More

    ನಿರ್ಗತಿಕ ಮಕ್ಕಳಿಗೆ ಪುನರ್ವಸತಿ ಒದಗಿಸಿ

    ಬೆಳಗಾವಿ: ಪೋಕ್ಸೋ ಪ್ರಕರಣಗಳಲ್ಲಿ 60 ದಿನಗಳ ಒಳಗಾಗಿ ದೋಷಾರೋಪ ಪಟ್ಟಿ ಸಲ್ಲಿಸಬೇಕಾಗುತ್ತದೆ. ಇಂತಹ ಪ್ರಕರಣಗಳಲ್ಲಿ ವಿಳಂಬವಾಗದಂತೆ ಕ್ರಮ ವಹಿಸಬೇಕು. ಜಿಲ್ಲೆಯಲ್ಲಿ ಭಿಕ್ಷುಕ, ನಿರ್ಗತಿಕ, ಅನಾಥ ಮಕ್ಕಳ ರಕ್ಷಣೆ ಮತ್ತು ಪುನರ್ವಸತಿಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಜಿಲ್ಲಾ ಮಕ್ಕಳ ಕಲ್ಯಾಣ ಮತ್ತು ರಕ್ಷಣಾ ಸಮಿತಿ ಸಭೆ ಹಾಗೂ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು. ಪೋಕ್ಸೋ ಅಥವಾ ಬಾಲ್ಯವಿವಾಹಕ್ಕೆ ಸಂಬಂಧಿಸಿದಂತೆ ನಿಗದಿತ ಅವಧಿಯಲ್ಲಿ ಪ್ರಕರಣ ದಾಖಲಿಸಲು ವಿಳಂಬವಾದರೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ವತಿಯಿಂದ ಸಮನ್ಸ್ ನೀಡಿ ಸೂಕ್ತ ಸಮಜಾಯಿಷಿ ಪಡೆದುಕೊಳ್ಳಬೇಕು.

    ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳನ್ನು ಗುರುತಿಸಿ ನಿಯಮಾನುಸಾರ ಪುನರ್ವಸತಿ ಕಲ್ಪಿಸಿದಾಗಲೂ ಪದೇ ಪದೆ ಅದೇ ಕೆಲಸದಲ್ಲಿ ತೊಡಗಿದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದರು. ಜಿಲ್ಲೆಯಲ್ಲಿ ಒಟ್ಟು 39 ಮಕ್ಕಳ ಪಾಲನಾ ಸಂಸ್ಥೆಗಳಿದ್ದು, ಅವುಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಅಗತ್ಯವಿರುವ ಮಕ್ಕಳಿಗೆ ಸೌಲಭ್ಯಗಳನ್ನು ಒದಗಿಸಬೇಕಿದೆ.

    ಅನಾಥ ಮಕ್ಕಳು, ಏಕ ಪಾಲಕರನ್ನು ಹೊಂದಿರುವ ಮಕ್ಕಳಿಗೆ ಈ ಸಂಸ್ಥೆಗಳಲ್ಲಿ ಸೇರಿಸಿ ಸರ್ಕಾರದಿಂದ ಉತ್ತಮ ಸೌಲಭ್ಯಗಳನ್ನು ಒದಗಿಸಬಹುದು. ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ ತಾತ್ಕಾಲಿಕವಾಗಿ ಸೌಲಭ್ಯ ಕಲ್ಪಿಸಬೇಕು ಎಂದರು. ಮಕ್ಕಳ ಪಾಲಕರು ಜೈಲಿನಲ್ಲಿದ್ದರೆ, ಅನಾಥ ಮಕ್ಕಳು, ಏಕಪಾಲಕ ಮಕ್ಕಳಿಗೆ ಮಿಷನ್ ವಾತ್ಸಲ್ಯ ಯೋಜನೆಯಡಿ 2022-23 ಸಾಲಿನಿಂದ ಆದ್ಯತೆ ಮೇರೆಗೆ ಮಾಸಿಕ 4 ಸಾವಿರ ರೂ. ನಂತೆ ಮಕ್ಕಳ ಬ್ಯಾಂಕ್ ಖಾತೆಗೆ ಪ್ರೋತ್ಸಾಹ ಧನ ಜಮೆ ಮಾಡಲಾಗುತ್ತಿದೆ.

    3 ವರ್ಷಗಳವರೆಗೆ ಈ ಸೌಲಭ್ಯ ನೀಡಲಾಗುತ್ತಿದ್ದು, ಈ ಯೋಜನೆಯಡಿ 301 ಫಲಾನುಭವಿಗಳಿಗೆ ಸೌಲಭ್ಯ ನೀಡಲಾಗುತ್ತಿದೆ ಎಂದರು.
    ಬಾಲ್ಯವಿವಾಹ ತಡೆಗೆ ಶ್ರಮಿಸಿ: ಬಾಲ್ಯವಿವಾಹ ತಡೆಗಟ್ಟಲು ಅನುಕೂಲವಾಗುವಂತೆ ಮಕ್ಕಳ ರಕ್ಷಣಾಧಿಕಾರಿಗಳನ್ನಾಗಿ ಸರ್ಕಾರವು ಅಧಿಕಾರಿಗಳನ್ನು ನೇಮಿಸಲಾಗಿದೆ. ಆದರೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಮಾತ್ರ ಇದಕ್ಕೆ ಸೀಮಿತಗೊಳಿಸದೆ ಇತರ ಅಧಿಕಾರಿಗಳು ಕೂಡ ತಮ್ಮ ಜವಾಬ್ದಾರಿ ನಿರ್ವಹಿಸಬೇಕು ಎಂದರು.

    ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮುರಳಿಮೋಹನ ರೆಡ್ಡಿ, ಉಪ ಪೊಲೀಸ್ ಆಯುಕ್ತೆ ಸ್ನೇಹಾ, ವೇಣುಗೋಪಾಲ್, ಶುಭಂ ಶುಕ್ಲಾ, ಆರ್. ನಾಗರಾಜ, ಮಹಾಂತೇಶ ಭಜಂತ್ರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts