More

    ನಿಷ್ಠಾವಂತರನ್ನು ಕಡೆಗಣಿಸಿದರೆ ಜೆಡಿಎಸ್ ಪಕ್ಷಕ್ಕೆ ಉಳಿವಿಲ್ಲ

    ಕೋಲಾರ: ಪಕ್ಷಕ್ಕಾಗಿ ದುಡಿದವರನ್ನು ನಿರ್ಲಕ್ಷಿಸುವುದರಿಂದ ಸಂಘಟನೆ ದುರ್ಬಲವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಜೆಡಿಎಸ್ ನಿಷ್ಠಾವಂತರು ಜಿಪಂ, ತಾಪಂ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಬಲವರ್ಧನೆಗೆ ಶ್ರಮಿಸುವವರನ್ನು ಪದಾಧಿಕಾರಿಗಳನ್ನಾಗಿ ಘೋಷಿಸುವಂತೆ ಒತ್ತಾಯಿಸಿದ್ದಾರೆ.

    ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಜೆಪಿ ಭವನದಲ್ಲಿ ಸೋಮವಾರ ನಡೆದ ಕೋಲಾರ ಜಿಲ್ಲಾ ಜೆಡಿಎಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ನಿಷ್ಠಾವಂತರು, ಚುನಾವಣೆ ಬಂದಾಗ ನಮ್ಮನ್ನು ನೆನಪು ಮಾಡಿಕೊಂಡರೆ ಸಾಲದು, ಕಷ್ಟ-ಸುಖದಲ್ಲೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕೋರಿದರು ಎನ್ನಲಾಗಿದೆ.
    ಕೋಲಾರ ಜೆಡಿಎಸ್ ಭದ್ರಕೋಟೆಯಾಗಿತ್ತು. ಇದಕ್ಕೆ ನಿಷ್ಠಾವಂತರ ಶ್ರಮ ಪ್ರಮುಖ ಕಾರಣ. ಚುನಾವಣೆ ಮುಗಿಯುತ್ತಿದ್ದಂತೆ ನಮ್ಮನ್ನು ಕಾಲ ಕಸಕ್ಕಿಂತ ಕಡೆಯಾಗಿ ನೋಡಲಾಗುತ್ತಿದೆ ಎಂದು ಮನದಾಳದ ನೋವು ತೋಡಿಕೊಂಡಿದ್ದಾರೆ.

    ಕೋಲಾರ ಕ್ಷೇತ್ರದಲ್ಲಿ ಪಕ್ಷದ ಶಾಸಕರಿದ್ದರೂ ಕಾರ್ಯಕರ್ತರಿಗೆ ಬೆಲೆ ಸಿಗುತ್ತಿಲ್ಲ, ಸರ್ಕಾರಿ ಕಚೇರಿ, ಪೊಲೀಸ್ ಠಾಣೆಗಳಲ್ಲಿ ಕಾರ್ಯಕರ್ತರಿಗೆ ಆಗುತ್ತಿರುವ ಅನ್ಯಾಯ ತಪ್ಪಿಸಲಾಗುತ್ತಿಲ್ಲ, ಚುನಾವಣೆ ಬಂದಾಗ ಕೆಲಸ ಮಾಡಲು ಮಾತ್ರ ನಾವು ಬೇಕೇ? ಜಿಲ್ಲೆಯ ಕಾರ್ಯಕರ್ತರು ನಿಮಗೆ ಪ್ರಾಣ ಕೊಡಲು ಸಿದ್ಧರಿದ್ದಾರೆ. ನಮ್ಮಲ್ಲಿನ ಗೊಂದಲ, ಅಪನಂಬಿಕೆ ದೂರ ಮಾಡದೆ ಪಕ್ಷ ಸಂಘಟಿಸಿ ಎಂದರೆ ಹೇಗೆ ಸಾಧ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಗಮನ ಸೆಳೆದ ರಾಜೇಶ್ವರಿ: 20 ವರ್ಷಗಳಲ್ಲಿ ಆಗಿರುವ ವ್ಯತ್ಯಾಸ, ಗೊಂದಲಗಳ ಕುರಿತು ಕೋಲಾರ ಎಪಿಎಂಸಿ ಮಾಜಿ ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಎಳೆಎಳೆಯಾಗಿ ಬಿಡಿಸಿಟ್ಟು ಸಂಘಟನೆಗೆ ಒತ್ತು ನೀಡುವವರಿಗೆ ಜವಾಬ್ದಾರಿ ನೀಡುವಂತೆ ಒತ್ತಾಯಿಸಿದರು.
    ಪಕ್ಷ ನಿಷ್ಠರಿಗೆ ಆಗಿರುವ ಅನ್ಯಾಯದ ಬಗ್ಗೆ ಜಿಲ್ಲಾ ಮಾಜಿ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್ ವಾಗ್ದಾಳಿ ನಡೆಸಿದಾಗ ಸಮಾಧಾನದಿಂದ ಇರುವಂತೆ ಮುಖಂಡರು ಸೂಚಿಸಿದರು.

    ನಟರಾಜ್‌ಗೆ ನನ್ನ ಮೇಲೆ ಕೋಪ ಇದ್ದಂತೆ ಕಾಣುತ್ತದೆ, ನಿಜ. ನಾನು ಸಿಎಂ ಆಗಿದ್ದಾಗ ಕಾರ್ಯಕರ್ತರಿಗೆ ನ್ಯಾಯ ಒದಗಿಸಲಾಗಿಲ್ಲ, ಮುಂದೆ ಹೀಗಾಗದು, ಕಾರ್ಯಕರ್ತರ ಸಮಸ್ಯೆಗೆ ಸ್ಪಂದಿಸುವೆ, ಪದಾಧಿಕಾರಿಗಳನ್ನು ನೇಮಿಸಲು ಸೂಚಿಸುವೆ, ಪಕ್ಷ ಅಧಿಕಾರಕ್ಕೆ ಬಂದಾಗ ಕಾರ್ಯಕರ್ತರು ಮತ್ತು ಮುಖಂಡರಿಗೆ ಅಧಿಕಾರ ಸಿಗುವಂತೆ ನೋಡಿಕೊಳ್ಳುವೆ ಎಂದು ತಿಳಿಸಿದರು ಎನ್ನಲಾಗಿದೆ.
    ಶಾಸಕ ಕೆ.ಶ್ರೀನಿವಾಸಗೌಡ ಗೈರಾಗಿದ್ದರೆ, ಮುಳಬಾಗಿಲು ತಾಲೂಕಿನ ಮುಖಂಡರು ಸಭೆಯಿಂದ ಹೊರಗುಳಿದಿದ್ದರು.

    ಸ್ವಾಮಿ, ಬ್ಯಾಲಹಳ್ಳಿ ವಿರುದ್ಧ ಗರಂ: ಶಾಸಕ ಕೆ.ಆರ್.ರಮೇಶ್ ಕುಮಾರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡರ ಕುತಂತ್ರ ರಾಜಕಾರಣದಿಂದ ಶ್ರೀನಿವಾಸಪುರದಲ್ಲಿ ಜಿ.ಕೆ.ವೆಂಕಟಶಿವಾರೆಡ್ಡಿ ಸೋತರು, ವೋಟಿಗಾಗಿ ಬ್ಯಾಂಕಿನಿಂದ ಮಹಿಳೆಯರಿಗೆ ಸಾಲ ನೀಡಿದರು, ಮುಂದೆ ಈ ಆಟ ನಡೆಯಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಗುಡುಗಿದರೆಂದು ತಿಳಿದು ಬಂದಿದೆ. ಪಕ್ಷಕ್ಕೆ ಬಹುಮತ ಸಿಕ್ಕಿದ್ದರೆ ಕಾರ್ಯಕರ್ತರಿಗೆ ಹೆಚ್ಚಿನ ಅಧಿಕಾರ ಮತ್ತು ಅವಕಾಶ ಸಿಗುತ್ತಿತ್ತು. ಕಾರ್ಯಕರ್ತರಿಗೆ ಆಗಿರುವ ಬೇಸರಕ್ಕೆ ನಾನೇ ಹೊಣೆ, ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ 130 ಸ್ಥಾನ ಸಿಗುವಂತಾಗಬೇಕು, ಇಲ್ಲದಿದ್ದರೆ ಪಕ್ಷಕ್ಕೆ ಉಳಿಗಾಲವಿಲ್ಲ ಎಂದಿದ್ದಾರೆ ಎನ್ನಲಾಗಿದೆ.

    ಹಲವರ ಹೆಸರು ಪ್ರಸ್ತಾಪ: ಮುಂದಿನ ಚುನಾವಣೆಗೆ ಬಂಗಾರಪೇಟೆಯಿಂದ ಮಲ್ಲೇಶ್ ಬಾಬು, ಮುಳಬಾಗಿಲಿನಿಂದ ಸಮೃದ್ಧಿ ಮಂಜುನಾಥ್, ಮಾಲೂರಿನಿಂದ ರಾಮೇಗೌಡ, ಶ್ರೀನಿವಾಸಪುರದಿಂದ ಜಿ.ಕೆ.ವೆಂಕಟಶಿವಾರೆಡ್ಡಿ ಅವರಿಗೆ ಟಿಕೆಟ್ ಖಾತರಿ. ಕೆಜಿಎಫ್‌ಗೆ ಸೂಕ್ತ ಅಭ್ಯರ್ಥಿಯನ್ನು ಹುಡುಕಲಾಗುತ್ತಿದೆ, ಕೋಲಾರದಿಂದ ಎಂಎಲ್‌ಸಿ ಇಂಚರ ಗೋವಿಂದರಾಜು ಅವರನ್ನು ಕಣಕ್ಕಿಳಿಸುವ ಕುರಿತು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಇನ್ನೂ ಹಲವು ಹೆಸರು ಪ್ರಸ್ತಾಪವಾಗಿದೆ.

    ಪ್ರಮುಖರ ಉಪಸ್ಥಿತಿ: ಎಂಎಲ್‌ಸಿ ಇಂಚರ ಗೋವಿಂದರಾಜು, ಜೆಡಿಎಸ್ ಜಿಲ್ಲಾಧ್ಯಕ್ಷ ವೆಂಕಟಶಿವಾರೆಡ್ಡಿ, ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಚಿಕ್ಕಬಳ್ಳಾಪುರದ ಮಾಜಿ ಶಾಸಕ ಬಚ್ಚೇಗೌಡ, ಚಿಂತಾಮಣಿ ಶಾಸಕ ಕೃಷ್ಣಾರೆಡ್ಡಿ, ಮಾಜಿ ಎಂಎಲ್‌ಸಿ ಆರ್.ಚೌಡರೆಡ್ಡಿ, ಶಿಡ್ಲಘಟ್ಟದ ಅಭ್ಯರ್ಥಿ ರವಿ, ಮುಖಂಡರಾದ ಕೆ.ಬಿ.ಗೋಪಾಲಕೃಷ್ಣ, ವಡಗೂರು ರಾಮು, ಎಂ.ಮಲ್ಲೇಶ್ ಬಾಬು, ಕೆಜಿಎಫ್‌ನ ದಯಾನಂದ್, ಮಾಲೂರಿನ ರಾಮೇಗೌಡ, ಚಂದ್ರಶೇಖರಗೌಡ, ಮೂರಾಂಡಹಳ್ಳಿ ಗೋಪಾಲ್, ಸಿಎಂಆರ್ ಶ್ರೀನಾಥ್ ಇನ್ನಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts