More

    ನಿರಾಶ್ರಿತರಿಗೆ ಉದ್ಯೋಗ ನೀಡಿ


    ಕಾರವಾರ: ಸೀಬರ್ಡ್ ನೌಕಾ ಯೋಜನೆ ಎರಡನೇ ಹಂತದ ಕಾಮಗಾರಿಗಳಲ್ಲಿ ನಿರಾಶ್ರಿತ ಕುಟುಂಬದವರಿಗೆ ಉದ್ಯೋಗ ನೀಡುವಂತೆ ಆಗ್ರಹಿಸಿ ಬೇಲೆಕೇರಿ ನಿರಾಶ್ರಿತರ ಕಾಲನಿಯ ಮಹಾ ಗಣಪತಿ ಸೀಬರ್ಡ್ ನಿರಾಶ್ರಿತರ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿಯ ಎದುರು ಬುಧವಾರ ಮೌನ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

    ಬಾವಿಕೇರಿ, ಬಡಗೇರಿ, ನೆಲ್ಲೂರು, ಕಂಚಿನಬೈಲ್, ಬೆರಡೆ, ಹಟ್ಟಿಕೇರಿ, ಬೇಲೆಕೇರಿ ಗ್ರಾಮಗಳಲ್ಲಿ ತಲೆ, ತಲಾಂತರಗಳಿಂದ ಕೃಷಿ ಮಾಡಿಕೊಂಡು ವಾಸಿಸುತ್ತ ಬಂದ ಹಾಲಕ್ಕಿ ಒಕ್ಕಲಿಗ ಸಮುದಾಯವರ ಜಮೀನುಗಳನ್ನು ಸೀಬರ್ಡ್ ನೌಕಾ ಯೋಜನೆಗಾಗಿ 1985 ರ ಹೊತ್ತಿಗೆ ಕಡಿಮೆ ಪರಿಹಾರ ಹಣ ನೀಡಿ ವಶಕ್ಕೆ ಪಡೆಯಲಾಯಿತು. ಹೆಚ್ಚುವರಿ ಪರಿಹಾರ ಪಡೆಯಲು ಕಾನೂನು ಹೋರಾಟ ಮಾಡಿ ಸೋತಿದ್ದೇವೆ.

    ಬೇಲೆಕೇರಿಯಲ್ಲಿ ನಿರಾಶ್ರಿತರ ಕಾಲನಿ ನಿರ್ಮಾಣ ಮಾಡಿಕೊಡಲಾಗಿದೆ. ಆದರೆ, ಅಲ್ಲಿ ನೀರಿನ ಸೌಲಭ್ಯವಿಲ್ಲ. ಕೃಷಿಗೆ ಭೂಮಿ ಇಲ್ಲ. ನೌಕಾನೆಲೆಯಲ್ಲಿ ನಿರಾಶ್ರಿತರ ಕುಟುಂಬಗಳಿಗೆ ಉದ್ಯೋಗ ನೀಡಲಾಗುವುದು ಎಂಬ ಭರವಸೆ ಈಡೇರಿಲ್ಲ. ಯುವಕರಿಗೆ ಉದ್ಯೋಗವಿಲ್ಲ. ಈಗ ಸೀಬರ್ಡ್ ಎರಡನೇ ಹಂತದ ವಿಸ್ತರಣೆ ಕಾಮಗಾರಿ ನಡೆದಿದೆ. ನಮ್ಮ ಜಾಗದಲ್ಲೇ ವಿಮಾನ ನಿಲ್ದಾಣ ಮಾಡುವ ಯೋಜನೆಗೆ ರಕ್ಷಣಾ ಇಲಾಖೆ ಮುಂದಾಗಿದೆ. ಆದರೆ, ಎರಡನೇ ಹಂತದ ವಿಸ್ತರಣೆ ಕಾಮಗಾರಿಯಲ್ಲಿ ಕನಿಷ್ಠ ಕೂಲಿ ಕೆಲಸವನ್ನೂ ಸ್ಥಳೀಯ ನಿರಾಶ್ರಿತರಿಗೆ ನೀಡುತ್ತಿಲ್ಲ.ಈ ಸಂಬಂಧ ನೌಕಾನೆಲೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದರು. ಸಂಘಟನೆಯ ಗೌರವ ಅಧ್ಯಕ್ಷ ಸುನೀಲ ನಾಯ್ಕ ಹೊನ್ನೇಕೇರಿ, ಗ್ರಾಮಸ್ಥರಾದ ಸೋಮಿ ವೆಂಕಟರಮಣ ಗೌಡ, ರತ್ನಾಕರ ಗೌಡ, ಅಶೋಕ ಗೌಡ, ಆಯಿ ಸುಕ್ರು ಗೌಡ ಇತರರು ಪ್ರತಿಭಟನೆಯಲ್ಲಿದ್ದರು.

    ಹಾಲಕ್ಕಿ ಒಕ್ಕಲಿಗ ಸಮುದಾಯ ಜಿಲ್ಲೆಗೆ ಎರಡು ಪದ್ಮಶ್ರೀ ಪ್ರಶಸ್ತಿ ತಂದುಕೊಟ್ಟಿದೆ. ಆದರೆ, ಈ ಜನರಿಗೆ ಕನಿಷ್ಠ ಉದ್ಯೋಗ, ಮೂಲ ಸೌಕರ್ಯ ನೀಡುವ ಕಾರ್ಯವನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ಮಾಡುತ್ತಿಲ್ಲ ಎಂಬುದು ಬೇಸರದ ಸಂಗತಿ.
    | ಸೋಮಿ ಗೌಡ ಬೇಲೆಕೇರಿ ಸೀಬರ್ಡ್ ಕಾಲನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts