More

    ನಿವೃತ್ತ ಯೋಧನ ಸ್ವಯಂ ಕ್ವಾರಂಟೈನ್

    ವಿಜಯವಾಣಿ ವಿಶೇಷ ಹಾವೇರಿ

    ತಮ್ಮಿಂದ ಇತರರಿಗೆ ಕರೊನಾ ಸೋಂಕು ಹರಡದಿರಲಿ ಎಂಬ ಕಾರಣಕ್ಕಾಗಿ ನಿವೃತ್ತ ಯೋಧರೊಬ್ಬರು ಮನೆಗೆ ಹೋಗದೇ ಜಮೀನಿನಲ್ಲಿರುವ ಶೆಡ್​ನಲ್ಲಿ ಸ್ವಯಂ ಕ್ವಾರಂಟೈನ್ ಆಗಿದ್ದಾರೆ. ಇಲ್ಲಿಗೆ ಸಮೀಪದ ಕೋಡಬಾಳ ಗ್ರಾಮದಲ್ಲಿ ಲಿಂಗರಾಜ ಕುಬೇರಪ್ಪ ಶಿವಸಿಂಪಗೇರ ಎಂಬ ನಿವೃತ್ತ ಯೋಧರು ಸ್ವಯಂ ಕ್ವಾರಂಟೈನ್ ಆಗಿದ್ದಾರೆ. 2003ರಲ್ಲಿ ಭಾರತೀಯ ಸೇನೆ ಸೇರಿದ ಲಿಂಗರಾಜ 17 ವರ್ಷ ಸೇನೆಯಲ್ಲಿ ಟೋಪಕಾನ್ ವಾಹನದ ಚಾಲಕರಾಗಿ ಸೇವೆ ಸಲ್ಲಿಸಿ 2020ರ ಆಗಸ್ಟ್​ನಲ್ಲಿ ಸೇವಾ ನಿವೃತ್ತಿ ಹೊಂದಿದ್ದಾರೆ. ನಿವೃತ್ತಿಯ ನಂತರ ಗ್ರಾಮಕ್ಕೆ ಬಂದಿರುವ ಲಿಂಗರಾಜ ಅವರಿಗೆ ಕರೊನಾ ಟೆಸ್ಟ್​ನಲ್ಲಿ ನೆಗೆಟಿವ್ ವರದಿ ಬಂದಿದೆ. ಆದರೂ ಸೋಂಕು ಹೆಚ್ಚಿರುವ ಮಹಾರಾಷ್ಟ್ರದಿಂದ ಬಂದಿರುವ ಕಾರಣ 14 ದಿನಗಳ ಕಾಲ ಸ್ವಯಂ ಕ್ವಾರಂಟೈನ್ ಆಗಿದ್ದಾರೆ.

    ಲಿಂಗರಾಜ ಮೂಲತಃ ಗದಗ ಜಿಲ್ಲೆ ಕೋಟುಮಚಗಿ ಗ್ರಾಮದವರು. ಸೇವಾ ನಿವೃತ್ತಿಯ ನಂತರ ನೇರವಾಗಿ ಅಲ್ಲಿಗೆ ಹೋಗಲು ಸಿದ್ಧನಾಗಿದ್ದರು. ಆದರೆ, ಅವರ ಕುಟುಂಬದಲ್ಲಿ ವಯಸ್ಸಾದ ತಂದೆ, ತಾಯಿ ಸೇರಿ 15 ಜನರಿದ್ದಾರೆ. ಅಲ್ಲಿಗೆ ಹೋಗುವ ಬದಲು ತಮ್ಮ ಸಂಬಂಧಿಕರ ಗ್ರಾಮ ಹಾಗೂ ಚಿಕ್ಕವಯಸ್ಸಿನಲ್ಲಿ ಆಡಿ ಬೆಳೆದ ತಾಲೂಕಿನ ಕೋಡಬಾಳಕ್ಕೆ ಆಗಮಿಸಿ ಇಲ್ಲಿ ಗ್ರಾಮದ ಹೊರವಲಯದಲ್ಲಿರುವ ತಗಡಿನ ಶೆಡ್​ನಲ್ಲಿ ಕ್ವಾರಂಟೈನ್ ಆಗಿದ್ದಾರೆ. ನಿತ್ಯ ಸಂಬಂಧಿಕರು ಮನೆಯಿಂದ ಪಾರ್ಸೆಲ್ ಮೂಲಕ ಊಟ, ಉಪಾಹಾರದ ವ್ಯವಸ್ಥೆ ಮಾಡಿಕೊಂಡಿದ್ದಾರೆ.

    160 ಜನರಿಗೆ ಸೋಂಕು ದೃಢ
    ಹಾವೇರಿ:
    ಆರೋಗ್ಯ ಇಲಾಖೆಯ ಕ್ವಾಲಿಟಿ ಮ್ಯಾನೇಜರ್, ಕಂದಾಯ ಇಲಾಖೆಯ ಎಎಸ್​ಒ, ಹೆಸ್ಕಾಂ, ಪುರಸಭೆ, ಆರೋಗ್ಯ ಹಾಗೂ ಪೊಲೀಸ್ ಇಲಾಖೆ ಉದ್ಯೋಗಿ ಸೇರಿ ಜಿಲ್ಲೆಯಲ್ಲಿ ಶುಕ್ರವಾರ 160 ಜನರಿಗೆ ಕರೊನಾ ದೃಢಪಟ್ಟಿದೆ. 37 ಜನರು ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ ಈವರೆಗೆ 4,952 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಇಂದಿನವರೆಗೆ 3,299 ಜನರು ಸೋಂಕಿನಿಂದ ಗುಣವಾಗಿ ಬಿಡುಗಡೆ ಹೊಂದಿದ್ದಾರೆ. 119 ಜನರು ಕೋವಿಡ್​ನಿಂದ ಮೃತಪಟ್ಟಿದ್ದಾರೆ. 1,534 ಸಕ್ರಿಯ ಪ್ರಕರಣಗಳಿದ್ದು, 1,134 ಸೋಂಕಿತರು ಹೋಂ ಐಸೋಲೇಷನ್​ನಲ್ಲಿ ಹಾಗೂ 400 ಸೋಂಕಿತರು ಕೋವಿಡ್ ಕೇರ್ ಆಸ್ಪತ್ರೆ, ಕೋವಿಡ್ ಕೇರ್​ಹೆಲ್ತ್ ಸೆಂಟರ್, ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

    ತಾಲೂಕುವಾರು ವಿವರ: ಶಿಗ್ಗಾಂವಿ ತಾಲೂಕು 32, ಬ್ಯಾಡಗಿ ಹಾಗೂ ರಾಣೆಬೆನ್ನೂರ ತಾಲೂಕು ತಲಾ 30, ಹಾವೇರಿ 25, ಹಿರೇಕೆರೂರ 19, ಹಾನಗಲ್ಲ ಹಾಗೂ ಸವಣೂರ ತಾಲೂಕು ತಲಾ 10 ಹಾಗೂ ಶಿವಮೊಗ್ಗ ಜಿಲ್ಲೆಯ ಒಬ್ಬರು, ಕೊಪ್ಪಳ ಜಿಲ್ಲೆಯ ಮೂವರು ಸೇರಿ 4 ಜನರಿಗೆ ಶುಕ್ರವಾರ ಸೋಂಕು ದೃಢಪಟ್ಟಿದೆ.

    ಸೋಂಕಿನಿಂದ ಗುಣವಾಗಿ ಸವಣೂರ ತಾಲೂಕಿನ 21, ಬ್ಯಾಡಗಿ 14, ರಾಣೆಬೆನ್ನೂರ ತಾಲೂಕಿನ ಇಬ್ಬರು ಬಿಡುಗಡೆ ಶುಕ್ರವಾರ ಬಿಡುಗಡೆ ಹೊಂದಿದ್ದಾರೆ. ಸೋಂಕಿತರ ನಿವಾಸದ ಪ್ರದೇಶವನ್ನು ನಿಯಮಾನುಸಾರ ಕಂಟೇನ್ಮೆಂಟ್ ಜೋನ್ ಹಾಗೂ ಬಫರ್​ಜೋನ್ ಆಗಿ ಘೊಷಿಸಲಾಗಿದೆ. ಆಯಾ ತಾಲೂಕು ದಂಡಾಧಿಕಾರಿಗಳನ್ನು ಇನ್ಸಿಡೆಂಟ್ ಕಮಾಂಡರ್ ಆಗಿ ನೇಮಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts