More

    ನೀರು ಜೀವಸಂಕಲದ ಜೀವಾಮೃತ

    ಚಿತ್ರದುರ್ಗ: ನೀರು ಒಂದು ಸಂಪನ್ಮೂಲ ಮಾತ್ರವಲ್ಲ, ಅದು ಇಡೀ ಜೀವಸಂಕುಲದ ಜೀವಾಮೃತ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ಬಿ.ಗೀತಾ ಹೇಳಿದರು.
    ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ನಗರಸಭೆ ಆಶ್ರಯದಲ್ಲಿ ವಿಶ್ವ ಜಲ ದಿನಾಚರಣೆ ಅಂಗವಾಗಿ ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ನೀರು ಸಕಲ ಜೀವಿಗಳ ಅಸ್ತಿತ್ವಕ್ಕೆ ಅತ್ಯಗತ್ಯ ಎಂದರು.
    ಜಾಗತಿಕ ಹವಾಮಾನ ಬದಲಾವಣೆ, ಕೈಗಾರಿಕೀಕರಣದಿಂದಾಗಿ ಕುಡಿಯುವ ನೀರಿನ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ. ನೀರಿನ ಪ್ರಾಮುಖ್ಯತೆ ಹಾಗೂ ಮಿತಬಳಕೆ ಕುರಿತು ಎಲ್ಲರಲ್ಲೂ ಅರಿವು ಮೂಡಿಸಬೇಕಿದೆ. ಮನುಷ್ಯ ಸೇರಿ ಎಲ್ಲ ಸಕಲ ಜೀವರಾಶಿಗಳಿಗೆ ನೀರಿನ ಅಗತ್ಯವಿದ್ದು, ಅಮೂಲ್ಯ ಜಲಸಂಪತ್ತನ್ನು ಮಿತವಾಗಿ ಬಳಸಬೇಕಿದೆ ಎಂದು ಹೇಳಿದರು.
    ಮಳೆಯ ಪ್ರತಿಹನಿಯೂ ವ್ಯರ್ಥವಾಗದಂತೆ ನೋಡಿಕೊಳ್ಳ ಬೇಕಿದೆ. ಮಳೆ ನೀರು ಸಮುದ್ರಕ್ಕೆ ಸೇರದಂತೆ ನೋಡಿಕೊಳ್ಳುವ, ಅದನ್ನು ವ್ಯವಸ್ಥಿತವಾಗಿ ಸಂಗ್ರಹಿಸುವ ಹಾಗೂ ಇಂಗಿಸುವ ಮೂಲಕ ಅಂತರ್ಜಲ ಮಟ್ಟವನ್ನು ವೃದ್ಧಿಸಿಕೊಳ್ಳುವ ಅನಿವಾರ್ಯತೆ ಹಿಂದೆಂದಿಗಿಂತ ಇಂದು ಹೆಚ್ಚಾಗಿದೆ ಎಂದರು.
    ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಇಂಗುಗುಂಡಿ, ಮಳೆಕೊಯ್ಲು ಮುಂತಾದ ಕಾರ್ಯಗಳು ಪ್ರತಿ ಮನೆಯಿಂದಲೂ ಆರಂಭವಾಗಬೇಕು. ಈ ವಿಷಯವನ್ನು ಪ್ರತಿಯೊಬ್ಬರೂ ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ತಿಳಿಸಿದ ಅವರು, ಭೂಮಿಯ ಒಡಲು ನಿರಂತರ ಬರಿದಾಗುತ್ತಿದ್ದರೆ ಮುಂದೊಂದು ದಿನ ಇಡೀ ವಿಶ್ವವೇ ಅತ್ಯಂತ ಗಂಭೀರ ಪರಿಸ್ಥಿತಿ ಎದುರಾಗಲಿದೆ ಎಂದು ಎಚ್ಚರಿಸಿದರು.
    ಪ್ರಸ್ತುತ ಸಂದರ್ಭದಲ್ಲಿ ವಿಶ್ವದ ಅನೇಕ ಮಹಾನಗರಗಳಲ್ಲಿ ಕುಡಿಯುವ ನೀರು, ಅಲ್ಲಿನ ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳು ಕಣ್ಣೆದುರಿಗೆ ಇವೆ. ಆದ್ದರಿಂದ ಜೀವಜಲಕ್ಕೆ ಕಂಟಕ ಎದುರಾಗದಂತೆ ಅಗತ್ಯ ಸಕಾಲಿಕ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
    ನೀರನ್ನು ಸಂರಕ್ಷಿಸುವ ವಿಷಯದಲ್ಲಿ ಸುಸ್ಥಿರ ಗುರಿ ಸಾಧಿಸಲು ಎಲ್ಲರೂ ತಮ್ಮ ಜವಾಬ್ದಾರಿ ಅರಿತು ಸರ್ಕಾರದೊಂದಿಗೆ ಕೈಜೋಡಿಸಬೇಕು. ಪರಿಸರ ಹಾನಿ ತಡೆಗೆ ವಿಶೇಷ ಗಮನಹರಿಸಬೇಕು. ಗಿಡ-ಮರಗಳನ್ನು ಪೋಷಿಸುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕೆಂದು ತಿಳಿಸಿದರು.
    ಎಡಿಸಿ ಬಿ.ಟಿ.ಕುಮಾರಸ್ವಾಮಿ, ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್, ಜಿಪಂ ಎಸ್.ಜೆ.ಸೋಮಶೇಖರ್, ಪೌರಾಯುಕ್ತೆ ಎಂ.ರೇಣುಕಾ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪರಮೇಶ್ವರಪ್ಪ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಮಂಜುನಾಥ್ ಇತರರಿದ್ದರು.
    ಸಂಗೊಳ್ಳಿ ರಾಯಣ್ಣ ಸರ್ಕಲ್‌ನಿಂದ ಆರಂಭವಾದ ಜಾಥಾ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಅಂಬೇಡ್ಕರ್ ವೃತ್ತದಲ್ಲಿ ಸಂಪನ್ನಗೊಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts