More

    ನಿಲ್ಲದ ದಲಿತರ ಮೇಲಿನ ದೌರ್ಜನ್ಯ ಪ್ರಕರಣ

    ಶ್ರೀರಂಗಪಟ್ಟಣ: ಗ್ರಾಮೀಣ ಭಾಗದಲ್ಲಿ ಇಂದಿಗೂ ದಲಿತರ ಮೇಲೆ ಬಹಿಷ್ಕಾರ, ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಡಾ.ಅಂಬೇಡ್ಕರ್ ಒಕ್ಕೂಟಗಳ ಮುಖಂಡ ರವಿಚಂದ್ರು ಅಸಮಾಧಾನ ವ್ಯಕ್ತಪಡಿಸಿದರು.

    ಪಟ್ಟಣದ ಟೌನ್ ಠಾಣೆಯ ಶ್ರೀರಂಗಪಟ್ಟಣ ಉಪಅಧೀಕ್ಷಕರ ಕಚೇರಿಯಲ್ಲಿ ಶನಿವಾರ ಡಿವೈಎಸ್ಪಿ ಮುರಳಿ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಎಸ್ಸಿ, ಎಸ್ಟಿ ಸಮುದಾಯದ ಜನರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಸಂವಿಧಾನದಲ್ಲಿ ಎಲ್ಲರಿಗೂ ಸಮಾನತೆ ಇದ್ದರೂ ದಲಿತರ ಮೇಲಿನ ದೌರ್ಜನ್ಯ ನಿಂತಿಲ್ಲ. ಜಾತಿ ನಿಂದನೆ, ಗ್ರಾಪಂ ಕಚೇರಿಗಳ ಕೆಲಸ ಹಾಗೂ ಮಳಿಗೆಗಳ ಗುತ್ತಿಗೆಗಳಲ್ಲಿ ಅನ್ಯಾಯ ಮಾಡಲಾಗುತ್ತಿದೆ. ಪೊಲೀಸ್ ಅಧಿಕಾರಿಗಳು ಪ್ರತಿ ತಿಂಗಳಿಗೊಮ್ಮೆ ಸಮುದಾಯದ ಜನರೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದರೂ ಕಡಿವಾಣ ಇಲ್ಲ ಎಂದು ದೂರಿದರು.

    ಪಾಂಡವಪುರ ತಾಲೂಕಿನ ಸೋಮಶೇಖರ್ ಮಾತನಾಡಿ, ಪೊಲೀಸ್ ಇಲಾಖೆ ಮಾತ್ರವಲ್ಲದೆ ಇತರ ಅಧಿಕಾರಿಗಳು ಸಭೆಗಳನ್ನು ಆಯೋಜಿಸುವ ಮೂಲಕ ಸಮಸ್ಯೆಗಳ ಕುರಿತು ಪಟ್ಟಿ ಮಾಡಿ ಬಗೆಹರಿಸಬೇಕು. ಸಾಮಾಜಿಕ, ಶೈಕ್ಷಣಿಕ ಹಾಗೂ ಕಾನೂನಾತ್ಮಕವಾಗಿ ತುಳಿತಕ್ಕೆ ಒಳಗಾದ ಜನರಿಗೆ ಸಮಾನತೆಯಿಂದ ಬದಕಲು ಅವಕಾಶ ಕಲ್ಪಿಸಿಕೊಡಲು ಪ್ರಯತ್ನಿಸಬೇಕು ಎಂದು ಒತ್ತಾಯಿಸಿದರು.

    ಡಿವೈಎಸ್ಪಿ ಮುರುಳಿ ಮಾತನಾಡಿ, ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾನೂನಿನ ನಿಯಮದಂತೆ ಪಾರದರ್ಶಕವಾಗಿ ಕೆಲಸ ನಿರ್ವಹಿಸಿ ಎಲ್ಲ ವರ್ಗದ ಜನರಿಗೂ ಸ್ಪಂದಿಸುತ್ತಿದ್ದಾರೆ. ಬಗೆಹರಿಸಬಹುದಾದ ಸಮಸ್ಯೆಗಳು ಉಂಟಾದಾಗ ಎಲ್ಲವನ್ನೂ ಶಾಂತಿ, ಸುವ್ಯವಸ್ಥೆಯಿಂದ ನಿಭಾಯಿಸುತ್ತಿದ್ದಾರೆ. ಜತೆಗೆ ಸಮುದಾಯದ ಸಮಸ್ಯೆಗಳನ್ನು ಪಟ್ಟಿ ಮಾಡಿ ಸಂಬಂಧಿಸಿದ ಇಲಾಖೆಗಳಿಗೆ ಪತ್ರ ಬರೆದು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

    ಸಭೆಯಲ್ಲಿ ಅರಕೆರೆ ಸರ್ಕಲ್ ಇನ್ಸ್ ಪೆಕ್ಟರ್ ಟಿ.ಎಂ.ಪುನೀತ್ , ಪಾಂಡವಪುರ ಸರ್ಕಲ್ ಇನ್ಸ್ ಪೆಕ್ಟರ್ ಸುಮರಾಣಿ, ಶ್ರೀರಂಗಪಟ್ಟಣ ಟೌನ್ ಠಾಣೆ ಇನ್ಸ್‌ಪೆಕ್ಟರ್ ಬಿ.ಎಸ್.ಪ್ರಕಾಶ್, ಅರಕೆರೆ ಪಿಎಸ್‌ಐ ಬ್ಯಾಳೀ, ಕೆಆರ್‌ಎಸ್ ಠಾಣೆಯ ಬಸವರಾಜು, ದಸಂಸ ಮುಖಂಡರಾದ ಪಾಂಡು, ವಿಜಯಕುಮಾರ್, ಕುಬೇರ, ನಂಜುಂಡ ಮೌರ್ಯ, ಚಂದ್ರಶೇಖರ್, ರಮೇಶ್, ಹೊನ್ನರಾಜು, ಕುಮಾರ್, ಮುಂಡುಗದೊರೆ ಮೋಹನ್ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts