More

    ನಿರಾಶ್ರಿತಳಿಗೆ ಮನೆಯಲ್ಲಿ ಆತಿಥ್ಯ ನೀಡಿದ ಮಹಿಳೆ

    ರೋಣ: ಕೌಟುಂಬಿಕ ಕಲಹ, ಇತರೆ ಕಾರಣಗಳಿಂದ ಊರಿಂದ ಊರಿಗೆ ಬಂದು ಬೀದಿ ಬೀದಿಗಳಲ್ಲಿ ಅನಾತರಂತೆ ನರಕಯಾತನೆ ಅನುಭವಿಸುವವರನ್ನು ಕಂಡು ಮರುಗಿ ಒಂದೆರೆಡು ರೂ. ಹಾಕಿ ಮುಂದೆ ಹೋಗುವವರೇ ಹೆಚ್ಚು. ಆದರೆ, ಇಲ್ಲೊಬ್ಬ ಮಹಿಳೆ ದೇವಸ್ಥಾನವೊಂದರಲ್ಲಿ ಅನಾತಳಂತೆ ಹೀನಾಯವಾಗಿ ದಿನ ಕಳೆಯುತ್ತಿದ್ದ ಮಹಿಳೆಗೆ ತನ್ನ ಮನೆಯಲ್ಲಿ ಆಶ್ರಯ ನೀಡಿ, ಆಹಾರ, ಬಟ್ಟೆ, ಒದಗಿಸಿ ಮಾನವೀಯತೆ ಮೆರೆದಿದ್ದಾರೆ.

    ಮೂಲತಃ ಹೊಸಪೇಟೆಯವರಾದ 45-50 ವರ್ಷದ ಮಹಿಳೆ ಪಟ್ಟಣದ ಮಂಜುನಾಥ ದೇವಸ್ಥಾನದಲ್ಲಿ ಎರಡ್ಮೂರು ದಿನದಿಂದ ನರಕಯಾತನೆ ಅನುಭವಿಸುತ್ತಿದ್ದುದನ್ನು ಕಂಡ ಲೀಲಾದೇವಿ ಚಿತ್ರಗಾರ ನಿರಾಶ್ರಿತಳಿಗೆ ಆಶ್ರಯ ನೀಡಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

    ನಿರಾಶ್ರಿತ ಮಹಿಳೆ ತನ್ನ ಹೆಸರು ಮುದ್ದಮ್ಮಾ ಎನ್ನುತ್ತಾಳೆ. ತನಗೆ ಲಕ್ಷ್ಮೀ, ಸುಪ್ರೀತ, ಅಕ್ಷಯ ಎಂಬ ಮೂವರು ಮಕ್ಕಳಿದ್ದು, ಗಂಡ ನಿತ್ಯ ಕುಡಿದು ಬಂದು ನಮಗೆ ಹಿಂಸೆ ನೀಡುತ್ತಿದ್ದ. ಇದನ್ನು ಪ್ರಶ್ನಿಸಿದ್ದಕ್ಕೆ ಮಕ್ಕಳನ್ನು ಕಸಿದುಕೊಂಡು ನನ್ನನ್ನು ಮನೆಯಿಂದ ಹೊರ ಹಾಕಿದ್ದಾನೆ ಎಂದು ಕಣ್ಣಿರು ಹಾಕುತ್ತಾಳೆ ಮುದ್ದಮ್ಮಾ.

    ಈ ನಿರಾಶ್ರಿತೆ ಕುರಿತು ಸಾರ್ವಜನಿಕರು ಪಟ್ಟಣದ ಮಹಿಳಾ ಸಾಂತ್ವನ ಕೇಂದ್ರಕ್ಕೆ ತಿಳಿಸಿದಾಗ ಸಾಂತ್ವನ ಕೇಂದ್ರದ ಮೇಲ್ವಿಚಾರಕಿ ವಿಜಯಲಕ್ಷ್ಮೀ ಎಸ್.ಕೆ. ಆಗಮಿಸಿ ಈ ಬಗ್ಗೆ ಪಟ್ಟಣದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ತಿಳಿಸಿದ್ದಾರೆ. ಆದರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ಇದು ತಮಗೆ ಸಂಬಂಧ ಇಲ್ಲವೆಂಬಂತೆ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ. ಅಧಿಕಾರಿಗಳಿಂದ ಸ್ಪಂದನೆ ದೊರೆಯದ ಕಾರಣ ಲೀಲಾದೇವಿ ಚಿತ್ರಗಾರ ಆಕೆಗೆ ಆಶ್ರಯ, ಆಹಾರ ನೀಡಿ ಮಾನವೀಯತೆ ಮೆರೆದಿದ್ದಾರೆ.

    ‘ಆಕೆಯ ಹೀನಾಯ ಸ್ಥಿತಿ ನೋಡಲಾಗದೆ ನಾನು ಆ ಮಹಿಳೆಯನ್ನು ಕರೆತಂದು ನಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದೇನೆ. ಅವರ ಸಂಬಂಧಿಕರು ಬಂದು ಕರೆದುಕೊಂಡು ಹೋಗುವವರೆಗೂ ನಾನು ಅವಳನ್ನು ಜೋಪಾನ ಮಾಡುತ್ತೇನೆ’ ಎನ್ನುತ್ತಾರೆ ಲೀಲಾದೇವಿ ಚಿತ್ರಗಾರ.

    ಬೇಜವಾಬ್ದಾರಿ ಹೇಳಿಕೆ: ಈ ಕುರಿತು ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ನಾಗನಗೌಡ ಪಾಟೀಲ ಅವರನ್ನು ಸಂರ್ಪಸಿದರೆ, ‘ಇಲ್ಲ ನನಗೆ ಈ ಬಗ್ಗೆ ಏನೂ ಗೊತ್ತಿಲ್ಲ’ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿ ಜಾರಿಕೊಂಡರು. ಕೊನೇ ಪಕ್ಷ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ಆ ನಿರಾಶ್ರಿತ ಮಹಿಳೆಗೆ ಆಶ್ರಯ ಒದಗಿಸುವ ಅಥವಾ ಆಕೆಯ ಸಂಬಂಧಿಕರ ಬಳಿ ಸೇರಿಸುವ ಪ್ರಯತ್ನವನ್ನಾದರೂ ಅಧಿಕಾರಿ ಮಾಡಬೇಕಿತ್ತು. ಇಂತಹ ನಿರಾಶ್ರಿತ, ನೊಂದ ಮಹಿಳೆಯರಿಗೆ ಸಾಂತ್ವನ ನೀಡಿ, ಆಸರೆಯಾಗಲೆಂದೇ ರೂಪಿತವಾದ ಇಲಾಖೆಗಳ ಅಧಿಕಾರಿಗಳು ಮಾಡುವುದಾದರೂ ಏನು? ಸಾರ್ವಜನಿಕರು ಮಾಹಿತಿ ಕೊಟ್ಟರೂ ಸಂಬಂಧವಿಲ್ಲದಂತೆ ಜಾರಿಕೊಳ್ಳುವ ಅಧಿಕಾರಿಗಳ ವಿರುದ್ಧ ಮೇಲಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರಜ್ಞಾವಂತರು ಒತ್ತಾಯಿಸಿದ್ದಾರೆ.

    ಸಾರ್ವಜನಿಕರು ನಮ್ಮ ಮಹಿಳಾ ಸಾಂತ್ವನ ಕೇಂದ್ರಕ್ಕೆ ಮಾಹಿತಿ ನೀಡಿದಾಗ ನಾನು ಈ ಬಗ್ಗೆ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಲಿಲ್ಲ. ಆಗ, ಪಟ್ಟಣದ ಲೀಲಾ ಚಿತ್ರಗಾರ ಅವರು ಮಹಿಳೆಗೆ ಆಶ್ರಯ ನೀಡಿದ್ದಾರೆ.

    | ವಿಜಯಲಕ್ಷ್ಮೀ ಎಸ್.ಕೆ.

    ಮಹಿಳಾ ಸಾಂತ್ವನ ಕೇಂದ್ರದ ವ್ಯವಸ್ಥಾಪಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts