More

    ನಿಲ್ದಾಣ ಉದ್ಘಾಟನೆಗೆ ಅಂತೂ ಮುಹೂರ್ತ ಫಿಕ್ಸ್

    ಗದಗ: ನಗರದ ಹೃದಯಭಾಗದಲ್ಲಿರುವ ನವೀಕೃತ ಬಸ್ ನಿಲ್ದಾಣ (ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ ಬಸ್ ನಿಲ್ದಾಣ) ಉದ್ಘಾಟನೆಗೆ ಕೊನೆಗೂ ಕಾಲ ಕೂಡಿ ಬಂದಿದೆ. ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಜ. 24ರಂದು ಮಧ್ಯಾಹ್ನ 4 ಗಂಟೆಗೆ ನೂತನ ಬಸ್ ನಿಲ್ದಾಣವನ್ನು ಲೋಕಾರ್ಪಣೆಗೊಳಿಸುವರು.

    ಐದು ಕೋಟಿ ರೂ. ವೆಚ್ಚದಲ್ಲಿ ನಿರ್ವಣಗೊಂಡಿರುವ ಬಸ್ ನಿಲ್ದಾಣದ ಕಾಮಗಾರಿ ಕಳೆದ ಮಾರ್ಚ್ ತಿಂಗಳಲ್ಲಿ ಪೂರ್ಣಗೊಂಡಿತ್ತು. ಶೌಚಗೃಹ, ನೀರು ಪೂರೈಕೆ ಸೇರಿದಂತೆ ಸಕಲ ಸೌಲಭ್ಯಗಳೊಂದಿಗೆ ನಿಲ್ದಾಣ ಸಿದ್ಧಗೊಂಡಿದ್ದರೂ ಉದ್ಘಾಟನೆ ಭಾಗ್ಯ ದೊರೆತಿರಲಿಲ್ಲ. ಬಸ್ ನಿಲ್ದಾಣವನ್ನು ಉದ್ಘಾಟಿಸಬೇಕು ಎಂದು ಅನೇಕ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.

    ನವೀಕೃತ ಬಸ್ ನಿಲ್ದಾಣದಿಂದ ಸದ್ಯಕ್ಕೆ ಗ್ರಾಮೀಣ ಭಾಗದ ಬಸ್​ಗಳು ಮಾತ್ರ ಸಂಚರಿಸಲಿವೆ. ಉಳಿದಂತೆ ಯಾವುದೇ ಬದಲಾವಣೆ ಮಾಡಿಲ್ಲ. ಯಥಾಪ್ರಕಾರ ಲಾಂಗ್​ರೂಟ್ ಬಸ್​ಗಳು ಮುಂಡರಗಿ ರಸ್ತೆಯಲ್ಲಿರುವ ಹೊಸ ಬಸ್ ನಿಲ್ದಾಣದಿಂದಲೇ ಸಂಚರಿಸಲಿವೆ ಎಂದು ಸಾರಿಗೆ ಇಲಾಖೆ ವಿಭಾಗೀಯ ನಿಯಂತ್ರಣಾಧಿಕಾರಿ ಎಫ್.ಸಿ.ಹಿರೇಮಠ ‘ವಿಜಯವಾಣಿ’ಗೆ ತಿಳಿಸಿದರು.

    ಕಳೆದ ವರ್ಷವೇ ಬಸ್ ನಿಲ್ದಾಣ ಉದ್ಘಾಟನೆಗೊಳ್ಳಬೇಕಿತ್ತು. ಆದರೆ, ಕರೊನಾ ಸೋಂಕು ವ್ಯಾಪಿಸಿದ್ದರಿಂದ ಉದ್ಘಾಟನೆ ಕಾರ್ಯ ಮುಂದೂಡಲಾಗಿತ್ತು. ಸಾರಿಗೆ ಸಚಿವರ ದಿನಾಂಕ ಲಭ್ಯ ಇಲ್ಲದಿರುವುದು ಸೇರಿದಂತೆ ವಿವಿಧ ಕಾರಣಗಳಿಂದ ನಿಲ್ದಾಣ ಉದ್ಘಾಟನೆ ಮಾಡುವುದು ತಡವಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.

    ಕಾರ್ಯಕ್ರಮದಲ್ಲಿ ಅಪಘಾತ ರಹಿತ ಚಾಲಕರಿಗೆ ಬೆಳ್ಳಿ ಪದಕ ವಿತರಣೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕಾಂಗ್ರೆಸ್​ನಿಂದ ಉದ್ಘಾಟನೆಗೆ ಯತ್ನ

    ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಳೇ ಬಸ್ ನಿಲ್ದಾಣ ಕಾಮಗಾರಿಗೆ 5 ಕೋಟಿ ರೂ. ಅನುದಾನ ನೀಡಲಾಗಿತ್ತು. ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರು ನವೀಕೃತ ಬಸ್ ನಿಲ್ದಾಣ ಕಾಮಗಾರಿಗೆ ಚಾಲನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಶಾಸಕ ಎಚ್.ಕೆ. ಪಾಟೀಲ ಅವರು ಮೂರು ತಿಂಗಳ ಹಿಂದೆಯೇ ಬಸ್ ನಿಲ್ದಾಣ ಉದ್ಘಾಟನೆಗೆ ಮುಂದಾಗಿದ್ದರು. ಈ ಕುರಿತು ಮಾಧ್ಯಮಗಳಿಗೆ ಪ್ರಕಟಣೆ ಕೂಡ ನೀಡಲಾಗಿತ್ತು. ಆದರೆ, ಸಚಿವರ ಅನುಪಸ್ಥಿತಿಯಲ್ಲಿ ಕಟ್ಟಡ ಉದ್ಘಾಟಿಸುವುದಕ್ಕೆ ವಿರೋಧ ವ್ಯಕ್ತವಾದ ಕೂಡಲೆ, ಬಸ್ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮ ರದ್ದು ಮಾಡಲಾಯಿತು.

    ನವೀಕೃತ ಬಸ್ ನಿಲ್ದಾಣದಿಂದ ಬಸ್ ಸಂಚಾರ ಆರಂಭವಾದರೆ ಗ್ರಾಮೀಣ ಭಾಗದ ಜನರು ಮುಖ್ಯವಾಗಿ ಶಾಲಾ ಕಾಲೇಜ್ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಶಾಲಾ ಕಾಲೇಜ್​ಗಳು ಆರಂಭ ಮತ್ತು ಮುಕ್ತಾಯದ ಸಮಯದಲ್ಲಿ ಗ್ರಾಮೀಣ ಭಾಗಕ್ಕೆ ಬಸ್ ಸಂಚರಿಸಲು ಕ್ರಮ ಕೈಗೊಳ್ಳಬೇಕು. ನವೀಕೃತ ಬಸ್ ನಿಲ್ದಾಣಕ್ಕೆ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ ಬಸ್ ನಿಲ್ದಾಣ ಎಂದು ನಾಮಕರಣ ಮಾಡಿರುವುದು ಹರ್ಷ ತಂದಿದೆ.

    | ಗಿರೀಶ ನರಗುಂದಕರ, ಸಹ ಕಾರ್ಯದರ್ಶಿ, ಎಬಿವಿಪಿ ನಗರ ಘಟಕ, ಗದಗ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts