More

    ನೀರಿನಲ್ಲಿ ಕೊಚ್ಚಿಹೋದ ಬಾಲಕಿ : ಕೋಡಿ ಬಿದ್ದ ರಸ್ತೆಯಲ್ಲಿ ಶಾಲೆಗೆ ತೆರಳುತ್ತಿದ್ದಾಗ ಅವಘಡ



    ಹಾಸನ : ಚನ್ನರಾಯಪಟ್ಟಣ ತಾಲೂಕಿನ ದಡ್ಡಿಹಳ್ಳಿ ಗ್ರಾಮದ ಕೆರೆ ಕೋಡಿ ಬಿದ್ದು ರಸ್ತೆಯ ಮೇಲೆ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ತೆರಳುವ ವೇಳೆ ಬೈಕ್ ಸಮೇತ ಕೊಚ್ಚಿಹೋಗಿದ್ದ ವಿದ್ಯಾರ್ಥಿನಿ ಶವವಾಗಿ ಪತ್ತೆಯಾಗಿದ್ದಾಳೆ.


    ತಾಲೂಕಿನ ನುಗ್ಗೇಹಳ್ಳಿ ಹೋಬಳಿಯ ಹೆಗ್ಗಡಿಗೆರೆ ಗ್ರಾಮದ ರಾಜಭೋವಿ ಎಂಬುವರ ಪುತ್ರಿ ರಂಜಿತಾ(11) ಮೃತ ವಿದ್ಯಾರ್ಥಿನಿ. ರಂಜಿತಾ ತನ್ನ ದೊಡ್ಡಪ್ಪನ ಮಗ ಯಶ್ವಂತ್ ಜತೆ ಗುರುವಾರ ಬೈಕ್‌ನಲ್ಲಿ ಶಾಲೆಗೆ ತೆರಳುತ್ತಿದ್ದಾಗ, ದಡ್ಡಿಹಳ್ಳಿ ಕೆರೆ ಕೋಡಿ ಬಿದ್ದು ರಭಸವಾಗಿ ಹರಿಯುತ್ತಿದ್ದ ನೀರನ್ನು ದಾಟುತ್ತಿದ್ದ ವೇಳೆ ಬೈಕ್‌ನೊಂದಿಗೆ ಕೊಚ್ಚಿಹೋದಳು. ಅದೃಷ್ಟವಶಾತ್ ಯಶ್ವಂತ್ ಅಪಾಯದಿಂದ ಪಾರಾಗಿದ್ದಾನೆ.


    ರಂಜಿತಾ ಹೆಗ್ಗಡಿಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ 5 ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಬುಧವಾರ ಶಾಲೆ ಮುಗಿಸಿಕೊಂಡು ಸಮೀಪದ ಬ್ಯಾಲದಕೆರೆ ಗ್ರಾಮದ ತನ್ನ ಸಂಬಂಧಿಕರ ಮನೆಯಲ್ಲಿ ತಂಗಿದ್ದಳು. ಗುರುವಾರ ಶಾಲೆಗೆ ತೆರಳಲೆಂದು ಯಶ್ವಂತ್ ಜತೆ ಬೈಕ್‌ನಲ್ಲಿ ಹೋಗುತ್ತಿದ್ದಳು. ಬುಧವಾರ ರಾತ್ರಿ ವ್ಯಾಪಕ ಮಳೆ ಸುರಿದ ಪರಿಣಾಮ ದಡ್ಡಿಹಳ್ಳಿ ಗ್ರಾಮದ ಕೆರೆ ಕೋಡಿಯಲ್ಲಿ ಅಪಾಯಕಾರಿ ಮಟ್ಟದಲ್ಲಿ ನೀರು ಹರಿಯುತ್ತಿತ್ತು.


    ಕೋಡಿ ಮೇಲಿನ ರಸ್ತೆಯಲ್ಲಿಯೇ ಹೆಗ್ಗಡಿಹಳ್ಳಿಗೆ ತೆರಳಬೇಕಿದ್ದು, ರಭಸವಾಗಿ ಹರಿಯುತ್ತಿರುವ ನೀರಿನಲ್ಲಿಯೇ ಯಶ್ವಂತ್ ತನ್ನ ಬೈಕ್ ಚಲಾಯಿಸಿದ್ದಾನೆ. ಸ್ವಲ್ಪ ದೂರ ಬರುತಿದ್ದಂತೆಯೇ ರಭಸದಲ್ಲಿದ್ದ ನೀರು ಬೈಕ್ ಸಮೇತ ಎಳೆದೊಯ್ದಿದೆ. ಸಮೀಪದಲ್ಲಿಯೇ ಇದ್ದ ಜನರು ಬಂದು ರಕ್ಷಿಸಲು ಮುಂದಾದರು. ಆದರೆ ಯುವಕನನ್ನು ಮಾತ್ರ ದಡಕ್ಕೆ ಎಳೆತರಲಾಯಿತು. ಆದರೆ ವಿದ್ಯಾರ್ಥಿನಿ ರಂಜಿತಾ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಳೆ. ಬಳಿಕ ಜನರೇ ಮೃತದೇಹವನ್ನು ದಡಕ್ಕೆ ತಂದರು. ಬೈಕ್ ನೀರಿನಲ್ಲಿ ಮುಳುಗಿ ಸಿಲುಕಿಕೊಂಡಿದೆ.


    ಮುಗಿಲು ಮುಟ್ಟಿದ ಆಕ್ರಂದನ: ವಿಷಯ ತಿಳಿಯುತಿದ್ದಂತೆಯೇ ಹೆಗ್ಗಡಿಹಳ್ಳಿ, ದಡ್ಡಿಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಜನರು ದೌಡಾಯಿಸಿದ್ದರು. ಪಾಲಕರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತು. ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿತ್ತು. ಮರಣೊತ್ತರ ಪರೀಕ್ಷೆ ನಡೆದ ಬಳಿಕ ಮೃತ ದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಗುರುವಾರ ಸಂಜೆ ಹೆಗ್ಗಡಿಗೆರೆಯಲ್ಲಿ ಅಂತ್ಯಸಂಸ್ಕಾರ ನೆರವೇರಿತು. ಈ ಸಂಬಂಧ ನುಗ್ಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts