More

    ನೀರಿನ ಕೊರತೆ ಆಗದಂತೆ ಎಚ್ಚರ ವಹಿಸಿ ; ಅಧಿಕಾರಿಗಳಿಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಸೂಚನೆ

    ತುಮಕೂರು: ಬೇಸಿಗೆ ಹಿನ್ನೆಲೆಯಲ್ಲಿ ನಗರದಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಕಟ್ಟೆಚ್ಚರ ವಹಿಸಲು ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ನಗರದ ಶಾಸಕರ ಕಚೇರಿಯಲ್ಲಿ ಮಂಗಳವಾರ ಮಹಾನಗರಪಾಲಿಕೆ, ನೀರು ಸರಬರಾಜು ವಿಭಾಗದ ಇಂಜಿನಿಯರ್‌ಗಳು ಹಾಗೂ ಕರ್ನಾಟಕ ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿಯ ಅಧಿಕಾರಿಗಳ ಜತೆ ಸಭೆ ನಡೆಸಿದ ಶಾಸಕರು, ಬುಗುಡನಹಳ್ಳಿ ಹಾಗೂ ಅಮಾನಿಕೆರೆಯಲ್ಲಿ ಇರುವ ನೀರಿನ ಸಂಗ್ರಹ ಹಾಗೂ ಬುಗುಡನಹಳ್ಳಿ, ಪಿ.ಎನ್.ಆರ್.ಪಾಳ್ಯ ಹಾಗೂ ವಿದ್ಯಾನಗರದಲ್ಲಿ ಅಳವಡಿಸಲಾಗಿರುವ ಮೋಟಾರ್ ಪಂಪ್‌ಗಳ ಸ್ಥಿತಿಗತಿ ವಿವರಗಳನ್ನು ಪಡೆದು ಮೋಟಾರ್ ಪಂಪ್‌ಗಳ ದುರಸ್ಥಿಯಲ್ಲಿ ವ್ಯತ್ಯಯ ಉಂಟಾಗಬಾರದು, ಮೋಟಾರ್ ಪಂಪ್‌ಗಳ ನಿರ್ವಹಣೆಗಾಗಿ ಪ್ರತಿಷ್ಟಿತ ಕಂಪನಿಗಳೊಂದಿಗೆ ವಾರ್ಷಿಕ ನಿರ್ವಹಣಾ ಒಡಂಬಡಿಕೆ ಮಾಡಿಕೊಳ್ಳುವಂತೆ ಸೂಚಿಸಿದರು.

    ತುಮಕೂರು ನಗರದಲ್ಲಿ ಈವರೆಗೆ ಕೊರೆಯಲಾಗಿರುವ ಬೋರ್‌ವೆಲ್‌ಗಳ ವಿವರ, ಅವುಗಳ ಚಾಲನಾ ಸ್ಥಿತಿಗತಿ, ಪ್ರತಿ ವಾರ್ಡ್‌ನಲ್ಲಿ ಕೊರೆಯಲಾಗಿರುವ ಕೊಳವೆ ಬಾವಿಗಳ ವಿವರಗಳನ್ನು ಜಿಪಿಎಸ್ ಕೋ-ಆರ್ಡಿನೇಟ್‌ಗಳೊಂದಿಗೆ ಸಂಗ್ರಹಿಸಿ ಬೋರ್‌ವೆಲ್‌ಗಳಿಂದ ದೊರೆಯಬಹುದಾದ ನೀರಿನ ಪ್ರಮಾಣದ ಅಂಕಿ ಅಂಶಗಳನ್ನು ಸಿದ್ಧವಾಗಿಡುವಂತೆ ಸೂಚಿಸಿದರು.

    ಪಿ.ಎನ್.ಆರ್ ಪಾಳ್ಯದಲ್ಲಿರುವ ನೀರು ಶುದ್ಧೀಕರಣದ ಘಟಕದ ಜತೆ ವಿದ್ಯಾನಗರದಲ್ಲಿ 10 ಎಂ.ಎಲ್.ಡಿ ಸಾಮರ್ಥ್ಯದ ನೀರು ಶುದ್ಧೀಕರಣ ಘಟಕ ಸ್ಥಾಪಿಸಲು ಯೋಜನಾ ವರದಿ ರೂಪಿಸಲಾಗಿದ್ದು, ಈ ಬಗ್ಗೆ ಶೀಘ್ರವಾಗಿ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿ ಅಧಿಕಾರಿಗಳಿಗೆ ಹೇಳಿದರು.

    ಗಂಗಸಂದ್ರ ಕೆರೆಯಿಂದ ಮರಳೂರು ಕೆರೆಗೆ ಏತ ನೀರಾವರಿ ಮೂಲಕ ಹೇಮಾವತಿ ನೀರು ತುಂಬಿಸಲು ಟೆಂಡರ್ ಕರೆಯಲಾಗಿದ್ದು, ಮರಳೂರು ಕೆರೆ ಸಮೀಪ ನೀರು ಶುದ್ಧೀಕರಣ ಘಟಕ ಸ್ಥಾಪಿಸಲು ಕರ್ನಾಟಕ ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿ ಅಧಿಕಾರಿಗಳು ಹಾಗೂ ಮಹಾನಗರಪಾಲಿಕೆಯ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲನೆ ಮಾಡಿ ಸೂಕ್ತ ಜಾಗ ಗುರುತಿಸಲು ತಿಳಿಸಿದರು.

    ಅಧೀಕ್ಷಕ ಇಂಜಿನಿಯರ್ ಮಹೇಶ್, ಕಾರ್ಯಪಾಲಕ ಇಂಜಿನಿಯರ್ ಸುರೇಶ್ ಹಾಗೂ ಕರ್ನಾಟಕ ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿ ಕಾರ್ಯಪಾಲಕ ಇಂಜಿನಿಯರ್ ಚಂದ್ರಶೇಖರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts