More

    ನಿರ್ಮಾಣ ಹಂತದ ಸೇತುವೆ ಕುಸಿತಕ್ಕೆ ಆಕ್ರೋಶ

    ಚಾಮರಾಜನಗರ: ನಗರದ ಕರಿನಂಜನಪುರ ರಸ್ತೆಯಲ್ಲಿರುವ ಅಂಬೇಡ್ಕರ್ ಭವನದ ಸಮೀಪ ನಗರಸಭೆ ಅನುದಾನದಲ್ಲಿ ನಿರ್ಮಿಸುತ್ತಿರುವ ಸೇತುವೆ ಕುಸಿದು ಬಿದ್ದಿರುವುದನ್ನು ಖಂಡಿಸಿ ಸೇತುವೆ ಬಳಿ ಮಂಗಳವಾರ ಬಹುಜನ ಸಮಾಜ ಪಕ್ಷದ ತಾಲೂಕು ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.

    ಬಿಎಸ್ಪಿ ತಾಲೂಕು ಅಧ್ಯಕ್ಷ ಎಸ್.ಪಿ.ಮಹೇಶ್ ಮಾತನಾಡಿ, ಕರಿನಂಜನಪುರ ರಸ್ತೆಯಲ್ಲಿ ನಗರಸಭೆಯ ಅನುದಾನದಲ್ಲಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿಯು ಕಳಪೆ ಆಗಿರುವುದರಿಂದ ಕುಸಿದು ಬಿದ್ದಿದೆ. ಡಿವೈಎಸ್‌ಪಿ ಕಚೇರಿಯಿಂದ ಸತ್ತಿ ರಸ್ತೆವರೆಗೆ ರಸ್ತೆ ನಿರ್ಮಾಣಕ್ಕೆ 8 ಕೋಟಿ ರೂ.ಗಳ ಟೆಂಡರ್ ಕರೆದಿದ್ದು ಎರಡು ಕಡೆ ಸಿಸಿ ಚರಂಡಿ, ರಸ್ತೆ ನಿರ್ಮಿಸಿಲ್ಲ. ಕ್ರಿಯಾಯೋಜನೆ ಪ್ರಕಾರ ಕಾಮಗಾರಿ ಮಾಡದೆ ತಮಗಿಷ್ಟ ಬಂದಂತೆ ಕಳಪೆ ಕಾಮಗಾರಿ ನಡೆಸಿರುವುದು ಸೇತುವೆ ಕುಸಿದು ಬೀಳಲು ಕಾರಣವಾಗಿದೆ ಎಂದು ಆರೋಪಿಸಿದರು.

    ಸೇತುವೆ ಕಾಮಗಾರಿಯನ್ನು ರಾತ್ರಿ ವೇಳೆಯಲ್ಲಿ ಮಾಡುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇಷ್ಟೆಲ್ಲಾ ಕಳಪೆ ಕಾಮಗಾರಿ ನಡೆದು ಸೇತುವೆ ಕುಸಿದು ಬಿದ್ದಿದ್ದರೂ ನಗರಸಭೆ, ಲೋಕೋಪಯೋಗಿ ಇಲಾಖೆಗಳ ಅಧಿಕಾರಿಗಳು ಯಾವುದೇ ಕ್ರಮವಹಿಸದೆ ನಿರ್ಲಕ್ಷೃ ಮಾಡಿದ್ದಾರೆ ಎಂದು ದೂರಿದರು.

    ಇದಕ್ಕೆ ಕಾರಣರಾದ ಅಧಿಕಾರಿಗಳು ಹಾಗೂ ಇಂಜಿನಿಯರ್‌ಅನ್ನು ಕೂಡಲೇ ಅಮಾನತು ಮಾಡಬೇಕು. ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಕಳಪೆ ಕಾಮಗಾರಿ ಸಂಬಂಧ ಲೋಕಾಯುಕ್ತ ಮತ್ತು ಗುಣಮಟ್ಟ ನಿಯಂತ್ರಣ ಪ್ರಾಧಿಕಾರಕ್ಕೆ ದೂರು ನೀಡುವುದಾಗಿ ತಿಳಿಸಿದರು.

    ಪ್ರತಿಭಟನೆಯಲ್ಲಿ ಬಿಎಸ್ಪಿ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ದೊಡ್ಡರಾಯಪೇಟೆ ಸಿದ್ದರಾಜು, ಮುಖಂಡರಾದ ಕೂಡ್ಲೂರು ಮಹೇಶ್, ದೇವಲಾಪುರ ಶಿವಣ್ಣ, ರಂಗಸ್ವಾಮಿ, ಬೈರಲಿಂಗಸ್ವಾಮಿ, ಇರ್ಷಾದ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts