More

    ನಿರ್ಮಾಣ ಕಾಮಗಾರಿಗಳಿಗೆ ಸಮಸ್ಯೆ

    ಕಾರವಾರ: ಲಾಕ್​ಡೌನ್ ಜಿಲ್ಲೆಯ ನಿರ್ಮಾಣ ಕಾಮಗಾರಿಗಳಿಗೆ ಸಮಸ್ಯೆ ಉಂಟುಮಾಡಿದೆ. ಮಳೆಗಾಲ ಬರುವುದರೊಳಗೆ ಹೊಸ ಮನೆ ಕಟ್ಟಿ ಮುಗಿಸಿ ಪ್ರವೇಶ ಸಮಾರಂಭ ಮಾಡಬೇಕು. ಮನೆಗಳ ರಿಪೇರಿ ಕಾರ್ಯ ಮುಗಿಸಬೇಕು ಎಂದಿದ್ದ ಹಲವರು ಈಗ ಆತಂಕದಲ್ಲಿದ್ದಾರೆ.

    ಲಾಕ್​ಡೌನ್ ನಿಯಮಾವಳಿಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಸರ್ಕಾರ ಅವಕಾಶ ನೀಡಿದೆ. ನಿರ್ಮಾಣ ಸಾಮಗ್ರಿಗಳ ಅಂಗಡಿಗಳನ್ನು ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಸೇರಿಸಿ ಅವುಗಳನ್ನು ಬೆಳಗ್ಗೆ ತೆರೆಯಲು ಅವಕಾಶ ಮಾಡಿಕೊಟ್ಟಿದೆ. ಆದರೆ, ಓಡಾಟಕ್ಕೆ ಅವಕಾಶವಿಲ್ಲದ ಕಾರಣ ಕಾಮಗಾರಿಗಳು ನಿಂತಿವೆ.

    ಸರ್ಕಾರಿ ಕಾಮಗಾರಿಗಳನ್ನು ಮಾಡಿಸುವವ ಗುತ್ತಿಗೆದಾರರಿಗೆ, ಕಾರ್ವಿುಕರಿಗೆ ಸಂಬಂಧಪಟ್ಟ ಇಲಾಖೆಗಳಿಂದ ಪಾಸ್ ನೀಡಿ, ಓಡಾಟಕ್ಕೆ, ಸಾಮಗ್ರಿಗಳನ್ನು ಸಾಗಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಆದರೆ, ಖಾಸಗಿ ಕಾಮಗಾರಿಗಳಿಗೆ ತೊಂದರೆ ಉಂಟಾಗಿದೆ. ಕಾರ್ವಿುಕರಿಗೆ ಒಂದೆಡೆಯಿಂದ ಇನ್ನೊಂದೆಡೆ ಓಡಾಡಲು ಪೊಲೀಸರು ಅವಕಾಶ ನೀಡುತ್ತಿಲ್ಲ. ಗ್ರಾಮೀಣ ಪ್ರದೇಶಗಳಿಂದ ವಾಹನವಿಲ್ಲದೆ ನಡೆದು ಬರಲು ಸಾಧ್ಯವೇ ಇಲ್ಲ.

    ಸಾಮಗ್ರಿ ಕೊರತೆ: ಬೆಳಗ್ಗೆ 6 ರಿಂದ 10 ರವರೆಗೆ ಮಾತ್ರ ಅಂಗಡಿ ತೆರೆದಿರಲು ಅವಕಾಶ ಇರುವುದರಿಂದ ಸೀಮಿತ ಅವಧಿಯಲ್ಲಿ ಎಷ್ಟು ವ್ಯಾಪಾರವಾದೀತು ಎಂದು ಪೈಪ್, ಟೈಲ್ಸ್, ಕಬ್ಬಿಣ, ಪೇಂಟ್, ಮುಂತಾದ ಅಂಗಡಿಗಳ ಮಾಲೀಕರು ಬಾಗಿಲು ತೆರೆಯುತ್ತಲೇ ಇಲ್ಲ. ಕೆಲ ಅಂಗಡಿಗಳು ತೆರೆದರೂ ಅವುಗಳನ್ನು ಸಾಗಿಸಲು ವಾಹನ ಚಾಲಕರು ಪೊಲೀಸರು ಹಾಗೂ ಕರೊನಾ ಭಯದಲ್ಲಿ ಒಪ್ಪುತ್ತಿಲ್ಲ. ಎಲ್ಲಿ ಪೊಲೀಸರು ತಮ್ಮ ವಾಹನ ಸೀಜ್ ಮಾಡುತ್ತಾರೋ ಎಂದು ಭಯಪಡುತ್ತಿದ್ದಾರೆ. ಜಲ್ಲಿ, ಕಲ್ಲು, ಮರಳು ಮುಂತಾದ ಕಚ್ಚಾ ಸಾಮಗ್ರಿಗಳ ಕೊರತೆಯೂ ಕೆಲವೆಡೆ ಆಗುತ್ತಿದೆ.

    ನಿಯಮಾವಳಿಯಲ್ಲಿ ಗೊಂದಲ: ನಿರ್ಮಾಣ ಕಾಮಗಾರಿಗಳಿಗೆ ಅವಕಾಶವಿದೆ ಎಂದು ಸರ್ಕಾರ ಮೊದಲ ಹಂತದ ಜನತಾ ಕರ್ಫ್ಯೂ ಅವಧಿಯಲ್ಲಿ ಹೇಳಿತ್ತು. ಕಾರ್ವಿುಕರು ತಾವಿರುವಲ್ಲಿಯೇ ಕೆಲಸ ಮಾಡಬೇಕು ಎಂದು ಈಗ ಜಾರಿಯಲ್ಲಿರುವ ಲಾಕ್​ಡೌನ್ ನಿಯಮಾವಳಿಯಲ್ಲಿ ಹೇಳಲಾಗಿದೆ. ಇನ್ನೊಂದೆಡೆ ವಾಹನದಲ್ಲಿ ತೆರಳಿ ಅಗತ್ಯ ಸಾಮಗ್ರಿಗಳಿಗಾಗಿ ಓಡಾಟಕ್ಕೂ ಅವಕಾಶವಿಲ್ಲ ಎನ್ನಲಾಗಿದೆ. ಒಟ್ಟಾರೆ ಮಾರ್ಗಸೂಚಿಯಲ್ಲಿರುವ ಗೊಂದಲದಿಂದ ಅಧಿಕಾರಿಗಳೂ ಏನು ಮಾಡಬೇಕು ಎಂದು ತಿಳಿಯದೇ ತಮ್ಮ ವಿವೇಚನೆಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ.

    ಕಟ್ಟಡ ಕಾಮಗಾರಿಗಳಿಗೆ ಲಾಕ್​ಡೌನ್ ನಿಯಮದಲ್ಲಿ ಅವಕಾಶ ನೀಡಲಾಗಿದೆ. ಆದರೆ, ಕೆಲವೆಡೆ ನಡೆದುಕೊಂಡು ಬರುವ ಕಾರ್ವಿುಕರನ್ನೂ ಪೊಲೀಸರು ತಡೆಯುತ್ತಿರುವ ಬಗ್ಗೆ ಕಾರ್ವಿುಕರು ಕರೆ ಮಾಡಿ ತಿಳಿಸಿದ್ದಾರೆ. ಈ ಕುರಿತು ನಾನು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಕಾರ್ವಿುಕ ಇಲಾಖೆಯಿಂದ ಕಟ್ಟಡ ಕಾರ್ವಿುಕರಿಗೆ ಪಾಸ್ ನೀಡಿದ್ದು, ಅದನ್ನು ತೋರಿಸಿ ನಡೆದುಕೊಂಡು ಸಾಗಬಹುದಾಗಿದೆ.
    ಅಕ್ಬರ್ ಮುಲ್ಲಾ ಜಿಲ್ಲಾ ಕಾರ್ವಿುಕ ಅಧಿಕಾರಿ, ಕಾರವಾರ

    ದಾಂಡೇಲಿಯಲ್ಲಿ ಕಟ್ಟಡ ಸಾಮಗ್ರಿ ಕೊರತೆ:
    ದಾಂಡೇಲಿ:
    ನಗರದಲ್ಲಿ ಕಟ್ಟಡ ನಿರ್ವಣಕ್ಕೆ ಅವಶ್ಯವಿರುವ ಕಚ್ಚಾ ಸಾಮಗ್ರಿಗಳು ದೊರಕದೆ ಕಾಮಗಾರಿಗಳು ಸ್ಥಗಿತವಾಗಿದ್ದು, ಗುತ್ತಿಗೆದಾರರು, ಕಟ್ಟಡ ಕಾರ್ವಿುಕರು ಸಂಕಷ್ಟದಲ್ಲಿದ್ದಾರೆ. ನಗರಕ್ಕೆ ರಾಮನಗರ ಕ್ರಶರ್​ಗಳಿಂದ ಕಡಿ, ಎಂ.ಸ್ಯಾಂಡ್ ದೊರಕುತ್ತಿತ್ತು . ಆದರೆ, ಶಿವಮೊಗ್ಗ ಕ್ವಾರಿ ಸ್ಫೋಟ ಪ್ರಕರಣದ ಬಳಿಕ ಬಂದಾದ ಕ್ವಾರಿಗಳು, ಕ್ರಶರ್​ಗಳು ಇನ್ನೂ ತೆರೆದಿಲ್ಲ. ಕಾಳಿ ನದಿಯಲ್ಲಿ ಉಸುಕು ತೆಗೆಯಲು ಪರವಾನಗಿ ಇಲ್ಲ. ಕರಾವಳಿಯಿಂದ ಇಲ್ಲವೇ ಪಕ್ಕದ ಜಿಲ್ಲೆಗಳಿಂದ ಉಸುಕು ತರಬೇಕಿದೆ. ದಾಂಡೇಲಿ ನಗರದಲ್ಲಿ 7000 ನೋಂದಾಯಿತ ಕಟ್ಟಡ ಕಾರ್ವಿುಕರಿದ್ದು, 1 ಸಾವಿರದಷ್ಟು ನೋಂದಣಿಯಾಗದ ಕಾರ್ವಿುಕರಿದ್ದಾರೆ. ದಿನದ ಊಟಕ್ಕಾಗಿ ದುಡಿಯುವ ಕಾರ್ವಿುಕರು ಇದರಿಂದ ಸಂಕಷ್ಟಕ್ಕೆ ಈಡಾಗಿದ್ದಾರೆ. ಕೆಲಸಕ್ಕೆ ಬರುವ ಇಚ್ಛೆಯಿದ್ದರೂ ಬರಲು ಹಲವು ಸಮಸ್ಯೆಗಳಿಂದ ಕಾಮಗಾರಿಗಳು ನಡೆಯದೇ ತೊಂದರೆಪಡುತ್ತಿದ್ದಾರೆ. ನಗರದಲ್ಲಿ ಸರ್ಕಾರಿ, ಖಾಸಗಿ ಕಟ್ಟಡಗಳ ನಿರ್ಮಾಣ ಹಾಗೂ ಉದ್ಘಾಟನೆ ಇದೇ ಕಾರಣಕ್ಕೆ ಮುಂದೂಡಲ್ಪಟ್ಟಿದೆ.

    ಕಟ್ಟಡ ಕಾರ್ವಿುಕರಿಗೆ ಶಹರಗಳಿಗೆ ಬರಲು ಪಾಸ್ ವ್ಯವಸ್ಥೆ ಮಾಡಿ, ಸಾಮಗ್ರಿಗಳ ಸಾಗಾಟಕ್ಕೆ ಅವಕಾಶ ಮಾಡಿಕೊಡಬೇಕು. ಅವರ ಅವಶ್ಯಕತೆ ಪರಿಗಣಿಸಿ ಓಡಾಟಕ್ಕೆ ಪಾಸ್ ನೀಡಿ ಹೊಟ್ಟಪಾಡಿಗಾಗಿ ದುಡಿಯುವ ಅವರ ದುಡಿಮೆಗೆ ಅನೂಕೂಲ ಮಾಡಿ ಕೊಡಬೇಕಾಗಿದೆ.
    ರಾಜೇಸಾಬ್ ಕೇಸನೂರ ಅಧ್ಯಕ್ಷರು, ಕಟ್ಟಡ ಕಾರ್ವಿುಕರ ಸಂಘ,ದಾಂಡೇಲಿ

    ಜಿಲ್ಲೆಯಲ್ಲಿ ಮಾರ್ಚ್​ನಿಂದ ಮೇ ತಿಂಗಳವರೆಗೆ ಕಟ್ಟಡ ನಿರ್ಮಾಣ ಕಾಮಗಾರಿಗಳು ನಡೆಸಲು ಅವಕಾಶವಿದೆ. ಇಂಥ ಸಮಯದಲ್ಲೇ ಸರಿಯಾಗಿ ಮರಳು, ಜಲ್ಲಿ ಮುಂತಾದ ಕಚ್ಚಾ ಸಾಮಗ್ರಿಗಳು ದೊರೆಯದೇ ಇದ್ದರೆ ನಿಗದಿತ ವೇಳೆಯಲ್ಲಿ ಕಾಮಗಾರಿ ಮುಗಿಸಲು ಸಾಧ್ಯವಾಗದು. ದುಡಿಯುವ ಕಾರ್ವಿುಕರ ಪರಿಸ್ಥಿತಿಯೂ ಹದಗೆಡುತ್ತದೆ.
    ಸುಧಾಕರ ರೆಡ್ಡಿ ಸಂಘಟನಾ ಕಾರ್ಯದರ್ಶಿ ಉತ್ತರ ಕನ್ನಡ ಜಿಲ್ಲಾ ಗುತ್ತಿಗೆದಾರರ ಸಂಘ

    ಸಾಮಗ್ರಿ ದೊರಕದೇ ಲಾಕ್​ಡೌನ್ ಸಮಸ್ಯೆಯಿಂದ ಹಲವು ಮನೆಗಳ ನಿರ್ಮಾಣ ಕಾರ್ಯ ಮುಂದೂಡಲ್ಪಟ್ಟಿದೆ. ಕಟ್ಟಡ ನಿರ್ವಣಕ್ಕೆ ಅನುಕೂಲವಾಗುವ ರೀತಿಯಲ್ಲಿ ನಿಬಂಧನೆಗಳನ್ನು ಸಡಿಲಿಸಬೇಕಿದೆ. ಕಾಮಗಾರಿಗಳಿಗೆ ಅವಶ್ಯಕ ವಸ್ತುಗಳ ಪೂರೈಕೆಗೆ ಕ್ರಮ ವಹಿಸಬೇಕಿದೆ.
    ಮಹೇಶ ಸಾವಂತ ಗುತ್ತಗೆದಾರ, ದಾಂಡೇಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts