More

    ನಿರ್ವಹಣೆಗೆ ತಾತ್ಸಾರ, ಅವ್ಯವಸ್ಥೆಯ ಆಗರ

    ಬೆಳಗಾವಿ: 2 ತಿಂಗಳ ಹಿಂದಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಿದ್ದ ಹೈಟೆಕ್ ಬಸ್ ನಿಲ್ದಾಣ ಸ್ಮಾರ್ಟ್ ಸಿಟಿ ಹಾಗೂ ದಂಡು ಮಂಡಳಿ ಅಧಿಕಾರಿಗಳ ನಿರ್ಲಕ್ಷೃದಿಂದಾಗಿ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.

    ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಇತ್ತೀಚೆಗೆ ಕೋಟ್ಯಂತರ ರೂ. ಖರ್ಚು ಮಾಡಿ ನಿರ್ಮಿಸಿರುವ ಹೈಟೆಕ್ ಬಸ್ ನಿಲ್ದಾಣ, ಅವ್ಯವಸ್ಥೆಯ ಆಗರವಾಗಿದೆ. ಕಸದ ತೊಟ್ಟಿಗಳು ತುಂಬಿ ತುಳುಕುತ್ತಿವೆ. ಇದರಿಂದಾಗಿ ನಿಲ್ದಾಣದ ಪ್ರಾಂಗಣವೇ ಕಸದ ತೊಟ್ಟಿಯಂತಾಗಿದೆ. ಪ್ರಯಾಣಿಕರು ಮೂಗು ಮುಚ್ಚಿಕೊಂಡು ಬಸ್‌ಗಳಿಗೆ ಕಾಯುವ ದುಸ್ಥಿತಿ ನಿರ್ಮಾಣವಾಗಿದೆ.
    ಅಧಿಕಾರಿಗಳ ನಿಷ್ಕಾಳಜಿ: ನಿಲ್ದಾಣದಲ್ಲಿನ ಅವ್ಯವಸ್ಥೆಗೆ ಅಧಿಕಾರಿಗಳ ನಿಷ್ಕಾಳಜಿಯೇ ಪ್ರಮುಖ ಕಾರಣವಾಗಿದ್ದು, ಇಲ್ಲಿನ ಚಟುವಟಿಕೆಗಳ ಬಗ್ಗೆ ಸ್ಮಾರ್ಟ್ ಸಿಟಿ ಹಾಗೂ ದಂಡುಮಂಡಳಿ ಅಧಿಕಾರಿಗಳಿಗೆ ಅನೇಕ ಬಾರಿ ಮಾಹಿತಿ ನೀಡಿ, ಬೆಳಕಿನ ವ್ಯವಸ್ಥೆ ಮಾಡಲು ಮನವಿ ಮಾಡಿದ್ದೇವೆ. ಆದರೆ, ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ನಿತ್ಯ ಇಲ್ಲಿಂದಲೇ ಸಂಚರಿಸುವ ಶಿಕ್ಷಕರೊಬ್ಬರು.

    ಪುಕ್ಕ್ಕಟ್ಟೆ ಲಾಡ್ಜಿಂಗ್: ನೋಡಲು ಆಕರ್ಷಣೀಯವಾಗಿ ನಿರ್ಮಿಸಿರುವ ಈ ಬಸ್ ನಿಲ್ದಾಣವನ್ನು ಹೊರ ರಾಜ್ಯದ ನಿರ್ಗತಿಕರು ಆಶ್ರಯತಾಣವನ್ನಾಗಿ ಮಾಡಿಕೊಂಡಿದ್ದಾರೆ. ನಿಲ್ದಾಣದಲ್ಲಿಯೇ ಅಡುಗೆ ಪಾತ್ರೆ, ಹಾಸಿಗೆ, ಬಟ್ಟೆ ಸೇರಿ ಇನ್ನಿತರ ವಸ್ತುಗಳನ್ನು ತಂದಿಟ್ಟುಕೊಂಡಿದ್ದಾರೆ. ಹಗಲಲ್ಲಿ ಪ್ರಯಾಣಿಕರ ಸೋಗಿನಲ್ಲಿರುವ ಇವರು, ರಾತ್ರಿಯೂ ಇಲ್ಲಿಯೇ ವಸತಿ ಮಾಡುತ್ತಾರೆ. ನಿಲ್ದಾಣದಲ್ಲಿ ಬೋರ್ಡ್ ಹಾಕಲಾಗಿರುವ ಸಂಖ್ಯೆಯಷ್ಟು ಬಸ್‌ಗಳು ಸಹ ಒಳ ಬರುತ್ತಿಲ್ಲ. ಇದರಿಂದ ಮೂರ‌್ನಾಲ್ಕು ಗಂಟೆ ಕಾಯುವಂತಾಗಿದೆ. ಜತೆಗೆ ಇಲ್ಲಿನ ನಿರ್ಗತಿಕರ ವಾಸದ ಬಗ್ಗೆ ಶಹಾಪುರ ಹಾಗೂ ಮಚ್ಛೆಯಲ್ಲಿನ ಪುನರ್ವಸತಿ ಕೇಂದ್ರಗಳಿಗೆ ಕರೆ ಮಾಡಿ, ಮಾಹಿತಿ ನೀಡಿದರೂ ಯಾರೊಬ್ಬರೂ ಸ್ಪಂದಿಸುವುದಿಲ್ಲ. ಹೀಗಾಗಿ, ಪ್ರಯಾಣಿಕರಿಗೆ ತೀವ್ರ ಕಿರಿಕಿರಿಯಾಗುತ್ತಿದೆ. ಕೆಎಸ್‌ಆರ್‌ಟಿಸಿಯಿಂದ ಪ್ರಯಾಣಿಕರಿಗೆ ಬಸ್‌ಗಳ ಮಾಹಿತಿ ನೀಡುವುದಕ್ಕಾಗಿ ಓರ್ವ ನಿಯಂತ್ರಣಾಧಿಕಾರಿಯನ್ನೂ ನಿಯೋಜಿಸಿಲ್ಲ ಎಂದು ಸ್ಥಳೀಯ ವ್ಯಾಪಾರಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ವಿದ್ಯುತ್ ಬಿಲ್ ನೀನು ತುಂಬುತ್ತೀಯಾ…?

    ಕೆಲ ಸ್ಥಳೀಯ ಮಹಿಳೆಯರು ಇದೇ ಪ್ರಾಂಗಣ ಹಾಗೂ ರೈಲ್ವೆ ನಿಲ್ದಾಣದ ಸಮೀಪದಲ್ಲಿ ಸುಳಿದಾಡುತ್ತ, ಪುರುಷರೊಂದಿಗೆ ವ್ಯವಹರಿಸುತ್ತಾರೆ. ಸಂಜೆಯಾಗುತ್ತಿದ್ದಂತೆ ಕತ್ತಲೆಯಲ್ಲಿ ಬಸ್ ನಿಲ್ದಾಣ ಸೇರುವ ಇವರು, ಅನೈತಿಕ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಇದರಿಂದಾಗಿ ಸಂಜೆ ವೇಳೆ ಇಲ್ಲಿಂದ ತೆರಳುವ ಪ್ರಯಾಣಿಕರಿಗೆ ತೀವ್ರ ಮುಜುಗರ ಉಂಟಾಗುತ್ತಿದೆ. ಈ ಬಗ್ಗೆ ಸಂಬಂಧಿತರನ್ನು ಸಂಪರ್ಕಿಸಿದರೆ, ‘ಲೈಟ್ ಹಚ್ಚಿದರೆ, ಬಿಲ್ ನೀನು ತುಂಬುತ್ತೀಯಾ? ಎಂದು ಬೇಜವಾಬ್ದಾರಿಯಿಂದ ಪ್ರಶ್ನಿಸುತ್ತಾರೆ ಎಂದು ಅಕ್ಕಪಕ್ಕದ ನಿವಾಸಿಗಳು ಆರೋಪಿಸಿದ್ದಾರೆ.

    ಹೈಟೆಕ್ ಬಸ್ ನಿಲ್ದಾಣವನ್ನು ದಂಡು ಮಂಡಳಿಗೆ ಹಸ್ತಾಂತರಿಸಿ ಒಂದು ವಾರವಾಗಿದೆ. ಅವರೇ ನಿರ್ವಹಣೆ ಮಾಡಬೇಕಿದೆ. ಪ್ರಯಾಣಿಕರಿಗೆ ತೊಂದರೆ ಆಗುತ್ತಿರುವ ಬಗ್ಗೆ ದಂಡುಮಂಡಳಿ ಅಧಿಕಾರಿಗಳ ಜತೆ ಮಾತನಾಡಿ, ಅಗತ್ಯ ಕ್ರಮ ಜರುಗಿಸಲು ತಿಳಿಸಲಾಗುವುದು.
    ಪ್ರವೀಣ ಬಾಗೇವಾಡಿ
    | ಎಂಡಿ, ಸ್ಮಾರ್ಟ್ ಸಿಟಿ, ಬೆಳಗಾವಿ

    ಸ್ಮಾರ್ಟ್ ಸಿಟಿಯವರು ಹಸ್ತಾಂತರಿಸಿದ ಬಳಿಕ ಬಸ್ ನಿಲ್ದಾಣದ ವಿದ್ಯುತ್ ವ್ಯವಸ್ಥೆಗೆ ಹೊಸ ಮೀಟರ್ ಅಳವಡಿಸುವಂತೆ ಹೆಸ್ಕಾಂಗೆ ಮನವಿ ಮಾಡಲಾಗಿದೆ. ಅವರು, ಮೀಟರ್ ಅವಳಡಿಸಿದ ಬಳಿಕ ಎಲ್ಲ ಲೈಟ್‌ಗಳನ್ನೂ ರಾತ್ರಿ ಬೆಳಗಿಸಲಾಗುವುದು. ಕಸ ನಿರ್ವಹಣೆ ಬಗ್ಗೆ ಕೂಡಲೇ ಸಂಬಂಧಿತರಿಗೆ ತಿಳಿಸಿ, ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು.
    | ಸತೀಶ ಮನ್ನೂರಕರ್ ಸಹಾಯಕ ಅಭಿಯಂತ, ದಂಡುಮಂಡಳಿ

    | ರವಿ ಗೋಸಾವಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts