More

    ನಿರಾಶ್ರಿತ ಕುಟುಂಬಕ್ಕೆ ಬೆಳಕಾದ ಜಿಲ್ಲಾಡಳಿತ, ಬಸ್ ತಂಗುದಾಣದಲ್ಲೇ ವಾಸಿಸುತ್ತಿದ್ದವರಿಗೆ ಸೂರು

    ಚಿಂತಾಮಣಿ: ಕಳೆದೊಂದು ವರ್ಷದಿಂದ ಬಸ್ ನಿಲ್ದಾಣವನ್ನೇ ಆಶ್ರಯವನ್ನಾಗಿಸಿಕೊಂಡು ಮೂವರು ಹೆಣ್ಣುಮಕ್ಕಳೊಂದಿಗೆ ಬದುಕು ಸಾಗಿಸುತ್ತಿದ್ದ ಮಹಿಳೆಯ ಬದುಕಿಗೆ ಜಿಲ್ಲಾಡಳಿತ ಬೆಳಕಾಗಿದೆ. ಕುಟುಂಬದ ನೋವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಆರ್.ಲತಾ ಕುಟುಂಬಕ್ಕೆ ಸೂರು ಕಲ್ಪಿಸಲು ಮುಂದಾಗಿದ್ದಾರೆ.

    ಮಿಂಡಿಗಲ್ ಗ್ರಾಪಂ ವ್ಯಾಪ್ತಿಯ ನಲ್ಲರಾಳ್ಳಹಳ್ಳಿಯವರೇ ಆದ ಮಂಜುಳಾಗೆ ಗ್ರಾಮದಲ್ಲಿ ಒಂದಷ್ಟು ಜಾಗವಿತ್ತು, ಕೂಲಿ ಕೆಲಸ ಮಾಡಿಕೊಂಡಿದ್ದರು. ಆದರೆ ಅವರ ಜಾಗವನ್ನು ಪ್ರಭಾವಿಗಳು ಕಬಳಿಸಿಕೊಂಡು ಅಲ್ಲಿಂದ ಇವರೆಲ್ಲರನ್ನೂ ಹೊರಹಾಕಿದ್ದರು. ಬಳಿಕ ಮಹಿಳೆ ಮೂವರು ಹೆಣ್ಣು ಮಕ್ಕಳೊಂದಿಗೆ ನಲ್ಲರಾಳ್ಳಹಳ್ಳಿ ಕ್ರಾಸ್‌ನ ಬಸ್ ನಿಲ್ದಾಣದಲ್ಲಿ ಆಶ್ರಯ ಪಡೆದಿದ್ದರು.

    ಮಾಹಿತಿ ತಿಳಿದ ಜಿಲ್ಲಾಧಿಕಾರಿ ಆರ್.ಲತಾ, ಶುಕ್ರವಾರ ನಿರಾಶ್ರಿತ ಕುಟುಂಬವನ್ನು ಚಿಂತಾಮಣಿಯ ಪ್ರವಾಸಿ ಮಂದಿರಕ್ಕೆ ಕರೆಸಿಕೊಂಡು ಸಮಸ್ಯೆ ಆಲಿಸಿದರು. ನಿವೇಶನ ನೀಡುವ ಜತೆಗೆ ವಸತಿ ಯೋಜನೆಯಲ್ಲಿ ಮನೆ ನಿರ್ಮಿಸುವುದು ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸರ್ಕಾರದ ಅಗತ್ಯ ನೆರವು ದೊರಕಿಸಿಕೊಡುವ ಭರವಸೆ ನೀಡಿದರು.

    ಸದ್ಯ ವಾಸಿಸಲು ಬಾಡಿಗೆ ಮನೆಯ ವ್ಯವಸ್ಥೆ ಮಾಡಲಾಗಿದ್ದು, ಎಲ್ಲ ಸೌಲಭ್ಯಗಳನ್ನು ಕುಟುಂಬಕ್ಕೆ ಒದಗಿಸುವ ಹೊಣೆಯನ್ನು ಸ್ಥಳೀಯ ಹಾಗೂ ತಾಲೂಕುಮಟ್ಟದ ಅಧಿಕಾರಿಗಳಿಗೆ ಹೆಗಲಿಗೆ ಹೊರಿಸಿದರು. ನಗರಸಭೆ ಪ್ರಭಾರ ಪೌರಾಯುಕ್ತ ಹನುಮಂತರಾಯಪ್ಪ, ಮಿಂಡಿಗಲ್ ಗ್ರಾಪಂ ಪಿಡಿಒ ಕೆ.ಸಿ.ರೇಣಿಕಾ ಇದ್ದರು.

    ಜಿಪಂ ಸಭೆಯಲ್ಲಿ ಚರ್ಚೆ: ನಿರಾಶ್ರಿತ ಕುಟುಂಬದ ಸಮಸ್ಯೆಯನ್ನು ವಾರದ ಹಿಂದೆ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿದ್ದ ಸದಸ್ಯರು, ಸೂರು ಕಲ್ಪಿಸುವಂತೆ ಗಮನ ಸೆಳೆದಿದ್ದರು. ನಿರಾಶ್ರಿತ ಕುಟುಂಬಕ್ಕೆ ಆಶ್ರಯ ಕಲ್ಪಿಸುವುದಾಗಿ ಸ್ವತಃ ಜಿಲ್ಲಾಧಿಕಾರಿ, ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಭರವಸೆ ನೀಡಿದ್ದರು.

    ನಮ್ಮ ತಾಯಿ ಕೂಲಿಗೆ ಹೋಗಿ ಬಸ್ ತಂಗುದಾಣದಲ್ಲಿ ನಮ್ಮನ್ನು ಸಾಕುತ್ತಿದ್ದರು. ನಮ್ಮ ಕಷ್ಟ ತಿಳಿದ ಜಿಲ್ಲಾಧಿಕಾರಿ ಬಾಡಿಗೆ ಮನೆ ಒದಗಿಸುವುದರ ಜತೆಗೆ ನಾವು ಶಾಲೆಗೆ ಹೋಗಲು ವ್ಯವಸ್ಥೆ ಮಾಡುವುದಾಗಿ ಹಾಗೂ ಮನೆ ಕಟ್ಟಿಸಿಕೊಡುವುದಾಗಿ ಹೇಳಿದ್ದರಿಂದ ತುಂಬಾ ಖುಷಿಯಾಗಿದೆ.
    ದಿವ್ಯಾ, ನಿರಾಶ್ರಿತ ಕುಟುಂಬದ ಮಗಳು

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts