ಜನಸ್ನೇಹಿ ಆಡಳಿತಕ್ಕೆ ಕಾರ್ಯಕ್ರಮ
    ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಪ್ರಮಾಣ ತಗ್ಗಿಸಲು ಮತ್ತು ಅದಕ್ಕೆ ಸಂಬಂಧಿತ ಸುಧಾರಿತ ಕ್ರಮಗಳ ಜಾರಿ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಿರ್ಣಯಿಸಲಾಗುವುದು. ಮಹಿಳೆಯರು-ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ತಡೆಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ಎಸ್ಪಿ ಉಮಾ ಪ್ರಶಾಂತ್ ಸುದ್ದಿಗಾರರಿಗೆ ತಿಳಿಸಿದರು.
    ಡಿಜಿ-ಐಜಿಪಿ ಸೇರಿ ಎಲ್ಲ ಮೇಲಾಧಿಕಾರಿಗಳ ನಿರ್ದೇಶನದಂತೆ ಪೊಲೀಸ್ ಅಧಿಕಾರಿ-ಸಿಬ್ಬಂದಿ ಕಲ್ಯಾಣದ ಜತೆಗೆ, ಸಾರ್ವಜನಿಕರ ಸಹಯೋಗದೊಂದಿಗೆ ಜನಸ್ನೇಹಿ ಪೊಲೀಸ್ ಆಡಳಿತ ತರಲು ಉತ್ತಮ ಕಾರ್ಯಕ್ರಮ ರೂಪಿಸಲಾಗುವುದು ಎಂದು ಹೇಳಿದರು.
    ಈ ಹಿಂದೆ ಕಾರ್ಯ ನಿರ್ವಹಿಸಿದ್ದ ಚಿಕ್ಕಮಗಳೂರು ಜಿಲ್ಲೆ ಸೂಕ್ಷ್ಮ ಜಿಲ್ಲೆಯಾಗಿತ್ತು. ಅದೇ ರೀತಿ ಒಂದೊಂದು ಜಿಲ್ಲೆಯಲ್ಲೂ ಒಂದೊಂದು ರೀತಿಯ ಸಮಸ್ಯೆಗಳಿರುತ್ತವೆ. ದಾವಣಗೆರೆ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಮೊದಲ ಆದ್ಯತೆ ನೀಡಲಾಗುವುದು.
    ಇಲ್ಲಿ ಉತ್ತಮ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದು ಅಪರಾಧ ಪ್ರಕರಣ ಹೆಚ್ಚದಂತೆ ಎಚ್ಚರ ವಹಿಸಲಾಗುವುದು. ಅಪರಾಧ ಪ್ರಕರಣಗಳ ಶೀಘ್ರ ಪತ್ತೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
    ಅಕ್ರಮ ಮರಳುಗಾರಿಕೆ ಸೇರಿ ಎಲ್ಲ ರೀತಿಯ ಕಾನೂನುಬಾಹಿರ ಚಟುವಟಿಕೆಗಳಿಗೆ ಕಟ್ಟುನಿಟ್ಟಿನ ಕಡಿವಾಣ ಹಾಕಲಾಗುವುದು ಎಂದ ಅವರು, ನಿರ್ಗಮಿತ ಎಸ್ಪಿ ಡಾ.ಕೆ.ಅರುಣ್ ಜಿಲ್ಲೆಯಲ್ಲಿ ಕೈಗೊಂಡ ಎಲ್ಲ ಉತ್ತಮ ಕೆಲಸಗಳನ್ನು ಮುಂದುವರಿಸುವುದಾಗಿಯೂ ಹೇಳಿದರು.
    ಐಜಿಪಿ ಜತೆ ಚರ್ಚೆ
    ಪೂರ್ವವಲಯ ಐಜಿಪಿ ಡಾ.ಕೆ.ತ್ಯಾಗರಾಜನ್ ಹಾಗೂ ನಿರ್ಗಮಿತ ಎಸ್ಪಿ ಡಾ. ಕೆ. ಅರುಣ್ ಅವರೊಂದಿಗೆ ಪ್ರತ್ಯೇಕವಾಗಿ ಚರ್ಚಿಸಿದ ಎಸ್ಪಿ ಉಮಾ ಪ್ರಶಾಂತ್, ಜಿಲ್ಲೆಯ ಪೊಲೀಸ್ ವ್ಯವಸ್ಥೆಗಳ ಕುರಿತು ವಿವರ ಪಡೆದರು. ನಂತರ ಜಿಲ್ಲೆಯ ಪೊಲೀಸ್ ಅಧಿಕಾರಿಗಳ ಜತೆ ಕುಶಲೋಪರಿ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts